ಆ.20ರಂದು ಪೇಜಾವರ ಶ್ರೀಗೆ ಶಸ್ತ್ರಚಿಕಿತ್ಸೆ
ಉಡುಪಿ, ಆ.19: ಕಳೆದೊಂದು ವರ್ಷದಿಂದ ಬಾಧಿಸುತ್ತಿರುವ ಹರ್ನಿಯಾ ನೋವಿಗೆ ಪರ್ಯಾಯ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥರು ಆ. 20ರಂದು ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೊಳಗಾಗಲಿದ್ದಾರೆ ಎಂದು ತಿಳಿದುಬಂದಿದೆ.
ಹರ್ನಿಯಾ ನೋವನ್ನು ಹೊರತು ಪಡಿಸಿದರೆ ಪೇಜಾವರ ಶ್ರೀ ಲವಲವಿಕೆಯಿಂದ ಇದ್ದು, ದೈನಂದಿನ ಪೂಜಾಕೈಂಕರ್ಯಗಳಲ್ಲಿ ಭಾಗಿಯಾಗಿದ್ದಾರೆ. ಇಂದು ಕೂಡಾ ಪರ್ಯಾಯ ಶ್ರೀ ನಡೆಸುವ ಎಲ್ಲಾ ಪೂಜೆಗಳಲ್ಲಿ ಅವರು ಭಾಗಿಯಾಗಿದ್ದರೆಂದು ಮಠದ ಮೂಲಗಳು ತಿಳಿಸಿವೆ.
ವೈದ್ಯರ ಸಲಹೆ ಹಾಗೂ ಅಷ್ಟಮಠಗಳ ಉಳಿದ ಸ್ವಾಮೀಜಿಗಳ ಒತ್ತಾಸೆಗೆ ಮಣಿದು ಸ್ವಾಮೀಜಿ ಚಿಕಿತ್ಸೆಗೆ ಒಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ರವಿವಾರ ಮಹಾಪೂಜೆಯ ಬಳಿಕ ಆಸ್ಪತ್ರೆಗೆ ತೆರಳುವ ಸ್ವಾಮೀಜಿ, ಒಂದು ದಿನ ಆಸ್ಪತ್ರೆಯಲ್ಲಿದ್ದು ಮರಳಿ ಬರುವರು. ಇದೊಂದು ಸಣ್ಣ ಶಸ್ತ್ರಚಿಕಿತ್ಸೆಯಾಗಿದ್ದು, ಯಾವುದೇ ಆತಂಕ ಬೇಡ ಎಂದು ಮಠದ ಆಡಳಿತ ತಿಳಿಸಿದೆ.
ಆರೋಗ್ಯದ ತುರ್ತು ವಿಷಯವಾದ್ದರಿಂದ, ಅಷ್ಟಮಠಗಳ ಉಳಿದ ಸ್ವಾಮೀಜಿ ಗಳ ಒತ್ತಾಯದಿಂದ ಪರ್ಯಾಯಶ್ರೀ ಮಠದಿಂದ ತೆರಳಲು ಒಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಉಡುಪಿ ಶ್ರೀ ಕೃಷ್ಣ ಮಠದ ಸಂಪ್ರದಾಯದಂತೆ ಪರ್ಯಾಯ ಪೀಠವೇರಿದ ಬಳಿಕ ಸ್ವಾಮೀಜಿ, ಎರಡು ವರ್ಷಗಳ ಕಾಲ ಮಠದ ಪರಿಸರ ಬಿಟ್ಟು ಹೊರಗೆ ಕಾಲಿಡುವಂತಿಲ್ಲ.