ಗಂಡನ ಮನೆಯಲ್ಲಿ ಕಿರುಕುಳ ಆರೋಪ: ವಿಷ ಸೇವಿಸಿದ್ದ ಮಹಿಳೆ ಮೃತ್ಯು
ಮಂಗಳೂರು, ಆ. 19: ಗಂಡನ ಮನೆಯಲ್ಲಿ ಕಿರುಕುಳದಿಂದ ಮನನೊಂದು ವಿಷಸೇವನೆ ಮಾಡಿದ್ದ ಮಹಿಳೆಯೊಬ್ಬರು ಚಿಕಿತ್ಸೆ ಫಲಿಸದೆ ಮೃತಪಟ್ಟ ಘಟನೆ ವಳಚ್ಚಿಲ್‌ನಲ್ಲಿ ನಡೆದಿದೆ.
ಮೃತ ಮಹಿಳೆಯನ್ನು ವಳಚ್ಚಿಲ್ ನಿವಾಸಿ ಶಮೀನಾ (25) ಎಂದು ಗುರುತಿಸಲಾಗಿದೆ.
ಮೂಲತಃ ಗುರುಪುರ ನಿವಾಸಿಯಾಗಿರುವ ಶಮೀನಾ ವಳಚ್ಚಿಲ್‌ನ ಇಕ್ಬಾಲ್ ಎಂಬವರೊಂದಿಗೆ ಮದುವೆ ಮಾಡಿಕೊಡಲಾಗಿತ್ತು. ದಂಪತಿಗೆ ಒಂದು ಮಗುವಿದೆ. ಇಕ್ಬಾಲ್ ವಿದೇಶದಲ್ಲಿ ಉದ್ಯೋಗಿಯಾಗಿದ್ದಾರೆ. ಅತ್ತೆ ಬಿ. ಫಾತಿಮಾ ಮಾನಸಿಕ ಹಿಂಸೆ ನೀಡುತ್ತಿದ್ದಾರೆಂದು ಶಮೀನಾ ಆರೋಪಿಸಿದ್ದರು. ಇದರಿಂದ ತೀವ್ರವಾಗಿ ನೊಂದುಕೊಂಡಿದ್ದ ಶಮೀನಾ ಆ. 8ರಂದು ಐಸ್‌ಕ್ರೀಂ ಜತೆ ವಿಷ ಸೇವನೆ ಮಾಡಿದ್ದು, ಆ.10ರಿಂದ ವಾಂತಿ ಆರಂಭವಾಗಿತ್ತು. ಈ ಬಗ್ಗೆ ಶಮೀನಾ ತನ್ನ ತಾಯಿಗೆ ಕರೆ ಮಾಡಿ ತನಗೆ ಮನೆಗೆ ಕರೆದುಕೊಂಡು ಹೋಗುವಂತೆ ಹೇಳಿದ್ದಾರೆ. ಬಳಿಕ ಅವರನ್ನು ಆ.11ರಂದು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆ.12ರಿಂದ ಕೋಮಾವಸ್ಥೆಯಲ್ಲಿದ್ದ ಅವರು ಆ.18ರಂದು ಮೃತಪಟ್ಟಿದ್ದಾರೆ.
ಈ ಬಗ್ಗೆ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.