ವಾಟ್ಸಪ್ ಗ್ರೂಪ್ ಐಕಾನ್ ಬದಲಾಯಿಸಿದಕ್ಕೆ ಹಲ್ಲೆ
ಕುಂದಾಪುರ, ಆ.19: ವಾಟ್ಸಪ್ ಗ್ರೂಪ್ ಐಕಾನ್ ಬದಲಾಯಿಸಿದ ಕಾರಣಕ್ಕಾಗಿ ಬ್ಯಾಟಿನಿಂದ ಹಲ್ಲೆ ನಡೆಸಿ ಗಾಯಗೊಳಿಸಿರುವ ಘಟನೆ ಚೋಣಗುಡ್ಡೆ ರಸ್ತೆಯಲ್ಲಿ ಅಂಗನವಾಡಿ ಬಳಿ ನಡೆದಿದೆ.
ಹಲ್ಲೆಗೊಳಗಾದವರನ್ನು ಬಳ್ಕೂರು ಗ್ರಾಮದ ದೊಡ್ಮನೆಬೆಟ್ಟು ನಿವಾಸಿ ನಾಗರಾಜ್ ಮೊಗವೀರ ಎಂಬವರ ಪುತ್ರ ಪ್ರವೀಣ್ ಪುನೀತ್(23) ಎಂದು ಗುರುತಿಸಲಾಗಿದೆ. ಇವರು ಬ್ರಿಲಿಯಂಟ್ ಬಾಯ್ಸಿ ಎಂಬ ವಾಟ್ಸಾಪ್ ಗ್ರೂಪಿನ ಹೆಸರನ್ನು ಸ್ವಾತಂತ್ರ ದಿನಾಚರಣೆಯಂದು ಭಾರತಾಂಬೆಯ ಮಕ್ಕಳು ಎಂದು ಬದಲಿಸಿದ್ದರು. ಈ ವಿಚಾರದಲ್ಲಿ ಗ್ರೂಪಿನಲ್ಲಿ ಸಾಕಷ್ಟು ಚರ್ಚೆಗಳು ನಡೆದಿದ್ದವು.
ಪ್ರವೀಣ ಪುನೀತ್ ಬಳ್ಕೂರು ಬಿ.ಎಚ್.ಜಂಕ್ಷನ್‌ನಿಂದ ಮನೆಯ ಕಡೆಗೆ ನಡೆದುಕೊಂಡು ಹೋಗುತ್ತಿರುವಾಗ ಚೋಣಗುಡ್ಡೆಯಲ್ಲಿ ರಾಜೇಶ್ ಎಂಬಾತ ಬೈಕಿನಲ್ಲಿ ಬಂದು ಪ್ರವೀಣ್‌ನನ್ನು ತಡೆದು ನಿಲ್ಲಿಸಿ ವಾಟ್ಸಾಪ್ ಗ್ರೂಪ್‌ನ ಐಕಾನ್ ಬದಲಾಯಿಸಿರುವುದನ್ನು ಪ್ರಶ್ನಿಸಿ ಕ್ರಿಕೆಟ್ ಬ್ಯಾಟಿನಿಂದ ಹೊಡೆದು ಪರಾರಿಯಾಗಿದ್ದಾನೆ.
ಇದರಿಂದ ತೀವ್ರವಾಗಿ ಗಾಯಗೊಂಡಿರುವ ಪ್ರವೀಣ್ ನನ್ನು ಕುಂದಾಪುರ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.