×
Ad

ಕಾಮಿಡಿ ಪ್ರೀಮಿಯರ್ ಲೀಗ್‌ನ ‘ಜರ್ಸಿ’ ಬಿಡುಗಡೆ-ಲೋಗೋ ಅನಾವರಣ

Update: 2017-08-20 19:51 IST

ಮಂಗಳೂರು, ಆ. 20: 'ವಿ4 ನ್ಯೂಸ್ ಚಾನೆಲ್' ನಗರದ ಪ್ರವಾಸಿ ತಾಣವಾದ ಹವಾನ ಐಲ್ಯಾಂಡ್ ಮತ್ತು ವಿಕಾಸ ಶಿಕ್ಷಣ ಸಂಸ್ಥೆಯ ಸಹಯೋಗದಲ್ಲಿ ಕ್ರಿಕೆಟ್ ಪ್ರೀಮಿಯರ್ ಲೀಗ್ ಮಾದರಿಯಲ್ಲಿ ಸಾಂಸ್ಕೃತಿಕ ಸ್ಪರ್ಧೆ (ಹಾಸ್ಯದ ತುಣುಕುಗಳು)ಯನ್ನು ಆಯೋಜಿಸಿದೆ.

ಆ. 31ರಿಂದ 8 ತಂಡಗಳ ಮಧ್ಯೆ ನಡೆಯುವ ಈ ‘ರಿಯಲ್ ಮಿಕ್ಸ್ ಸಿಪಿಎಲ್’ ಸ್ಪರ್ಧೆಗಾಗಿ ಸಿಪಿಎಲ್‌ನ ‘ಜರ್ಸಿ’ ಬಿಡುಗಡೆ ಮತ್ತು ‘ಲೋಗೋ’ ಅನಾವರಣ ಕಾರ್ಯಕ್ರಮವು ರವಿವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಜರಗಿತು.

8 ತಂಡಗಳ ಮಾಲಕರಾದ ಶಾಸಕ ಮೊಯ್ದಿನ್ ಬಾವಾ, ಬಿಜೆಪಿ ನಾಯಕ ವೇದವ್ಯಾಸ ಕಾಮತ್, ಪ್ಲಾನೆಟ್ ಜಿ ಸಂಸ್ಥೆಯ ಮಾಲಕರಾದ ಗುರುದತ್ ಕಾಮತ್ ಮತ್ತು ಅವರ ಪುತ್ರ ರಾಹುಲ್ ಕಾಮತ್, ಜೆಡಿಎಸ್ ಮುಖಂಡ ಮೂಡುಬಿದಿರೆಯ ಅಶ್ವಿನ್ ಪಿರೇರಾ, ಜುಗಾರಿ ಚಿತ್ರದ ನಿರ್ಮಾಪಕಿ ಪಮ್ಮಿ ಕೊಡಿಯಾಲ್‌ಬೈಲ್ ಮತ್ತು ಚಿತ್ರ ನಿರ್ಮಾಪಕ ಆರ್. ಧನರಾಜ್, ಹ್ಯಾವನ್ ರೋಸ್ ಸಂಸ್ಥೆಯ ಮಾಲಕ ಮುಸ್ತಫಾ ಪ್ರೇಮಿ, ಗ್ಲಿಡ್ಸ್ ಎಂಟರ್‌ಟೈನ್‌ಮೆಂಟ್‌ನ ದೀಪ್ತಿ ಸುವರ್ಣ, ಶಾರದಾ ಪ್ರಿಂಟರ್ಸ್‌ನ ಮಾಲಕ ಕೃಷ್ಣ ಶೆಟ್ಟಿ ಮತ್ತವರ ಪುತ್ರ ಕೀರ್ತನ್ ಶೆಟ್ಟಿ ತಮ್ಮ ತಂಡಗಳ ‘ಜರ್ಸಿ’ ಬಿಡುಗಡೆಗೊಳಿಸಿ, ಲೋಗೋ ಅನಾವರಣಗೊಳಿಸಿದರು. ಅಲ್ಲದೆ, ಟೀಮ್‌ಗಳ ಪರಿಚಯ ಮಾಡಿಕೊಟ್ಟರು.

ಈ ಸಂದರ್ಭ ವಿ4 ಚಾನೆಲ್‌ನ ಆಡಳಿತ ನಿರ್ದೇಶಕ ಲಕ್ಷ್ಮಣ್ ಕುಂದರ್ ಮತ್ತು ಉದ್ಯಮಿ ದುರ್ಗಪ್ರಸಾದ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

8 ತಂಡದ ಮಧ್ಯೆ ಹಣಾಹಣಿ

ಪ್ರೀಮಿಯರ್ ಲೀಗ್ ಸ್ಪರ್ಧೆಯ ತಂಡಗಳನ್ನು ಅಂತಿಮಗೊಳಿಸುವ ಮುನ್ನ ಎರಡು ಪೂರ್ವಭಾವಿ ಸ್ಪರ್ಧೆ ನಡೆಸಲಾಗಿತ್ತು. ಆರಂಭದಲ್ಲಿ ದ.ಕ., ಉಡುಪಿ, ಕಾಸರಗೋಡು ಜಿಲ್ಲೆಯ 25 ತಂಡಗಳು ಸ್ಪರ್ಧಿಸಿತ್ತು. ಅದರಲ್ಲಿ ಉತ್ತಮ ಪ್ರದರ್ಶನ ನೀಡಿದ 16 ತಂಡಗಳನ್ನು ಆಯ್ಕೆ ಮಾಡಲಾಯಿತು. ಈ ತಂಡಗಳ ಮಧ್ಯೆ ಆಂತರಿಕ ಸ್ಪರ್ಧೆ ನಡೆಸಿ 8 ತಂಡವನ್ನು ಅಂತಿಮ ಸುತ್ತಿನ ಸ್ಪರ್ಧೆಗೆ ಆಯ್ಕೆ ಮಾಡಲಾಗಿದೆ.

5 ಲಕ್ಷ ರೂ. ಮೊತ್ತದ ಸ್ಪರ್ಧೆಗಾಗಿ 8 ತಂಡಗಳು 1 ತಿಂಗಳು ಸೆಣಸಾಡಲಿವೆ. ಇದು ಕ್ರಿಕೆಟ್ ಪ್ರೀಮಿಯರ್ ಲೀಗ್ ಮಾದರಿಯಲ್ಲೇ ನಡೆಯಲಿದೆ. ಅಂದರೆ, ಇದು ಪಕ್ಕಾ ಕಾಮಿಡಿಯಾದರೂ ಕೂಡ ಕಾಮಿಡಿ ಪಂಚ್‌ಗಳ ರನ್ ಆಧಾರದಲ್ಲಿ ಅಂಕ ಬೀಳಲಿದೆ. 1 ತಂಡಕ್ಕೆ 15 ನಿಮಿಷಗಳ ಪ್ರದರ್ಶನಕ್ಕೆ ಅವಕಾಶ ನೀಡಲಾಗುತ್ತದೆ.

ಆ. 31ಕ್ಕೆ ಚಾಲನೆ

ಆ. 31ರಂದು ಮಧ್ಯಾಹ್ನ 12ಕ್ಕೆ ಕೊಟ್ಟಾರ ಚೌಕಿಯಲ್ಲಿರುವ ಕರಾವಳಿ  ಕಾಲೇಜಿನಲ್ಲಿ ಮೊದಲ ಸ್ಪರ್ಧೆ ನಡೆಯಲಿದ್ದು, ಕರಾವಳಿ ಶಿಕ್ಷಣ ಸಂಸ್ಥೆಯ ಗಣೇಶ್ ರಾವ್ ಇದರ ಪ್ರಯೋಜಕರಾಗಿದ್ದಾರೆ.

2ನೆ ಸ್ಪರ್ಧೆಯು ಸೆ.13ರಂದು ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ನಡೆಯಲಿದ್ದು, ಉದ್ಯಮಿ ಅಶ್ವಿನ್ ಪಿರೇರಾ ಇದರ ಪ್ರಯೋಜಕರಾಗಿದ್ದಾರೆ.

3ನೆ ಸ್ಪರ್ಧೆಯು ಸೆ.29ರಂದು ಬಂಟ್ವಾಳದ ದಸರಾ ಸಂಭ್ರಮದಲ್ಲಿ ನಡೆಯಲಿದ್ದು, ಬಂಟ್ವಾಳದ ವಿಎನ್‌ಆರ್ ಗೋಲ್ಡ್ ಚಿನ್ನಾಭರಣ ಸಂಸ್ಥೆಯು ಇದರ ಪ್ರಯೋಜಕತ್ವ ವಹಿಸಿದೆ.

4ನೆ ಸ್ಪರ್ಧೆಯು ಮುಲ್ಕಿ ಬಪ್ಪನಾಡು ಕ್ಷೇತ್ರದ ಸಭಾಭವನದಲ್ಲಿ ನಡೆಯಲಿದ್ದು, ಸಿಪಿಎಲ್ ಮಾಲಕ ಕೃಷ್ಣ ಶೆಟ್ಟಿ ಮತ್ತು ಕೀರ್ತನ್ ಶೆಟ್ಟಿ ಪ್ರಯೋಜಕರಾಗಿದ್ದಾರೆ.

5ನೆ ಸ್ಪರ್ಧೆಯು ಉಡುಪಿ ಶಾಮಿಲಿ ಸಭಾಂಗಣದಲ್ಲಿ ನಡೆಯಲಿದ್ದು, ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರಯೋಜಕತ್ವ ವಹಿಸಲಿದೆ.

6ನೆ ಸ್ಪರ್ಧೆಯು ನಗರದ ಫೋರಂ ಫಿಝಾ ಮಾಲ್‌ನಲ್ಲಿ ನಡೆಯಲಿದ್ದು ಶಾಸಕ ಮೊಯ್ದಿನ್ ಬಾವಾ ಪ್ರಯೋಜಕರಾಗಿದ್ದಾರೆ.

ಸೆಮಿ ಮತ್ತು ಫೈನಲ್ ಪಂದ್ಯಾಟ ನಗರದ ಪವಾನ ಐಲ್ಯಾಂಡ್‌ನಲ್ಲಿ ನಡೆಯಲಿದೆ.

ಭಾಗವಹಿಸುವ ತಂಡಗಳು

ಮಂಗಳೂರು ಯುನೈಟೆಡ್ ಹರಿಣಿ, ಡಿವಿಕೆ ಫ್ರೆಂಡ್ಸ್, ಪ್ಲಾನೆಟ್ ಜಿ ವೈಷ್ಣವಿ, ಐಕೇರ್ ಕಲಾವಿದೆರ್ ಬೆದ್ರ, ಜುಗಾರಿ ಜಾಲಿ ಫ್ರೆಂಡ್ಸ್, ಹ್ಯಾವನ್ ರೋಸ್ ಕಲಾಶ್ರೀ, ಗ್ಲಿಡ್ಸ್ ಕುಡ್ಲ ಕುಸಾಲ್, ಟೀಮ್ ಮುಲ್ಕಿ ಸಾಕ್ಷಿ ತಂಡಗಳು ಕಾಮಿಡಿ ಪ್ರೀಮಿಯರ್ ಲೀಗ್‌ನಲ್ಲಿ ಭಾಗವಹಿಸಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News