ನನ್ನನ್ನು ಹುದ್ದೆಯಿಂದ ತೆಗೆದು ಹಾಕಲು ಸ್ಮೃತಿ ಇರಾನಿ ಕಾರಣ: ಪಹಲಾಜ್ ನಿಹಲಾನಿ
ಹೊಸದಿಲ್ಲಿ, ಆ.19: ಕೇಂದ್ರೀಯ ಸೆನ್ಸಾರ್ ಮಂಡಳಿ ಅಧ್ಯಕ್ಷ ಸ್ಥಾನದಿಂದ ತನ್ನನ್ನು ವಜಾಗೊಳಿಸಿದ ಒಂದು ವಾರದ ನಂತರ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪಹಲಾಜ್ ನಿಹಲಾನಿ, ‘ಇಂದು ಸರ್ಕಾರ್’ ಚಿತ್ರದ ಕೆಲ ದೃಶ್ಯಗಳಿಗೆ ಕತ್ತರಿ ಹಾಕಿದ್ದರಿಂದ ತನ್ನನ್ನು ಗುರಿ ಮಾಡಲಾಗಿದೆ. ಮಾಹಿತಿ ಮತ್ತು ಪ್ರಸಾರ ಸಚಿವೆ ಸ್ಮೃತಿ ಇರಾನಿ ತನ್ನನ್ನು ಹುದ್ದೆಯಿಂದ ತೆಗೆದು ಹಾಕಲು ಕಾರಣ ಎಂದು ಹೇಳಿದ್ದಾರೆ.
"ನನ್ನನ್ನು ಹುದ್ದೆಯಿಂದ ತೆಗೆದು ಹಾಕಲು ಇಂದು ಸರ್ಕಾರ್ ಮುಖ್ಯ ಕಾರಣವಾಗಿದೆ. ಚಿತ್ರವನ್ನು ಕಟ್ ಗಳಿಲ್ಲದೆ ಮುಂದುವರಿಯಲು ಅವಕಾಶ ನೀಡದ ಕಾರಣ ನನ್ನನ್ನು ವಜಾಗೊಳಿಸಲಾಗಿದೆ" ಎಂದರು.
ತನ್ನ ಸೇವಾವಧಿಯಲ್ಲಿ ನಿಹಲಾನಿ ಚಿತ್ರಗಳ ಮೇಲೆ ನೈತಿಕ ಪೊಲೀಸ್ ಗಿರಿ ಮಾಡುತ್ತಾರೆ ಹಾಗೂ ಹಲವು ಕಟ್ ಗಳನ್ನು ಮಾಡುತ್ತಾರೆ ಎನ್ನುವ ಆರೋಪವಿತ್ತು.
ಕಳೆದ ವರ್ಷ ಬಿಡುಗಡೆಯಾಗಿದ್ದ ಪಂಜಾಬ್ ನ ಡ್ರಗ್ ಸಮಸ್ಯೆಯ ಮೇಲೆ ಕೇಂದ್ರೀಕೃತವಾಗಿದ್ದ ‘ಉಡ್ತಾ ಪಂಜಾಬ್’ಗೆ ಸೆನ್ಸಾರ್ 94 ಕಟ್ ಗಳನ್ನು ಆದೇಶಿಸಿತ್ತು. ಈ ಚಿತ್ರದ ಬಿಡುಗಡೆಗೆ ಅವಕಾಶ ನೀಡಬಾರದು ಎಂದು ಸಚಿವಾಲಯ ಹೇಳಿತ್ತು ಎನ್ನುತ್ತಾರೆ ನಿಹಲಾನಿ.
ಟೈಟಲ್ ಕಾರಣದಿಂದಾಗಿ ಸಲ್ಮಾನ್ ಖಾನ್ ಅಭಿನಯದ ‘ಭಜರಂಗಿ ಭಾಯ್ ಜಾನ್’ ಚಿತ್ರವನ್ನು ಸಹ ಬಿಡುಗಡೆ ಮಾಡಬಾರದು ಎಂದು ಸಚಿವಾಲಯ ಒತ್ತಡ ಹೇರಿತ್ತು. “ಸಚಿವಾಲಯದಿಂದ ನನಗೆ ಕರೆ ಬಂತು ಹಾಗೂ ಈದ್ ಗೆ ಆ ಚಿತ್ರವನ್ನು ಬಿಡುಗಡೆ ಮಾಡಲು ಬಿಡಬಾರದು ಎಂದು ಹೇಳಲಾಯಿತು. ಅದರ ಟೈಟಲ್ ನಿಂದಾಗಿ ಆ ಚಿತ್ರ ‘ಲವ್ ಜಿಹಾದ್ ‘ಗೆ ಸಂಬಂಧಿಸಿದ್ದು ಎಂದು ಸಚಿವಾಲಯ ಭಾವಿಸಿತ್ತು. ನಾನು ಆ ಮೊದಲೇ ಆ ಚಿತ್ರದ ಸ್ಕ್ರಿಪ್ಟ್ ಅನ್ನು ಕೇಳಿದ್ದೆ. ಚಿತ್ರವನ್ನು ವೀಕ್ಷಿಸುವಂತೆ ನಾನು ಸಚಿವಾಲಯಕ್ಕೆ ಪತ್ರ ಬರೆದೆ” ಎಂದಿದ್ದಾರೆ ನಿಹಲಾನಿ.