ಕುಂಜತ್ತೂರು: ಮನೆಗೆ ನುಗ್ಗಿ ಕಳವು
ಮಂಜೇಶ್ವರ, ಆ. 18: ಮಂಜೇಶ್ವರ ಠಾಣಾ ವ್ಯಾಪ್ತಿಯ ಕುಂಜತ್ತೂರು ಪದವು ಎಂಬಲ್ಲಿ ಮನೆಯೊಂದಕ್ಕೆ ನುಗ್ಗಿದ ಕಳ್ಳರು ಭಾರೀ ಪ್ರಮಾಣದ ಚಿನ್ನಾಭರಣ ಕಳವುಗೈದ ಘಟನೆ ಇಂದು ಬೆಳಿಗ್ಗೆ ಬೆಳಕಿಗೆ ಬಂದಿದೆ.
ಕುಂಜತ್ತೂರು ಪದವು ನಿವಾಸಿ ಸಯ್ಯದ್ ರವರ ಪುತ್ರ ಅಬ್ದುಲ್ ಮುನೀರ್ ಎಂಬವರ ಮನೆಯಲ್ಲಿ ಕಳ್ಳತನ ನಡೆದಿದೆ. ಕಳೆದ ರಾತ್ರಿ 3 ಘಂಟೆ ಸುಮಾರಿಗೆ ಕಳ್ಳತನ ನಡೆದಿದೆಯೆನ್ನಲಾಗಿದೆ. ಮನೆಯವರು ಎಚ್ಚರಗೊಂಡಾಗ ಕಳ್ಳತನ ನಡೆದಿರವುದು ಬೆಳಕಿಗೆ ಬಂದಿದೆ.
ಘಟನೆ ವಿವರ : ಮನೆಯ ಅಡುಗೆ ಕೋಣೆಯ ಬಾಗಿಲು ಮುರಿದು ಒಳ ನುಗ್ಗಿ ಕಳ್ಳತನ ನಡೆಸಲಾಗಿದೆ. ಮುನೀರ್ ಪತ್ನಿ ಹಾಗೂ ಮೂವರು ಮಕ್ಕಳು ಮಲಗಿದ್ದ ಕೋಣೆಯಲ್ಲಿನ ಕಪಾಟು ಮುರಿದ ಕಳ್ಳರ ತಂಡ 65 ಪವನ್ ಚಿನ್ನಾಭರಣ ಹಾಗೂ 70 ಸಾವಿರ ರೂ. ಮತ್ತು ಒಂದು ರೇಡೋ ವಾಚನ್ನು ಕಳವುಗೈದಿದ್ದಾರೆ. ಮಂಜೇಶ್ವರ ಠಾಣೆಯಲ್ಲಿ ದೂರು ದಾಖಲಾಗಿದೆ.
ಕುಂಬಳೆ ಸಿ.ಐ ಮನೋಜ್ ಮಂಜೇಶ್ವರ ಎಸ್.ಐ ಅನೂಪ್ ನೇತೃತ್ವದ ಪೋಲೀಸ್ ತಂಡ ಕಳ್ಳತನ ನಡೆದ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ. ಶ್ವಾನ ಧಳ, ಬೆರಳಚ್ಚು ತಜ್ಞರ ತಂಡ ಮಾಹಿತಿ ಕಲೆ ಹಾಕಿದೆ.
ಬಾಗಿಲನ್ನು ಅಗ್ಗದಿಂದ ಕಂಬಕ್ಕೆ ಕಟ್ಟಿದ ಕಳ್ಳರು : ಕಳ್ಳರ ತಂಡ ಕಳ್ಳತನ ನಡೆಸುವುದಕ್ಕಾಗಿ ಬಾಗಿಲನ್ನು ಹೊರಗಿನಿಂದ ಸಿಟೌಟ್ ನ ಕಂಬಕ್ಕೆ ಕಟ್ಟಿದ ರೀತಿಯಲ್ಲಿ ಕಂಡು ಬಂದಿದೆ. ಕಳ್ಳತನ ದ ಬಗ್ಗೆ ಮಂಜೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಕುಂಬಳೆ ವೃತ್ತ ನಿರೀಕ್ಷಕ ಮನೋಜ್ ನೇತೃತ್ವದ ಪೋಲೀಸ್ ತಂಡ ತನಿಖೆ ನಡೆಸುತ್ತಿದೆ.