ಯುವಕ ಮಂಡಲಗಳಿಂದ ತ್ಯಾಜ್ಯ ಮುಕ್ತ ಜಿಲ್ಲೆ ಸಾಧ್ಯ: ದಿನಕರ ಬಾಬು
ಉಡುಪಿ, ಆ.20: ಜಿಲ್ಲೆಯ ಎಲ್ಲಾ ಯುವಕ ಮತ್ತು ಯುವತಿ ಮಂಡಳಗಳು ಸ್ವಚ್ಛತಾ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳುವುದರ ಮೂಲಕ ಜಿಲ್ಲೆಯನ್ನು ತ್ಯಾಜ್ಯ ಮುಕ್ತ ಜಿಲ್ಲೆಯನ್ನಾಗಿಸಲು ಸಹಕರಿಸಬೇಕು ಎಂದು ಉಡುಪಿ ಜಿಪಂ ಅಧ್ಯಕ್ಷ ದಿನಕರ ಬಾಬು ತಿಳಿಸಿದ್ದಾರೆ.
ಉಡುಪಿ ಜಿಪಂ ಸಹಕಾರದೊಂದಿಗೆ ಕಟ್ಟೆಗುಡ್ಡೆ ನವಚೇತನ ಯುವಕ ಮಂಡಲ ಮತ್ತು ನವಚೇತನ ಯುವತಿ ಮಂಡಲ ಜಂಟಿ ಆಶ್ರಯದಲ್ಲಿ ಪರಿಸರ ಸಂರಕ್ಷಣೆ ಹಾಗೂ ಸ್ವಚ್ಛ ಉಡುಪಿ ಮಿಷನ್ ಕೌಂಟ್‌ಡೌನ್ ಕಾರ್ಯಕ್ರಮದಡಿ ರವಿವಾರ ಆಯೋಜಿಸಲಾದ ಕೃಷ್ಣ ಮಾರುತಿ ಜನತಾ ಕಾಲೋನಿಯ ಎಲ್ಲಾ ಮನೆಗಳಿಗೆ ಪ್ಲಾಸ್ಟಿಕ್ ಬಕೆಟ್, ಕಾಂಪೋಸ್ಟ್ ಪೈಪ್ ಹಾಗೂ ಸ್ವಚ್ಛತೆಯ ಬಗ್ಗೆ ಮಾಹಿತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಮಾತನಾಡಿ, ಜಿಲ್ಲೆಯ ಎಲ್ಲಾ ಯುವಕ ಮಂಡಳಗಳು ಮತ್ತು ಸ್ವಸಹಾಯ ಗುಂಪುಗಳಿಗೆ ತ್ಯಾಜ್ಯವನ್ನು ಸಂಪ ನ್ಮೂಲವಾಗಿ ಪರಿವರ್ತಿಸಿ, ಆದಾಯ ಗಳಿಸುವ ಕುರಿತಂತೆ ಈಗಾಗಲೇ ತರ ಬೇತಿ ನೀಡಲಾಗಿದೆ. ಬಿಟ್ಟುಹೋದ ಸ್ವಸ್ವಹಾಯ ಮತ್ತು ಯುವಕ ಮಂಡಳ ಗಳಿಗಾಗಿ ಆ.28ರಿಂದ ತರಬೇತಿ ನೀಡಲಾಗುವುದು ಎಂದು ಹೇಳಿದರು.
ಯುವಕ ಮಂಡಲಗಳ ಸದಸ್ಯರು ತಮ್ಮ ವ್ಯಾಪ್ತಿಯಲ್ಲಿ ಮನೆ ಮನೆಯಿಂದ ಕಸ ಸಂಗ್ರಹಿಸಿ, ಅದನ್ನು ಸೂಕ್ತ ರೀತಿಯಲ್ಲಿ ವಿಂಗಡಿಸಿ ಆರ್ಥಿಕ ಸ್ವಾವಲಂಬನೆ ಸಾಧಿಸಬಹುದಾಗಿದೆ. ಅಲ್ಲದೇ ತಮ್ಮ ಸಂಘದ ಆವರಣದಲ್ಲಿ ಮತ್ತು ಕಟ್ಟಡದ ಮೇಲೆ ತಾರಸಿ ತೋಟ ನಿರ್ಮಾಣ ಮಾಡಿ, ಸಾವಯವ ಕೃಷಿ ಮಾಡಿ ಆದಾಯ ಗಳಿಸಬಹುದು. ತಮ್ಮ ಪಂಚಾಯತ್ ವ್ಯಾಪ್ತಿಯಲ್ಲಿ ತ್ಯಾಜ್ಯ ವಿಲೇ ವಾರಿ ಕುರಿತು ಸಕ್ರಿಯವಾಗಿ ಕಾರ್ಯ ನಿರ್ವಹಿಸಿದರೆ 3-4 ತಿಂಗಳಲ್ಲಿ ಮಾದರಿ ಪಂಚಾಯತ್ ಮಾಡಲು ಸಾಧ್ಯವಿದೆ ಎಂದು ಅವರು ತಿಳಿಸಿದರು.
ಕಡೆಕಾರು ಗ್ರಾಪಂ ಅಧ್ಯಕ್ಷ ರಘುನಾಥ ಕೋಟ್ಯಾನ್, ಜಿಪಂ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಶಿವಾನಂದ ಕಾಪಶಿ, ಮುಖ್ಯ ಯೋಜನಾಧಿಕಾರಿ ಎ. ಶ್ರೀನಿವಾಸ್ ರಾವ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಶನ್ ಕುಮಾರ್ ಶೆಟ್ಟಿ, ನೆಹರು ಯುವ ಕೇಂದ್ರದ ವಿಲ್ಫ್ರೇಡ್ ಡಿಸೋಜ, ನವಚೇತನ ಯುವಕ ಮಂಡಲದ ಅಧ್ಯಕ್ಷ ಗಿರೀಶ್ ಕುಮಾರ್, ಯುವತಿ ಮಂಡಲದ ಅಧ್ಯಕ್ಷೆ ಶಾರದಾ ಉಪಸ್ಥಿತರಿದ್ದರು.
ಪ್ಲಾಸ್ಟಿಕ್ ರಹಿತ ವಿವಾಹ
ಸೆ.3ರಂದು ನವಚೇತನ ಯುವಕ ಮಂಡಲದ ಸದಸ್ಯರೊಬ್ಬರ ವಿವಾಹವು ಪ್ಲಾಸ್ಟಿಕ್ ರಹಿತವಾಗಿ ನಡೆಯಲಿದ್ದು, ಇದು ಇಡೀ ಉಡುಪಿ ಜಿಲ್ಲೆಗೆ ಮಾದರಿ ಯಾಗಿದೆ ಎಂದು ಉಡುಪಿ ಜಿಪಂ ಅಧ್ಯಕ್ಷ ದಿನಕರ ಬಾಬು ತಿಳಿಸಿದರು.