×
Ad

ಪ್ರತಿಭಾವಂತ ಕ್ರೀಡಾಪಟುಗಳ ತರಬೇತಿಗೆ 10 ಕೋಟಿ ರೂ.: ಸಚಿವ ಪ್ರಮೋದ್

Update: 2017-08-20 21:23 IST

ಉಡುಪಿ, ಆ.20: ರಾಜ್ಯದಲ್ಲಿನ ಪ್ರತಿಭಾವಂತ ಕ್ರೀಡಾಪಟುಗಳನ್ನು ಆಯ್ಕೆ ಮಾಡಿ, ಅವರಿಗೆ ಅಗತ್ಯ ತರಬೇತಿ ನೀಡಲು ರಾಜ್ಯ ಸರಕಾರ 10 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಿದೆ ಎಂದು ರಾಜ್ಯ ಮೀನುಗಾರಿಕೆ, ಯುವಜನ ಸಬಲೀಕರಣ ಮತ್ತು ಕ್ರೀಡೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.

ಉಡುಪಿ ಜಿಲ್ಲಾಡಳಿತ, ಜಿಪಂ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ತಾಪಂಗಳ ಸಂಯುಕ್ತ ಆಶ್ರಯದಲ್ಲಿ ಅಜ್ಜರಕಾಡು ಮಹಾತ್ಮಾ ಗಾಂಧಿ ಕ್ರೀಡಾಂಗಣದಲ್ಲಿ ರವಿವಾರ ಏರ್ಪಡಿಸಲಾದ ಉಡುಪಿ ತಾಲೂಕು ಮಟ್ಟದ ದಸರಾ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ರಾಜ್ಯ ಸರಕಾರ ಕ್ರೀಡೆಗೆ ಹೆಚ್ಚಿನ ಉತ್ತೇಜನ ನೀಡುತ್ತಿದ್ದು, ಕ್ರೀಡಾಪಟುಗಳಿಗೆ ಎಲ್ಲಾ ರೀತಿಯ ಅಗತ್ಯ ತರಬೇತಿ ಮತ್ತು ನೆರವು ನೀಡಲಾಗುತ್ತಿದೆ. ಸಹಸ್ರ ಕ್ರೀಡಾ ಪ್ರತಿಭಾ ಯೋಜನೆಯಡಿ 19 ವರ್ಷದೊಳಗಿನ ಪ್ರತಿಭಾವಂತ 750 ಹಾಗೂ 19ವರ್ಷ ಮೇಲ್ಪಟ್ಟ ಪ್ರತಿಭಾವಂತ 250 ಕ್ರೀಡಾಪಟುಗಳು ಸೇರಿದಂತೆ ಒಟ್ಟು 1000 ಕ್ರೀಡಾ ಪಟುಗಳ ಆಯ್ಕೆಗೆ ಈಗಾಗಲೇ ಆನ್ ಲೈನ್ ಮೂಲಕ ಅರ್ಜಿ ಸ್ವೀಕರಿಸಲಾಗುತ್ತಿದೆ ಎಂದರು.

ಅಧ್ಯಕ್ಷತೆಯನ್ನು ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್ ವಹಿಸಿದ್ದರು. ಜಿಪಂ ಅಧ್ಯಕ್ಷ ದಿನಕರ ಬಾಬು, ನಗರಸಭಾ ಸದಸ್ಯ ಯಶ್‌ಪಾಲ್ ಸುವರ್ಣ, ಜಿಪಂ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಶಶಿಕಾಂತ್ ಪಡುಬಿದ್ರೆ, ಕ್ರೀಡಾ ಇಲಾಖೆಯ ನಾರಾಯಣ ರಾವ್ ಉಪಸ್ಥಿತರಿದ್ದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಶನ್ ಶೆಟ್ಟಿ ಸ್ವಾಗತಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News