ಎರ್ಮಾಳು: ನಿಂತಿದ್ದ ಲಾರಿಗೆ ಟೆಂಪೊ ಢಿಕ್ಕಿ; ಓರ್ವ ಮೃತ್ಯು, ಮೂವರಿಗೆ ಗಾಯ
Update: 2017-08-19 22:19 IST
ಕಾಪು, ಆ.19: ಹೆದ್ದಾರಿ ಪಕ್ಕದಲ್ಲಿ ನಿಲ್ಲಿಸಿದ್ದ ಲಾರಿಗೆ ಹಿಂಬದಿಯಿಂದ ಮೀನು ಸಾಗಾಟದ ಟೆಂಪೊ ಢಿಕ್ಕಿ ಹೊಡೆದ ಪರಿಣಾಮ ಲಾರಿ ಚಾಲಕ ಮೃತಪಟ್ಟು, ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ಪಡುಬಿದ್ರೆ ಠಾಣೆ ವ್ಯಾಪ್ತಿಯ ಎರ್ಮಾಳು ಬುದಗಿ ಪೆಟ್ರೋಲ್ ಬಂಕ್ ಬಳಿ ನಡೆದಿದೆ.
ಮಂಗಳೂರಿನಿಂದ ಉಡುಪಿಯತ್ತ ಮೀನು ಹೇರಿಕೊಂಡು ಸಾಗುತ್ತಿದ್ದ ಈಚರ್ ಟೆಂಪೊ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ನಿಂತಿದ್ದ ಲಾರಿಗೆ ಢಿಕ್ಕಿ ಹೊಡೆದ ಪರಿಣಾಮ ಮುಂಭಾಗದಲ್ಲಿದ್ದ ಮತ್ತೊಂದು ಲಾರಿಯ ಪಕ್ಕದಲ್ಲಿ ನಿಂತಿದ್ದ ಲಾರಿಯ ಚಾಲಕ ಮೃತಪಟ್ಟಿದ್ದು, ಲಾರಿಯೊಳಗಿದ್ದ ಇಬ್ಬರು ಹಾಗು ಟೆಂಪೊ ಚಾಲಕ ಗಂಭೀರ ಗಾಯಗೊಂಡಿದ್ದಾರೆ.
ಗಾಯಾಳುಗಳನ್ನು ಸ್ಥಳೀಯರು ತಕ್ಷಣ ಆಸ್ಪತ್ರೆಗೆ ಸಾಗಿಸುವಲ್ಲಿ ಸಹಕರಿಸಿದ್ದಾರೆ. ಘಟನೆಯಿಂದಾಗಿ ಹೆದ್ದಾರಿಯಲ್ಲಿ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿದ್ದು, ಟೆಂಪೊದಲ್ಲಿದ್ದ ಮೀನು ರಸ್ತೆಯುದ್ದಕ್ಕೂ ಚೆಲ್ಲಿದೆ.
ಈ ಬಗ್ಗೆ ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.