ಎಂಆರ್‌ಪಿಎಲ್‌ಗೆ 3,644 ಕೋಟಿ ರೂ. ದಾಖಲೆಯ ಲಾಭಗಳಿಕೆ: ದಿನೇಶ್ ಕೆ ಸರಾಫ್‌

Update: 2017-08-19 16:12 GMT

ಮಂಗಳೂರು, ಆ.19: ಒಎನ್‌ಜಿಸಿಯ ಅಂಗ ಸಂಸ್ಥೆಯಾದ ಎಂಆರ್‌ಪಿಎಲ್ 2016-17ನೆ ಸಾಲಿನಲ್ಲಿ 3,644 ಕೋಟಿ ರೂ. ಲಾಭಗಳಿಸುವುದರೊಂದಿಗೆ ದಾಖಲೆ ನಿರ್ಮಿಸಿದೆ ಎಂದು ಸಂಸ್ಥೆಯ ಅಧ್ಯಕ್ಷ ದಿನೇಶ್ ಕೆ. ಸರಾಫ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಮಂಗಳೂರು ರಿಫೈನರಿ ಹಾಗೂ ಪಟ್ರೋಲಿಯಂ ಲಿಮಿಟೆಡ್‌ನ 29 ವಾರ್ಷಿಕ ಸಾಮಾನ್ಯ ಸಭೆ ನಡೆಸಿದ ಬಳಿಕ ಅವರು ಇಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದರು.

ಕಂಪೆನಿ 2015-16ರಲ್ಲಿ 50,864 ಕೋಟಿ ರೂ. ಆರ್ಥಿಕ ವ್ಯವಹಾರ ನಡೆಸಿತ್ತು. 1,148 ಕೋಟಿ ರೂ. ನಿವ್ವಳ ಲಾಭಗಳಿಸಿದೆ.

2016-17ರಲ್ಲಿ 59,415 ಕೋಟಿ ರೂ. ಆರ್ಥಿಕ ವ್ಯವಹಾರ ನಡೆಸಿದೆ. 2014-15ರಲ್ಲಿ ಕಂಪೆನಿ 1,712 ಕೋಟಿ ರೂ. ನಷ್ಟ ಅನುಭವಿಸಿತ್ತು. 2016-17ರಲ್ಲಿ ಕಂಪೆನಿಯ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಗರಿಷ್ಠ ಲಾಭವನ್ನು ದಾಖಲಿಸಿದೆ. ಈ ಪ್ರಯುಕ್ತ ಕಂಪೆನಿಯ ಶೇರುದಾರರಿಗೆ ಗರಿಷ್ಠ ಲಾಭಾಂಶವನ್ನು ನೀಡಲು ಕಂಪೆನಿ ತೀರ್ಮಾನಿಸಿದೆ. ಪ್ರತಿ 10 ರೂಪಾಯಿಯ ಇಕ್ವಿಟಿ ಶೇರುದಾರರಿಗೆ 6 ರೂ. ಡಿವಿಡೆಂಡ್ ನೀಡಲು ನಿರ್ಧರಿಸಲಾಗಿದೆ ಎಂದು ದಿನೇಶ್ ಸರಾಫ್ ತಿಳಿಸಿದ್ದಾರೆ.

ಈ ವರ್ಷ 16.27 ಮಿಲಿಯನ್ ಮೆಟ್ರಿಕ್ ಟನ್ ಕಚ್ಚಾತೈಲ ಸಂಸ್ಕರಣೆಯೊಂದಿಗೆ ಗರಿಷ್ಠ ಪ್ರಮಾಣದ ಕಚ್ಚಾತೈಲವನ್ನು ಸಂಸ್ಕರಿಸಲಾಗಿದೆ. 2015-16ರಲ್ಲಿ 15.69 ಮಿಲಿಯನ್ ಮೆಟ್ರಿಕ್‌ಟನ್ ಕಚ್ಚಾತೈಲ ಸಂಸ್ಕರಣ ನಡೆಸಲಾಗಿದೆ. ಕಳೆದ ಬಾರಿಗೆ ಹೋಲಿಸಿದಾಗ ಈ ಬಾರಿ 3.69 ಶೇ. ಹೆಚ್ಚುವರಿ ಕಚ್ಚಾ ತೈಲ ಸಂಸ್ಕರಣೆ ನಡೆದಿದೆ.

2014ರ ಹೊತ್ತಿಗೆ 50 ರೂ. ಇದ್ದ ಶೇರು ಬೆಲೆ 2017ರ ಜೂ. 30ರ ವೇಳೆಗೆ 118.10 ರೂ.ಗೆ ಏರಿಕೆಯಾಗಿದೆ ಎಂದು ದಿನೇಶ್ ಸರಾಫ್ ತಿಳಿಸಿದ್ದಾರೆ.

ಕಂಪೆನಿ 2017-18ನೆ ಸಾಲಿನಲ್ಲಿ ಸಾಮಾಜಿಕ ಕಲ್ಯಾಣ, ಶಿಕ್ಷಣ, ಆರೋಗ್ಯ, ನೈರ್ಮಲ್ಯ ಮತ್ತು ಸ್ಥಳೀಯ ಪ್ರದೇಶಗಳ ಮೂಲಭೂತ ಸೌಕರ್ಯ ವೃದ್ಧಿಗೆ 33.87 ಕೋಟಿ ರೂ. ವಿನಿಯೋಗಿಸಲಿದೆ. ಹಾಲಿ ವರ್ಷದಲ್ಲಿ 1.45 ಕೋಟಿ ರೂ. ವಿನಿಯೋಗಿಸಲಾಗಿದೆ ಎಂದು ದಿನೇಶ್ ಸರಾಫ್ ತಿಳಿಸಿದ್ದಾರೆ.

ಮುಂದಿನ ಯೋಜನೆ

ಎಪ್ರಿಲ್ 2020ರ ವೇಳೆಗೆ ಬಿ.ಎಸ್-6 ಮಾದರಿಯ ಪೆಟ್ರೋಲಿಯಂ ಉತ್ಪನ್ನಕ್ಕಾಗಿ ಕಂಪೆನಿ 1810 ಕೋಟಿ ರೂ. ವಿನಿಯೋಗಿಸಲಿದೆ. ಪ್ರಸಕ್ತ ಸಿಸಿಆರ್ ಘಟಕವನ್ನು ಮೇಲ್ದರ್ಜೆಗೇರಿಸಲಾಗಿದೆ. 2017ರ ಸೆಪ್ಟೆಂಬರ್ ವೇಳೆಗೆ ಘಟಕ ಸಾಮರ್ಥ್ಯ ವೃದ್ಧಿಸಲು 207.5 ಕೋಟಿ ರೂ. ವಿನಿಯೋಗಿಸಲಾಗುವುದು ಎಂದು ದಿನೇಶ್ ಸರಾಫ್ ತಿಳಿಸಿದ್ದಾರೆ.

ಕರ್ನಾಟಕದಲ್ಲಿ ಒಎನ್‌ಜಿಸಿ ಪೆಟ್ರೋಲಿಯಂ ಉತ್ಪನ್ನಗಳ ಮಾರುಕಟ್ಟೆ ವಿಸ್ತರಣೆಗೆ 8 ಮಳಿಗೆಗಳನ್ನು ಆರಂಭಿಸಲಿದೆ ಎಂದು ದಿನೇಶ್ ಸರಾಫ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಒಎನ್‌ಜಿಸಿ ಹಣಕಾಸು ವಿಭಾಗದ ನಿರ್ದೇಶಕ ಎ.ಕೆ. ಶ್ರೀನಿವಾಸನ್, ಎಂಆರ್‌ಪಿಎಲ್‌ನ ವ್ಯವಸ್ಥಾಪಕ ನಿರ್ದೇಶಕ ಎಚ್. ಕುಮಾರ್, ರಿಫೈನರಿ ವಿಭಾಗದ ನಿರ್ದೇಶಕ ಎಂ.ವೆಂಕಟೇಶ, ಹಣಕಾಸು ವಿಭಾಗದ ನಿರ್ದೇಶಕ ಎ.ಕೆ. ಸಾಹು ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News