×
Ad

‘ಒಬ್ಬರ ಅಂಗಾಂಗ ದಾನದಿಂದ 8 ಮಂದಿಗೆ ಬದುಕು ನೀಡಲು ಸಾಧ್ಯ’

Update: 2017-08-18 23:29 IST

ಮಣಿಪಾಲ, ಆ.18: ಇಂದು ಭಾರತದಲ್ಲಿ 2,00,000 ಮಂದಿಗೆ ಮೂತ್ರ ಪಿಂಡಗಳು ಮತ್ತು 30,000 ಮಂದಿಗೆ ಯಕೃತ್‌ಗಳ ಅಗತ್ಯವಿದ್ದು, ಆದರೆ ನಮ್ಮಲ್ಲಿ ಕೇವಲ 3ರಿಂದ 5ರಷ್ಟು ಮಾತ್ರ ದಾನ ಮಾಡಿದ ಅಂಗಾಂಗಳು ಇವೆ. ಒಬ್ಬ ವ್ಯಕ್ತಿಯು ತನ್ನ 8 ಅಂಗಗಳಲ್ಲಿ 8 ಇತರ ವ್ಯಕ್ತಿಗಳಿಗೆ ಬದುಕು ನೀಡಲು ಸಾಧ್ಯವಿದೆ ಎಂದು ಮಣಿಪಾಲ ವಿವಿಯ ಉಪಕುಲಪತಿ ಡಾ.ಎಚ್.ವಿನೋದ್ ಭಟ್ ತಿಳಿಸಿದ್ದಾರೆ.

ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ವತಿಯಿಂದ ಶುಕ್ರವಾರ ಮಣಿಪಾಲ ಶಿರ್ಡಿ ಸಾಯಿಬಾಬಾ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಆಯೋಜಿಸಲಾದ ಅಂಗಾಂಗ ದಾನ ದಿನಾಚರಣೆಯಲ್ಲಿ ಅವರು ಮಾತನಾಡುತಿದ್ದರು.

ಯಕೃತ್, ಮೂತ್ರಪಿಂಡಗಳು, ಕರುಳುಗಳು, ಹೃದಯ, ಮೂಳೆ ಮಜ್ಜೆ, ಶ್ವಾಸಕೊಶಗಳು ಮತ್ತು ಕೆಲವು ಸಂದರ್ಭಗಳಲ್ಲಿ ಚರ್ಮಗಳನ್ನು ಅಗತ್ಯವಿರುವ ರೊಗಿಗಳಿಗೆ ಯಶಸ್ವಿಯಾಗಿ ಜೋಡಿಸಬಹುದು. ಅಂಗ ದಾನವು ಶ್ರೇಷ್ಠ ದಾನ ವಾಗಿದೆ ಎಂದು ಅವರು ತಿಳಿಸಿದರು.

ನರಶಸ್ತ್ರ ಚಿಕಿತ್ಸೆ ವಿಭಾಗದ ಮುಖ್ಯಸ್ಥ ಡಾ.ಗಿರೀಶ್ ಮೆನನ್ ಅಂಗಾಂಗ ದಾನದ ಕುರಿತು ಮಾತನಾಡಿ, ಹೆಚ್ಚುತ್ತಿರುವ ಸಕ್ಕರೆ ಕಾಯಿಲೆ, ಅಸಮರ್ಪಕ ಜೀವನ ಶೈಲಿ, ಕಿಡ್ನಿ, ಯಕೃತ್ ಮತ್ತು ಹೃದಯ ವೈಫಲ್ಯತೆಯಿಂದಾಗಿ ಭಾರತ ದಲ್ಲಿ ಅಂಗಾಂಗಳಿಗೆ ಹೆಚ್ಚಿನ ಬೇಡಿಕೆ ಇದೆ. ಪ್ರತಿ ದಿನ ಒಂದು ಲಕ್ಷ ರೋಗಿ ಗಳಿಗೆ ಬದಲಿ ಅಂಗಾಂಗ ಜೋಡಣೆಯ ಅವಶ್ಯಕತೆ ಇದ್ದು, ಆದರೆ ನಮ್ಮಲ್ಲಿ ಕೇವಲ 100 ರೋಗಿಗಳಿಗೆ ಮಾತ್ರ ಅದು ಸಾಧ್ಯವಾಗುತ್ತಿದೆ ಎಂದರು.

ಕ್ಯಾನ್ಸರ್, ಎಚ್‌ಐವಿ ಪೀಡಿತರನ್ನು ಹೊರತು ಪಡಿಸಿ ವಯಸ್ಸು, ಲಿಂಗ, ಧರ್ಮದ ನಿರ್ಬಂಧವಿಲ್ಲದೆ ಯಾರು ಬೇಕಾದರೂ ಅಂಗಾಂಗವನ್ನು ದಾನ ಮಾಡಬಹುದಾಗಿದೆ. ಅಂಗ ದಾನ ಮಾಡುವ 7 ಮಂದಿಯಿಂದ ಸುಮಾರು 50 ಮಂದಿ ಮರು ಜೀವನ ನೀಡಬಹುದು ಎಂದು ಅವರು ತಿಳಿಸಿದರು.
 ನೇತ್ರ ವಿಭಾಗದ ಮುಖ್ಯಸ್ಥೆ ಸುಲತಾ ಭಂಡಾರಿ ನೇತ್ರದಾನದ ಕುರಿತು ಮಾಹಿತಿ ನೀಡಿ, ಕಣ್ಣಿನ ಪೊರೆ ಸಮಸ್ಯೆಯಿಂದಾಗಿ ದೇಶದ ಸುಮಾರು 40 ಲಕ್ಷ ಮಂದಿ ದೃಷ್ಟಿ ಕಳೆದುಕೊಂಡಿದ್ದಾರೆ. ನಮ್ಮಲ್ಲಿ ನೇತ್ರ ದಾನ ಮಾಡುವವರ ಸಂಖ್ಯೆ ತೀರಾ ಕಡಿಮೆಯಾಗಿದ್ದು, ಇದರಿಂದ ಅಗತ್ಯ ಇರುವವರಿಗೆ ಕಣ್ಣುಗಳು ಸಿಗು ತ್ತಿಲ್ಲ. ವ್ಯಕ್ತಿ ಮೃತಪಟ್ಟ ಆರು ಗಂಟೆಯೊಳಗೆ ಕಣ್ಣಿನ ದಾನ ಮಾಡಬೇಕಾಗುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಅಂಗಾಂಗ ಹಾಗೂ ನೇತ್ರದಾನಿಗಳ ಸಂಬಂಧಿಕರನ್ನು ಗೌರವಿಸಲಾಯಿತು. ಕೆಎಂಸಿ ಡೀನ್ ಡಾ.ಪ್ರಜ್ಞಾ ರಾವ್ ನೇತ್ರದಾನಿಗಳ ಸದಸ್ಯತ್ವದ ಕಾರ್ಡುಗಳನ್ನು ಬಿಡುಗಡೆ ಮಾಡಿದರು. ವಿವಿಯ ಸಹ ಉಪಕುಲಪತಿ ಡಾ.ಪೂರ್ಣಿಮಾ ಬಾಳಿಗ, ಕೆಎಂಸಿಯ ವೈದ್ಯಕೀಯ ಅಧೀಕ್ಷಕ ಡಾ.ದಯಾನಂದ, ವೈದ್ಯಕೀಯ ಉಪಾಧೀಕ್ಷಕ ಡಾ.ಪದ್ಮರಾಜ್ ಹೆಗ್ಡೆ ಮೊದ ಲಾದವು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News