ಶ್ರೀಗಂಧ ಕಳವು: ಇಬ್ಬರು ಆರೋಪಿಗಳ ಬಂಧನ
ಪುತ್ತೂರು, ಆ. 20: ಶ್ರೀಗಂಧದ ಮರ ಕಡಿದು ತುಂಡುಗಳನ್ನು ಅಕ್ರಮವಾಗಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಪುತ್ತೂರು ನಗರ ಪೊಲೀಸರು ಆರೋಪಿಗಳಿಂದ 10 ಸಾವಿರ ರೂ. ಮೌಲ್ಯದ ಶ್ರೀಗಂಧದ ತುಂಡುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಪುತ್ತೂರು ತಾಲೂಕಿನ ರಾಮಕುಂಜ ಗ್ರಾಮದ ಪೂವಪ್ಪ ಮೂಲ್ಯ ಮತ್ತು ಆರ್ಯಾಪು ಗ್ರಾಮದ ಕೇಶವ ಬಂಧಿತ ಆರೋಪಿಗಳು.
ಅವರು ಕೊಡಿಪ್ಪಾಡಿ ಜನಾರ್ಧನ ದೇವಾಲಯದ ಬಳಿಯಲ್ಲಿ ನಿಂತಿದ್ದ ಸಂದರ್ಭ ಈ ಭಾಗದಲ್ಲಿ ಗಸ್ತು ನಿರತರಾಗಿದ್ದ ಪೊಲೀಸರು ಆರೋಪಿಗಳನ್ನು ವಿಚಾರಿಸಿ ಪರಿಶೀಲನೆ ನಡೆಸಿದ್ದರು. ಈ ಸಂದರ್ಭದಲ್ಲಿ ಆರೋಪಿಗಳಲ್ಲಿ ಹಸಿ ತೊಗಟೆ ಇರುವ ಶ್ರೀಗಂಧದ ತುಂಡುಗಳು ಪತ್ತೆಯಾಗಿತ್ತು. ಕೊಡಿಪ್ಪಾಡಿ ಗುಡ್ಡೆಯಿಂದ ಶ್ರೀಗಂಧದ ಮರವನ್ನು ಕಡಿದು ತುಂಡು ಮಾಡಿ ಮಾರಾಟ ಮಾಡಲು ಕಳವು ಮಾಡಿರುವುದಾಗಿ ವಿಚಾರಣೆ ವೇಳೆಗೆ ಆರೋಪಿಗಳು ಪೊಲೀಸರಿಗೆ ತಿಳಿಸಿದ್ದರು. ಬಂಧಿತ ಆರೋಪಿಗಳಿಂದ ಶ್ರೀಗಂಧದ ತುಂಡುಗಳ ಜೊತೆಗೆ ಗರಗಸ ಮತ್ತು ಮಂಡೆಕತ್ತಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ಕೇಸು ದಾಖಲಿಸಿದ್ದಾರೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.