×
Ad

ಅಮೆರಿಕದ ಕಾನೂನು ಸಂಸ್ಥೆಗಳಿಂದ ಇನ್ಫೋಸಿಸ್ ವಿರುದ್ಧ ತನಿಖೆ ಆರಂಭ

Update: 2017-08-19 19:00 IST

ಹೊಸದಿಲ್ಲಿ,ಆ.19: ಎನ್.ಆರ್.ನಾರಾಯಣ ಮೂರ್ತಿ ನೇತೃತ್ವದಲ್ಲಿ ಸ್ಥಾಪಕರು ತನ್ನ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆಂದು ಆರೋಪಿಸಿ ಸಿಇಒ ವಿಶಾಲ ಸಿಕ್ಕಾ ಅವರ ರಾಜೀನಾಮೆಯಿಂದ ಶುಕ್ರವಾರ ಭಾರೀ ಸುದ್ದಿ ಮಾಡಿದ್ದ, ತನ್ನ ಭಾರತೀಯ ಹೂಡಿಕೆದಾರರಿಗೆ 22,500 ಕೋ.ರೂ.ಗೂ ಅಧಿಕ ನಷ್ಟವನ್ನುಂಟು ಮಾಡಿರುವ ದೇಶದ ಪ್ರಮುಖ ಐಟಿ ಕಂಪನಿ ಇನ್ಫೋಸಿಸ್ ಈಗ ಹೊಸದೊಂದು ಬಿಕ್ಕಟ್ಟಿಗೆ ಸಿಲುಕಿದೆ. ಹೂಡಿಕೆದಾರರಿಗೆ ತಪ್ಪು ಮಾಹಿತಿಗಳನ್ನು ಒದಗಿಸಿದ್ದ ಮತ್ತು ಇತರ ಆರೋಪಗಳ ಹಿನ್ನೆಲೆಯಲ್ಲಿ ತಾವು ಇನ್ಫೋಸಿಸ್ ವಿರುದ್ಧ ತನಿಖೆಯನ್ನು ಆರಂಭಿಸಿರುವುದಾಗಿ ಆ ರಾಷ್ಟ್ರದ ನಾಲ್ಕು ಕಾನೂನು ಸಲಹಾ ಸಂಸ್ಥೆಗಳು ಶನಿವಾರ ತಿಳಿಸಿವೆ.

ಭಾರತದಲ್ಲಿ ಬಿಎಸ್‌ಇ ಮತ್ತು ಎನ್‌ಎಸ್‌ಇಗಳಲ್ಲಿ ವಹಿವಾಟಾಗುತ್ತಿರುವ ಇನ್ಫೋಸಿಸ್‌ನ್ ಅಮೆರಿಕನ್ ಡಿಪಾಸಿಟರಿ ಶೇರು(ಎಡಿಎಸ್)ಗಳು ನ್ಯೂಯಾರ್ಕ್ ಶೇರು ವಿನಿಮಯ ಕೇಂದ್ರದಲ್ಲಿಯೂ ಲಿಸ್ಟ್ ಆಗಿವೆ.

ಬ್ರೋಂಸ್ಟೀನ್, ಗೇವಿರ್ಜ್ ಆ್ಯಂಡ್ ಗ್ರಾಸ್‌ಮನ್, ರೋಸೆನ್ ಲಾ ಫರ್ಮ್, ಪೊಮೆರಾಂಝ್ ಲಾ ಫರ್ಮ್ ಆ್ಯಂಡ್ ಗೋಲ್ಡ್‌ಬರ್ಗ್ ಲಾ ಪಿಸಿ ಇವು ಇನ್ಫೋಸಿಸ್ ವಿರುದ್ಧ ತನಿಖೆಯನ್ನು ಆರಂಭಿಸಿರುವ ಅಮೆರಿಕದ ಕಾನೂನು ಸಲಹಾ ಸಂಸ್ಥೆಗಳಾಗಿವೆ.

ಇನ್ಫೋಸಿಸ್ ತನ್ನ ಹೂಡಿಕೆದಾರರಿಗೆ ಭ್ರಾಮಕ ಮಾಹಿತಿಗಳನ್ನು ನೀಡಿರಬಹುದು ಎಂಬ ಆರೋಪಗಳ ಬಗ್ಗೆ ತಾನು ತನಿಖೆಯನ್ನು ನಡೆಸುತ್ತಿದ್ದೇನೆ ಮತ್ತು ಹೂಡಿಕೆದಾರರು ಅನುಭವಿಸಿರುವ ನಷ್ಟ ಭರ್ತಿಗಾಗಿ ಅದರ ವಿರುದ್ಧ ಮೊಕದ್ದಮೆಯನ್ನು ಹೂಡಲು ತಯಾರಿ ನಡೆಸುತ್ತಿದ್ದೇನೆ ಎಂದು ರೋಸೆನ್ ಹೇಳಿಕೆಯಲ್ಲಿ ತಿಳಿಸಿದೆ.

ಇನ್ಫೋಸಿಸ್,ಅದರ ಕೆಲವು ಅಧಿಕಾರಿಗಳು ಮತ್ತು ನಿರ್ದೇಶಕರು ಅಮೆರಿಕದ ಶೇರು ಮಾರುಕಟ್ಟೆ ಕಾನೂನುಗಳನ್ನು ಉಲ್ಲಂಘಿಸಿದ್ದಾರೆಯೇ ಎಂಬ ಬಗ್ಗೆ ತನಿಖೆ ನಡೆಸುತ್ತಿರು ವುದಾಗಿ ಬ್ರೋಂಸ್ಟೀನ್ ಮತ್ತು ಗೋಲ್ಡ್‌ಬರ್ಗ್ ಹೇಳಿವೆ. ಪೊಮೆರಾಂಜ್ ಕೂಡ ಇದೇ ರೀತಿಯ ಹೇಳಿಕೆಯನ್ನು ನೀಡಿದೆ.

 ಶುಕ್ರವಾರ ಸಿಕ್ಕಾ ರಾಜೀನಾಮೆಯ ಬಳಿಕ ನ್ಯೂಯಾರ್ಕ್ ಶೇರು ವಿನಿಮಯ ಕೇಂದ್ರ ದಲ್ಲಿ ಇನ್ಫೋಸಿಸ್‌ನ ಶೇರುಗಳು ಪ್ರತಿ ಶೇರಿಗೆ 1.43 ಡಾ. ಅಥವಾ ಸುಮಾರು ಶೇ.9ರಷ್ಟು ಕುಸಿದಿದ್ದವು. ಭಾರತದಲ್ಲಿಯೂ ಅದರ ಶೇರುಗಳು ಸುಮಾರು ಶೇ.10ರಷ್ಟು ಕುಸಿದಿದ್ದು, ಹೂಡಿಕೆದಾರರು 22,518 ಕೋ.ರೂ.ಗಳನ್ನು ಕಳೆದುಕೊಂಡಿದ್ದಾರೆ.

ಶನಿವಾರದ ಬೆಳವಣಿಗೆಯಲ್ಲಿ ಇನ್ಫೋಸಿಸ್ ತನ್ನ ಪ್ರತಿ ಶೇರಿಗೆ 1,150 ರೂ.ನಂತೆ 13,000 ರೂ.ವೌಲ್ಯದ ಶೇರುಗಳನ್ನು ಮರುಖರೀದಿಸುವುದಾಗಿ ಘೋಷಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News