ಹಳಿತಪ್ಪಿದ ಉತ್ಕಲ್ ಎಕ್ಸ್‌ಪ್ರೆಸ್ ರೈಲು: ಕನಿಷ್ಠ 10 ಮಂದಿ ಮೃತಪಟ್ಟಿರುವ ಶಂಕೆ

Update: 2017-08-19 15:16 GMT

ಮುಝಫ್ಫರ್ ನಗರ, ಆ.19: ಉತ್ತರಪ್ರದೇಶದ ಮುಝಫ್ಫರ್ ನಗರ ಜಿಲ್ಲೆಯಲ್ಲಿ ಪುರಿ-ಹರಿದ್ವಾರ್-ಉತ್ಕಲ್ ಎಕ್ಸ್‌ಪ್ರೆಸ್ ರೈಲಿನ 6 ಬೋಗಿಗಳು ಹಳಿತಪ್ಪಿ ಸಂಭವಿಸಿದ ಅವಘಡದಲ್ಲಿ ಕನಿಷ್ಠ 10 ಮಂದಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಮಹಿಳೆಯರು, ಮಕ್ಕಳು ಸೇರಿದಂತೆ 70ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು, ದುರಂತಕ್ಕೆ ಸಂಬಂಧಿಸಿ ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ಉನ್ನತಮಟ್ಟದ ತನಿಖೆಗೆ ಆದೇಶಿಸಿದ್ದಾರೆ.

ಒಡಿಶಾದ ಪುರಿಯಿಂದ ಉತ್ತರಾಖಂಡದ ಹರಿದ್ವಾರಕ್ಕೆ ಪ್ರಯಾಣಿಸುತ್ತಿದ್ದ ರೈಲು ಮುಝಫ್ಫರ್ನಗರದ ಕತೌಲಿ ಎಂಬಲ್ಲಿ ಹಳಿ ತಪ್ಪಿತೆಂದು ರೈಲ್ವೆ ಇಲಾಖೆಯ ಮೂಲಗಳು ತಿಳಿಸಿವೆ. ಹಳಿತಪ್ಪಿದ ಬೋಗಿಗಳಲ್ಲೊಂದು ರೈಲುಹಳಿಯ ಪಕ್ಕದಲ್ಲೇ ಇರುವ ಮನೆಗಳಿಗೆ ಅಪ್ಪಳಿಸಿ ಬಿದ್ದಿರುವುದಾಗಿ ಮೂಲಗಳು ತಿಳಿಸಿವೆ. ಸಾವಿನ ಸಂಖ್ಯೆ ಇನ್ನೂ ಏರಿಕೆಯಾಗುವ ಭೀತಿಯಿರುವುದಾಗಿ ಅವು ಹೇಳಿವೆ.

ಹಳಿತಪ್ಪಿದ ಬೋಗಿಗಳಲ್ಲಿದ್ದ 100ಕ್ಕೂ ಅಧಿಕ ಪ್ರಯಾಣಿಕರನ್ನು ಪಾರು ಮಾಡಲಾಗಿದೆ. ಅಪಘಾತದ ಬಳಿಕ ಸ್ಥಳೀಯ ನಿವಾಸಿಗಳು ತಕ್ಷಣವೇ ಧಾವಿಸಿ ಬೋಗಿಗಳ ನಡುವೆ ಸಿಲುಕಿಕೊಂಡವರನ್ನು ರಕ್ಷಿಸಲು ನೆರವಾದರು. ಅಪಘಾತದಲ್ಲಿ ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ರೈಲು ಅಪಘಾತಕ್ಕೀಡಾದ ಪ್ರದೇಶದಲ್ಲಿ ರಕ್ಷಣಾ ಹಾಗೂ ಪರಿಹಾರ ಕಾರ್ಯಾಚರಣೆಗಳನ್ನು ತ್ವರಿತಗೊಳಿಸುವಂತೆ ರೈಲ್ವೆ ಸಚಿವ ಸುರೇಶ್ ಪ್ರಭು, ಹಿರಿಯ ಅಧಿಕಾರಿಗಳಿಗೆ ಆದೇಶಿಸಿದ್ದಾರೆ. ರೈಲು ಅವಘಡದಲ್ಲಿ ಸಂಭವಿಸಿರುವ ಸಾವುನೋವಿನ ನಿಖರ ಸಂಖ್ಯೆ ಇನ್ನೂ ಖಚಿತವಾಗಿ ತಿಳಿದುಬಂದಿಲ್ಲ. ಜಿಲ್ಲಾಡಳಿತವು ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಿದ್ದು, ದಿಲ್ಲಿಯಿಂದ ರಾಷ್ಟ್ರೀಯ ವಿಪತ್ತು ಪ್ರಕ್ರಿಯಾ ಪಡೆ (ಎನ್‌ಡಿಆರ್‌ಎಫ್)ಯ ತಂಡಗಳನ್ನು ಅವಘಡದ ಸ್ಥಳಕ್ಕೆ ರವಾನಿಸಲಾಗಿದೆ.

ರೈಲು ಅವಘಡದಿಂದಾಗಿ ಉತ್ತರ ರೈಲ್ವೆ ಮಾರ್ಗದ ಹಲವಾರು ರೈಲುಗಳ ಸಂಚಾರ ಅಡ್ಡಿಯುಂಟಾಗಿರುವುದಾಗಿ ಅಧಿಕೃತ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News