×
Ad

ದ್ರೋಣ ಪ್ರಶಸ್ತಿ ಪಟ್ಟಿಯಿಂದ ಒಬ್ಬರನ್ನು ತೆಗೆದು ಹಾಕಿದ ಸರಕಾರ,ಅರ್ಜುನ ಪಟ್ಟಿ ಅಬಾಧಿತ

Update: 2017-08-19 19:37 IST

ಹೊಸದಿಲ್ಲಿ,ಆ.19: ಈ ವರ್ಷದ ದ್ರೋಣಾಚಾರ್ಯ ಪ್ರಶಸ್ತಿಗೆ ಆಯ್ಕೆಯಾಗಿರುವವರ ಪಟ್ಟಿಯಿಂದ ಪ್ಯಾರಾ ಸ್ಪೋರ್ಟ್ಸ್ ಕೋಚ್ ಸತ್ಯನಾರಾಯಣ ಅವರನ್ನು ಕ್ರೀಡಾ ಸಚಿವಾಲಯವು ಕೈಬಿಟ್ಟಿದೆ. ಅವರ ವಿರುದ್ಧ ಕ್ರಿಮಿನಲ್ ಮಾನಹಾನಿ ಪ್ರಕರಣ ವಿಚಾರಣೆಗೆ ಬಾಕಿಯುಳಿದಿರುವ ಹಿನ್ನೆಲೆಯಲ್ಲಿ ಅದು ಈ ನಿರ್ಧಾರವನ್ನು ಕೈಗೊಂಡಿದೆ. ಉಳಿದಂತೆ ಖೇಲ್‌ರತ್ನ ಮತ್ತು ಅರ್ಜುನ ಪ್ರಶಸ್ತಿಗಳಿಗೆ ಶಿಫಾರಸು ಮಾಡಲಾಗಿರುವವರ ಪಟ್ಟಿಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

ಸರಕಾರದ ನಿರ್ಧಾರದಿಂದ ಟೆನ್ನಿಸ್ ಆಟಗಾರ ರೋಹನ್ ಬೋಪಣ್ಣ ಮತ್ತು ವೇಟ್‌ಲಿಫ್ಟರ್ ಸಂಜಿತಾ ಚಾನು ಅವರು ಅರ್ಜುನ ಪ್ರಶಸ್ತಿಗಳನ್ನು ಪಡೆಯುವ ಭಾಗ್ಯದಿಂದ ವಂಚಿತರಾಗಿದ್ದಾರೆ. ಅವರಿಬ್ಬರ ಹೆಸರುಗಳನ್ನು ವಿಳಂಬವಾಗಿ ಶಿಫಾರಸು ಮಾಡಲಾಗಿತ್ತು.

ಸತ್ಯನಾರಾಯಣ ಅವರು ಮೊದಲು ಪ್ರಕರಣದಿಂದ ಕಳಂಕಮುಕ್ತರಾಗಬೇಕು. ಆಗ ಮಾತ್ರ ಅವರ ಹೆಸರನ್ನು ಪ್ರಶಸ್ತಿಗೆ ಪರಿಗಣಿಸಲಾಗುವುದು ಎಂದು ಕ್ರೀಡಾ ಸಚಿವಾಲ ಯದ ಅಧಿಕಾರಿಗಳು ಸ್ಪಷ್ಟಪಡಿಸಿದರು.

ಸತ್ಯನಾರಾಯಣ ಅವರು ರಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕವನ್ನು ಗೆದ್ದಿದ್ದ ಪ್ಯಾರಾಲಿಂಪಿಕ್ ಎತ್ತರ ಜಿಗಿತ ಪಟು ಮಾರಿಯಪ್ಪನ್ ತಂಗವೇಲು ಅವರನ್ನು ತರಬೇತು ಗೊಳಿಸಿದ್ದರು.

ಕೆಲವು ಅಸೂಯಾಪರ ವ್ಯಕ್ತಿಗಳು ತನ್ನ ವಿರುದ್ಧ ಅಪಪ್ರಚಾರದಲ್ಲಿ ತೊಡಗಿದ್ದಾರೆ ಮತ್ತು ಕಳಂಕಮುಕ್ತನಾಗಲು ತನಗೆ ಅವಕಾಶ ನೀಡಬೇಕು ಎಂದು ಕೋರಿ ಸತ್ಯನಾರಾಯಣ ಅವರು ಆ.13ರಂದು ಕ್ರೀಡಾ ಸಚಿವಾಲಯಕ್ಕೆ ಪತ್ರ ಬರೆದಿದ್ದರು.

ಸತ್ಯನಾರಾಯಣ ಅವರಿಗೆ ದ್ರೋಣಾಚಾರ್ಯ ಪ್ರಶಸ್ತಿಗೆ ಶಿಫಾರಸು ಮಾಡಿ ಮಾರಿಯಪ್ಪನ್ ಅವರೂ ಸಚಿವಾಲಯಕ್ಕೆ ಪತ್ರ ಬರೆದಿದ್ದರು. ಆದರೆ ಸತ್ಯನಾರಾಯಣರ ಹೆಸರಿಗೆ ಆಕ್ಷೇಪವನ್ನು ವ್ಯಕ್ತಪಡಿಸಿ ಕ್ಲೀನ್ ಸ್ಪೋರ್ಟ್ಸ್ ಇಂಡಿಯಾದ ಅಶ್ವಿನಿ ನಾಚಪ್ಪಾ ಅವರು ಆ.6ರಂದು ಸಚಿವಾಲಯಕ್ಕೆ ಅಹವಾಲು ಸಲ್ಲಿಸಿದ್ದರು.

ಕ್ರೀಡಾ ಸಚಿವ ವಿಜಯ ಗೋಯೆಲ್ ಅವರು ಕಡತಕ್ಕೆ ಸಹಿ ಹಾಕಿದ ಬಳಿಕ ಕಳೆದ ರಾತ್ರಿ ಎಲ್ಲ ವಿಜೇತರಿಗೆ ಇಮೇಲ್ ಮೂಲಕ ಮಾಹಿತಿಗಳನ್ನು ನೀಡಲಾಗಿತ್ತು. ಕ್ರೀಡಾ ಸಚಿವಾಲಯದಿಂದ ನೇಮಕಗೊಂಡಿದ್ದ ನ್ಯಾ(ನಿವೃತ್ತ).ಸಿ.ಕೆ.ಠಕ್ಕರ್ ನೇತೃತ್ವದ ಆಯ್ಕೆ ಸಮಿತಿ ಯು ಇಬ್ಬರು ಪ್ಯಾರಾ-ಅಥ್ಲೀಟ್‌ಗಳು ಸೇರಿದಂತೆ 17 ಜನರ ಹೆಸರು ಗಳನ್ನು ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಿತ್ತು. ದೇಶದ ಅತ್ಯುನ್ನತ ಕ್ರೀಡಾ ಗೌರವವಾಗಿರುವ ಖೇಲ್‌ರತ್ನ ಪ್ರಶಸ್ತಿಗೆ ಹಾಕಿ ಆಟಗಾರ ಸರ್ದಾರ್ ಸಿಂಗ್ ಮತ್ತು ರಿಯೊ ಪ್ಯಾರಾಲಿಂಪಿಕ್ಸ್ ಚಿನ್ನದ ಪದಕ ವಿಜೇತ ದೇವೇಂದ್ರ ಝಝರಿಯಾ ಅವರನ್ನು ನಾಮಕರಣ ಮಾಡಿದೆ.

ಸಮಿತಿಯ ಶಿಫಾರಸುಗಳನ್ನೇ ಅಂತಿಮಗೊಳಿಸಲು ಕ್ರೀಡಾ ಸಚಿವಾಲಯವು ನಿರ್ಧರಿಸಿದ್ದು, ಪಟ್ಟಿಗೆ ಹೆಸರುಗಳನ್ನು ಸೇರಿಸುವ ವಿವೇಚನಾಧಿಕಾರ ತನಗಿದ್ದರೂ ಗೋಯೆಲ್ ಅದನ್ನು ಬಳಸಿಕೊಂಡಿಲ್ಲ.

 ಖೇಲ್‌ರತ್ನ ಪಟ್ಟಿಯಲ್ಲಿ ದೀಪಾ ಮಲಿಕ್ ಅವರ ಹೆಸರನ್ನು ಸೇರ್ಪಡೆಗೊಳಿಸುವಂತೆ ಹರ್ಯಾಣ ಮುಖ್ಯಮಂತ್ರಿ ಮನೋಹರಲಾಲ್ ಖಟ್ಟರ್ ಅವರು ಗೋಯೆಲ್‌ರನ್ನು ಕೋರಿಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News