ಸ್ವಾತಂತ್ರ್ಯ ಹೋರಾಟದಿಂದ ವಿಮುಖರಾದವರಿಂದ ದೇಶಪ್ರೇಮದ ಪಾಠ ಹಾಸ್ಯಾಸ್ಪದ: ಅಡ್ವೊಕೇಟ್ ಮಜೀದ್ ಖಾನ್

Update: 2017-08-19 17:16 GMT

ಮಂಗಳೂರು, ಆ. 19: ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ಅದರಿಂದ ವಿಮುಖರಾಗಿ ಮುಚ್ಚಳಿಕೆ ಬರೆದು ಕೊಟ್ಟ ಜನರಿಂದು ನಮಗೆ ದೇಶಪ್ರೇಮದ ಪಾಠ ಕಲಿಸುತ್ತಿದ್ದಾರೆ. ಇದು ಹಾಸ್ಯಾಸ್ಪದವಾಗಿದೆಯೆಂದು ಎಸ್ ಡಿ ಪಿ ಐ ರಾಜ್ಯ ಸಮಿತಿ ಸದಸ್ಯ ಅಡ್ವೊಕೇಟ್ ಮಜೀದ್ ಖಾನ್ ಹೇಳಿದ್ದಾರೆ.

ಅವರು  ಗುರುಪುರ ಕೈಕಂಬದಲ್ಲಿ ಎಸ್ ಡಿ ಪಿ ಐ ವತಿಯಿಂದ ದೇಶದಾದ್ಯಂತ ನಡೆಯುತ್ತಿರುವ ಗುಂಪು ಹಿಂಸೆಯ ವಿರುದ್ಧ ಜನಜಾಗೃತಿ ಅಭಿಯಾನವಾದ "ಗುಂಪು ಹಿಂಸೆಯನ್ನು ಪ್ರತಿರೋಧಿಸೋಣ" ಕಾರ್ಯಕ್ರಮದ ಬೃಹತ್ ಸಮಾವೇಶವನ್ನುದ್ದೇಶಿಸಿ ಮಾತನಾಡುತ್ತಿದ್ದರು.

ಮುಖ್ಯ ಭಾಷಣಕಾರರಾಗಿದ್ದ ಎಸ್ ಡಿ ಪಿ ಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ತುಂಬೆ ಮಾತನಾಡುತ್ತಾ ಮೋದಿ ಆಡಳಿತಕ್ಕೆ ಬಂದ ನಂತರದ ಪ್ರತಿ ಗುಂಪು ಹಿಂಸೆಯಿಂದ ಹತ್ಯೆಗೈಯ್ಯಲ್ಪಟ್ಟವರ ಕುರಿತು ಸಂಕ್ಷಿಪ್ತವಾಗಿ ಮಾಹಿತಿ ನೀಡಿದರು. ಅವರು ಈ ಎಲ್ಲಾ ಕುಟುಂಬಗಳನ್ನು ಖುದ್ದಾಗಿ ಭೇಟಿ ಮಾಡಿ ಅಹವಾಲುಗಳನ್ನು ಕೇಳಿ ತಿಳಿದುಕೊಂಡಿದ್ದಾಗಿ ತಿಳಿಸಿದರು.

ಕಾರ್ಯಕ್ರಮದ ಮೊದಲು ಕ್ಷೇತ್ರದ ವಿವಿಧ ಕಡೆಗಳಿಂದ ಕಾರ್ಯಕರ್ತರು ರ್ಯಾಲಿ ಮೂಲಕ ಕೈಕಂಬಕ್ಕೆ ಬಂದಿದ್ದರು.  ಐಕ್ಯಗಾನದ ಮೂಲಕ ಪ್ರಾರಂಭಗೊಂಡ ಕಾರ್ಯಕ್ರಮದಲ್ಲಿ ಎ ಎಂ ಅಥಾವುಲ್ಲಾ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.  ವೇದಿಕೆಯಲ್ಲಿ ಉಡುಪಿಯ ಕ್ರೈಸ್ತ ಧರ್ಮಗುರುಗಳೂ ಮತ್ತು ಖ್ಯಾತ ಮಾನವ ಹಕ್ಕುಗಳ ಕಾರ್ಯಕರ್ತರಾದ ರೆ.  ಫಾ ವಿಲಿಯಂ ಮಾರ್ಟಿಝ್,  ಮುಸ್ಲಿಂ ಧರ್ಮಗುರುಗಳು ಮತ್ತು ಇಮಾಮ್ ಕೌನ್ಸಿಲ್'ನ ರಾಜ್ಯ ಕಾರ್ಯದರ್ಶಿ ಜಾಫರ್ ಸಾದಿಕ್ ಫೈಝಿ,  ಪಿ ಎಫ್ ಐ ಜಿಲ್ಲಾಧ್ಯಕ್ಷ ನವಾಝ್ ಉಳ್ಳಾಲ್  ಎಸ್.,  ಕ್ಷೇತ್ರಾಧ್ಯಕ್ಷ ಜಮಾಲ್ ಜೋಕಟ್ಟೆ,  ರಾಜ್ಯ ಸಮಿತಿ ಸದಸ್ಯ ಅಡ್ವೊಕೇಟ್ ಮಜೀದ್ ಖಾನ್, ಅಬೂಬಕ್ಕರ್ ಪುತ್ತ ಮತ್ತು ಜಿಲ್ಲಾ ಕಾರ್ಯದರ್ಶಿ ಅಶ್ರಫ್ ಮಂಚಿ ಹಾಜರಿದ್ದರು. ಗ್ರಾಮ ಪಂ. ಸದಸ್ಯರುಗಳಾದ ಶೋಭ,  ಕುಸುಮ, ಉಮೈರತ್,  ನಝೀರ್ ಬಜ್ಪೆ,  ಫರ್ವೀಝ್ ಜೋಕಟ್ಟೆ ಮತ್ತು ಸಲಾಂ ಸೂರಿಂಜೆ ಸೇರಿದಂತೆ ಇತರೆ ಗಣ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News