×
Ad

‘ಕಲೆ ಮತ್ತು ಮಾನವತೆ ಸಮಿತಿ’ಯ 16 ಸದಸ್ಯರ ರಾಜೀನಾಮೆ

Update: 2017-08-19 21:39 IST

ವಾಶಿಂಗ್ಟನ್, ಆ. 19: ಕಳೆದ ವಾರ ಶಾರ್ಲಟ್ಸ್‌ವಿಲ್ಸ್‌ನಲ್ಲಿ ನಡೆದ ಹಿಂಸಾಚಾರದ ಬಗ್ಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಳೆದಿರುವ ನಿಲುವನ್ನು ವಿರೋಧಿಸಿ ‘ಕಲೆ ಮತ್ತು ಮಾನವತೆ ಕುರಿತ ಅಧ್ಯಕ್ಷರ ಸಮಿತಿ’ಯ 16 ಸದಸ್ಯರು ಶುಕ್ರವಾರ ರಾಜೀನಾಮೆ ನೀಡಿದ್ದಾರೆ. ಅವರ ಪೈಕಿ ಇಬ್ಬರು ಭಾರತೀಯ ಅಮೆರಿಕನ್ನರಾದ ನಟ ಕಾಲ್ ಪೆನ್ ಮತ್ತು ಝುಂಪಾ ಲಾಹಿರಿ ಸೇರಿದ್ದಾರೆ.

‘‘ನಿಮ್ಮ ದ್ವೇಷಪೂರಿತ ಮಾತುಗಳನ್ನು ಉಪೇಕ್ಷಿಸಿದರೆ, ನಿಮ್ಮ ಮಾತುಗಳು ಮತ್ತು ಕೃತ್ಯಗಳಲ್ಲಿ ನಾವೂ ಶಾಮೀಲಾದಂತೆ ಆಗುತ್ತದೆ’’ ಎಂದು ಜಂಟಿ ರಾಜೀನಾಮೆ ಪತ್ರವೊಂದರಲ್ಲಿ ಅವರು ಹೇಳಿದ್ದಾರೆ.

ಈ ರಾಜೀನಾಮೆ ಪತ್ರಕ್ಕೆ ಸಮಿತಿಯ 17 ಸದಸ್ಯರ ಪೈಕಿ 16 ಮಂದಿ ಸಹಿ ಹಾಕಿದ್ದಾರೆ. ಅಮೆರಿಕದ ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್ ಸಮಿತಿಯ ಗೌರವ ಅಧ್ಯಕ್ಷೆಯಾಗಿದ್ದಾರೆ.

‘‘ಜನಾಂಗೀಯ ಶ್ರೇಷ್ಠತೆ, ತಾರತಮ್ಯ ಮತ್ತು ವಿಷ ಕಾರುವುದು ಅಮೆರಿಕದ ವೌಲ್ಯಗಳಲ್ಲ. ನಿಮ್ಮ ವೌಲ್ಯಗಳು ಅಮೆರಿಕದ ವೌಲ್ಯಗಳಲ್ಲ. ನಾವು ಇದಕ್ಕಿಂತ ಮೇಲಿರಬೇಕು. ನಾವು ಇದಕ್ಕಿಂತ ಮೇಲಿದ್ದೇವೆ. ಇದು ನಿಮಗೆ ಅರ್ಥವಾಗದಿದ್ದರೆ, ನಿಮ್ಮ ಹುದ್ದೆಗೂ ರಾಜೀನಾಮೆ ನೀಡಿ ಅಂತ ನಾವು ನಿಗೆ ಕರೆ ನೀಡುತ್ತೇವೆ’’ ಎಂದು ರಾಜೀನಾಮೆ ಪತ್ರ ಹೇಳಿದೆ.

ಕಳೆದ ವಾರಾಂತ್ಯದಲ್ಲಿ ‘ಬಿಳಿಯರು ಶ್ರೇಷ್ಠರು’ ಎಂದು ಪ್ರತಿಪಾದಿಸುವ ಗುಂಪೊಂದು ನಡೆಸಿದ ಸಭೆಯಲ್ಲಿ ಉಂಟಾದ ಹಿಂಸಾಚಾರಕ್ಕೆ ಎಲ್ಲ ಗುಂಪುಗಳು ಕಾರಣ ಎಂಬುದಾಗಿ ಟ್ರಂಪ್ ಹೇಳಿದ್ದರು.

‘ಬಿಳಿಯರು ಶ್ರೇಷ್ಠರು’ ಎಂದು ಪ್ರತಿಪಾದಿಸುವ ಗುಂಪು ಏರ್ಪಡಿಸಿದ ಸಭೆಯಲ್ಲಿ ಜನಾಂಗೀಯ ವಿರೋಧಿ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದರು. ಆಗ ಉಭಯ ಗುಂಪುಗಳ ನಡುವೆ ಸಂಘರ್ಷ ಏರ್ಪಟ್ಟಿತ್ತು. ‘ಬಿಳಿಯರು ಶ್ರೇಷ್ಠರು’ ಎಂದು ಪ್ರತಿಪಾದಿಸುವ ಗುಂಪಿನ ಒಬ್ಬ ಸದಸ್ಯನು ಪ್ರತಿಭಟನಕಾರರ ಮೇಲೆ ಕಾರೊಂದನ್ನು ಹರಿಸಿದ್ದನು. ಈ ದಾಳಿಯಲ್ಲಿ ಓರ್ವ ಮಹಿಳೆ ಮೃತಪಟ್ಟಿದ್ದಾರೆ.

ಕಲೆ ಮತ್ತು ಮಾನವತೆ ಸಮಿತಿಯನ್ನು 1982ರಲ್ಲಿ ರೊನಾಲ್ಡ್ ರೇಗನ್ ಅಧ್ಯಕ್ಷರಾಗಿದ್ದಾಗ ಸ್ಥಾಪಿಸಲಾಗಿತ್ತು. ಅದರ ಈಗಿನ ಎಲ್ಲ ಸದಸ್ಯರನ್ನು ಹಿಂದಿನ ಅಧ್ಯಕ್ಷ ಬರಾಕ್ ಒಬಾಮ ನೇಮಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News