ಬೆಳ್ತಂಗಡಿ: ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಘಟಕ ಉದ್ಘಾಟನೆ, ಸಾಹಿತ್ಯ ಸಮ್ಮೇಳನ
ಬೆಳ್ತಂಗಡಿ, ಆ. 20: ಜ್ಞಾನ ಸಂಪಾದನೆಯಿಂದ ವ್ಯಕ್ತಿಯ ಹಾಗೂ ದೇಶದ ಉನ್ನತಿ ಸಾಧ್ಯ. ಮಲೀನ ಮನಸ್ಸುಗಳಿಂದ ದೇಶ ಕಟ್ಟಲು ಸಾಧ್ಯವಿಲ್ಲ ಎಂದು ಸಾಹಿತಿ, ಕರ್ನಾಟಕ ವಿಧಾನ ಪರಿಷತ್ ಮಾಜಿ ಸದಸ್ಯ ಕರ್ನಾಟಕ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ದೊಡ್ಡರಂಗೇ ಗೌಡ ಹೇಳಿದರು.
ಅವರು ರವಿವಾರ ಉಜಿರೆಯ ಶ್ರೀ ಶಾರದಾ ಮಂಟಪದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಬೆಳ್ತಂಗಡಿ ತಾಲೂಕು ಘಟಕದ ಉದ್ಘಾಟನೆ ಮತ್ತು ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಭಾರತೀಯ ಸಂಸ್ಕೃತಿಯ ಪ್ರಚಾರ ದೇಶದ ಮೂಲೆ ಮೂಲೆಗಳಲ್ಲಿ ಆಗಬೇಕು. ವಿದೇಶಗಳಲ್ಲಿ ಯಾವುದೇ ಒಪ್ಪಂದಗಳು ನಡೆದರೂ ಭಾರತೀಯ ಸನಾತನ ಸಂಸ್ಕೃತಿಗೆ ಅಪಾಯವಿಲ್ಲ. ಇದರ ಬೇರು ಭದ್ರವಾಗಿದೆ. ಭಾರತದ ಯೋಗ, ಆಯುರ್ವೇದ ಮಹತ್ವವನ್ನು ವಿದೇಶದಲ್ಲಿ ಕೊಂಡಾಡಬೇಕಾದರೆ ಭಾರತಕ್ಕೆ ಎಷ್ಟು ಮೌಲ್ಯವಿದೆ ಎಂದು ಕಾಣಬಹುದು. ಯುವಜನತೆ ಭಾರತ ಮಾತೆ, ಭಾರತ ಧ್ವಜಕ್ಕೆ ಮತ್ತು ದೇಶಕಾಯುವ ಯೋದರಿಗೆ ಗೌರವ ನೀಡಿದಾಗ ಭಾರತ ಬಲಿಷ್ಠವಾಗಲು ಸಾಧ್ಯ. ಇಂದು ದೇಹ ಗಟ್ಟಿಗೊಳಿಸುವುದನ್ನು ಬಿಟ್ಟು ಶುದ್ಧ ಮನಸ್ಸನ್ನು ಬೆಳೆಸಿದಾಗ ದೇಶ ಸುಂದರವಾಗುತ್ತದೆ. ಜ್ಞಾನ ಸಂಪರ್ಕದಿಂದ ವ್ಯಕ್ತಿಯ, ದೇಶದ ಉನ್ನತಿಯಾಗುತ್ತದೆ. ವೈಜ್ಞಾನಿಕತೆಯನ್ನು ಬೆಳೆಸುವ ಮೊದಲು ನಮ್ಮ ಅಂತರಾತ್ಮವನ್ನು ಶುಚಿಗೊಳಿಸಬೇಕು ಎಂದರು.
ಪರಿಷತ್ ಘಟಕವನ್ನು ಉದ್ಘಾಟಿಸಿ ಮಾತನಾಡಿದ ಪತ್ರಕರ್ತ ಹರಿಪ್ರಕಾಶ್ ಕೋಣೆಮನೆ ಭಾವನೆಗಳನ್ನು ಅರಳಿಸುವ ಕಾರ್ಯ ಸಾಹಿತ್ಯದಿಂದ ಆಗುತ್ತಿದ್ದು ಜೊತೆಗೆ ಭಾಷೆಯು ಸಮೂಹ ಮಾದ್ಯಮವಾಗಿ ಬೆಳೆಯುತ್ತಿದೆ ಎಂಬುದನ್ನು ಭಾವಿಸಬೇಕು. ಇಂದು ಭಾಷಾ ವಿಚಾರದಲ್ಲಿ ದೇಶವನ್ನು ಮತ್ತು ಜಾತೀಯತೆ ಯನ್ನು ಒಡೆಯುವ ಕಾರ್ಯವಾಗುತ್ತಿರುವುದು ವಿಷಾದನೀಯ. ಸಾಹಿತ್ಯ ಒಡೆಯುವ ಮನಸ್ಸುಗಳನ್ನು ಒಗ್ಗೂಡಿಸುವ ಕಾರ್ಯ ಮಾಡುತ್ತಿರುವುದು ಅಭಿನಂದನೀಯ ಎಂದರು.
ಕರ್ನಾಟಕ ಅಖಿಲ ಭಾರತೀಯ ಸಾಹಿತ್ಯ ಪರಿಷತ್‌ನ ಪ್ರಧಾನ ಕಾರ್ಯದರ್ಶಿ ರಘುನಂದನ್ ಭಟ್ ದಿಕ್ಸೂಚಿ ಭಾಷಣ ಮಾಡಿದರು, ಇದೇ ಸಂದರ್ಭದಲ್ಲಿ ಹಿರಿಯರಾದ ಭೋಜರಾಜ ಹೆಗ್ಡೆ ಪಡಂಗಡಿ ಭಾಷಾಂತರಿಸಿದ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು. ಉಜಿರೆ ಜನಾರ್ದನ ಸ್ವಾಮಿ ದೇವಸ್ಥಾನದ ಅನುವಂಶಿಕ ಆಡಳಿತ ಮುಕ್ತೇಸರ ಯು. ವಿಜಯರಾಘವ ಪಡ್ವೆಟ್ನಾಯ ಶುಭ ಹಾರೈಸಿದರು. ತಾಲೂಕು ಸಾಹಿತ್ಯ ಪರಿಷತ್‌ನ ಗೌರವಾಧ್ಯಕ್ಷ ಕೆ ಪತಾಪಸಿಂಹ ನಾಯಕ್, ಸಂಚಾಲಕ ಚಂದ್ರಮೋಹನ ವುರಾಠೆ ಮುಂಡಾಜೆ ಉಪಸ್ಥಿತರಿದ್ದರು.
ತಾಲೂಕು ಘಟಕದ ಅಧ್ಯಕ್ಷ ಡಾ ಶ್ರೀಧರ ಭಟ್ ಉಜಿರೆ ಸ್ವಾಗತಿಸಿ ಮುರಳಿ ಕೃಷ್ಣ ಆಚಾರ್ ವಂದಿಸಿದರು. ದೇವುದಾಸ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು.