ಪೇಜಾವರ ಸ್ವಾಮೀಜಿಗೆ ಯಶಸ್ವಿ ಶಸ್ತ್ರಚಿಕಿತ್ಸೆ

Update: 2017-08-20 16:29 GMT

ಉಡುಪಿ, ಆ.20: ಪರ್ಯಾಯ ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರಿಗೆ ಹರ್ನಿಯ ಶಸ್ತ್ರಚಿಕಿತ್ಸೆಯನ್ನು ಇಂದು ಮಣಿಪಾಲ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ನೆರವೇರಿಸಲಾಯಿತು.

ಉಡುಪಿ ಶ್ರೀಕೃಷ್ಣ ಮಠದಲ್ಲಿ ಬೆಳಗ್ಗಿನ ಮಹಾಪೂಜೆ ಮುಗಿಸಿ 10ಗಂಟೆ ಸುಮಾರಿಗೆ ಕಾರಿನಲ್ಲಿ ಹೊರಟ ಪೇಜಾವರ ಸ್ವಾಮೀಜಿ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಯಿತು. ಬಳಿಕ ಸ್ವಾಮೀಜಿ ಆರೋಗ್ಯವನ್ನು ಪರೀಕ್ಷಿಸಿದ ವೈದ್ಯರು, ಬೆಳಗ್ಗೆ 11:45ಕ್ಕೆ ಶಸ್ತ್ರಚಿಕಿತ್ಸೆಗೆ ಒಳಪಡಿಸಿದರು. ಹಿರಿಯ ವೈದ್ಯ ಡಾ.ರಾಜಗೋಪಾಲ ಶೆಣೈ ನೇತೃತ್ವದ ತಂಡ ಸುಮಾರು ಒಂದು ಗಂಟೆ ಅವಧಿಯಲ್ಲಿ ಸ್ವಾಮೀಜಿಗೆ ಯಶಸ್ವಿ ಶಸ್ತ್ರಚಿಕಿತ್ಸೆಯನ್ನು ನಡೆಸಿತು.

87 ವಯಸ್ಸಿನ ಸ್ವಾಮೀಜಿ ಮೊದಲ ಬಾರಿಗೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಇದೀಗ ಆಪರೇಷನ್ ಕೊಠಡಿಯ ಬಳಿಯ ವಿಶೇಷ ಕೊಠಡಿಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಶಸ್ತ್ರಚಿಕಿತ್ಸೆಯ ಬಳಿಕ ಚೇತರಿಸಿಕೊಂಡಿರುವ ಸ್ವಾಮೀಜಿ ಹಾಲು ಕುಡಿದು ಪತ್ರಿಕೆಯನ್ನು ವಾಚಿಸಿದ್ದಾರೆ. ಆಸ್ಪತ್ರೆಗೆ ಆಗಮಿಸಿದ ಕಿರಿಯ ಸ್ವಾಮೀಜಿ ಜೊತೆ ಮಾತುಕತೆ ನಡೆಸಿದ್ದಾರೆ. ಸ್ವಾಮೀಜಿ ನಾಳೆಯೇ ಮಠಕ್ಕೆ ಮರಳು ಉತ್ಸಾಹದಲ್ಲಿದ್ದಾರೆ. ಆದರೆ ವೈದ್ಯರ ಪ್ರಕಾರ ಸ್ವಾಮೀಜಿ 18 ಗಂಟೆಗಳ ಕಾಲ ನಿಗಾ ಘಟಕದಲ್ಲಿ ಇರಬೇಕಾಗಿರುವುದರಿಂದ ನಾಳೆ ಆಸ್ಪತ್ರೆಯಿಂದ ಬಿಡುಗಡೆ ಯಾಗುವುದು ಸಂಶಯ ಎಂದು ಮಠದ ಮೂಲಗಳು ತಿಳಿಸಿವೆ.

ಪೇಜಾವರ ಸ್ವಾಮೀಜಿ ಕಳೆದ ಒಂದು ತಿಂಗಳಿಂದ ಹರ್ನಿಯ ನೋವಿನಿಂದ ಬಳಲುತ್ತಿದ್ದು, ವೈದ್ಯರು ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವಂತೆ ಒತ್ತಡ ಹಾಕಿದ ನಂತರ ಅಷ್ಟಮಠಗಳ ಉಳಿದ ಸ್ವಾಮೀಜಿಗಳೊಂದಿಗೆ ಚರ್ಚಿಸಿ ಅವರ ಒತ್ತಾಸೆಯಂತೆ ಕೊನೆಗೆ ಒಪ್ಪಿಗೆ ಸೂಚಿಸಿದ್ದರು. ಮಠದ ಸಂಪ್ರದಾಯದಂತೆ ಪರ್ಯಾಯ ಪೀಠವನ್ನೇರಿದ ಎರಡು ವರ್ಷಗಳವರೆಗೆ ಮಠದ ಆವರಣ, ರಥಬೀದಿಯನ್ನು ಬಿಟ್ಟು ಹೊರಗೆ ಹೋಗುವಂತಿಲ್ಲ. ಆದರೆ ಪೇಜಾವರಶ್ರೀ ಉಳಿದ ಎಲ್ಲ ಮಠಗಳ ಸ್ವಾಮೀಜಿಗಳ ಒಪ್ಪಿಗೆಯಂತೆ ಈ ಶಸ್ತ್ರಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ತೆರಳಿದ್ದಾರೆ.

ಪೂಜೆ, ವಿಶೇಷ ಪಾರ್ಥನೆ

ಪೇಜಾವರ ಸ್ವಾಮೀಜಿ ಆಸ್ಪತ್ರೆಗೆ ತೆರಳುವ ಮುನ್ನ ಅವರ ಶಿಷ್ಯ ವೃಂದ ಕೃಷ್ಣಮಠದ ರಾಜಾಂಗಣದಲ್ಲಿ ಧನ್ವಂತರಿ ಹೋಮ ಮತ್ತು ನರಸಿಂಹ ಮಂತ್ರ ಜಪವನ್ನು ನಡೆಸಿತು. ಇದರಲ್ಲಿ ಪೇಜಾವರ ಸ್ವಾಮೀಜಿಯೂ ಪಾಲ್ಗೊಂಡಿದ್ದರು. ಕಿರಿಯ ಯತಿ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಮಂಗಳಾರತಿಯನ್ನು ನೆರವೇರಿಸಿದರು.

ಅದೇ ರೀತಿ ಪೇಜಾವರ ಸ್ವಾಮೀಜಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ಆಗಮಿಸುತ್ತಿದ್ದಂತೆ ಮುಸ್ಲಿಂ ಬಾಂಧವರು ಆಸ್ಪತ್ರೆಯ ಹೊರಭಾಗದಲ್ಲಿ ಸಾಮೂಹಿಕ ಪ್ರಾರ್ಥನೆ ನೆರವೇರಿಸಿ, ಪೇಜಾವರ ಸ್ವಾಮೀಜಿ ಶೀಘ್ರ ಗುಣಮುಖರಾಗಲಿ ಎಂದು ಬೇಡಿ ಕೊಂಡರು. ಈ ಸಂದರ್ಭದಲ್ಲಿ ಅನ್ಸಾರ್ ಅಹ್ಮದ್, ಹಾಜಿ ಅಬೂಬಕ್ಕರ್ ಪರ್ಕಳ, ಆರೀಫ್ ದೊಡ್ಡಣಗುಡ್ಡೆ ಉಪಸ್ಥಿತರಿದ್ದರು.

ಇದರೊಂದಿಗೆ ಕರಂಬಳ್ಳಿ ದೇವಸ್ಥಾನದಲ್ಲಿ ಪೇಜಾವರ ಸ್ವಾಮೀಜಿ ಅಭಿಮಾನಿ ಗಳು ನಂದಾದೀಪ ಪೂಜೆ, ವಿಷ್ಣುಸಹಸ್ರನಾಮ ಮತ್ತಿತರ ಹಲವು ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು.

ಹರ್ನಿಯ ದೊಡ್ಡ ಸಮಸ್ಯೆ ಅಲ್ಲ. ಆದರೆ ಶೀಘ್ರ ಚಿಕಿತ್ಸೆಗೆ ಒಳಪಡಿಸದಿದ್ದರೆ ಸಮಸ್ಯೆಯಾಗಬಹುದು ಎಂದು ವೈದ್ಯರು ಸಲಹೆ ಕೊಟ್ಟಿದ್ದರು. ಅದನ್ನು ಉಪ ಶಮನ ಮಾಡಲು ಶಸ್ತ್ರಚಿಕಿತ್ಸೆ ಒಳಗಾಗುತ್ತಿದ್ದೇನೆ. ಈ ವಿಷಯದಲ್ಲಿ ಯಾರು ಆತಂಕ ಪಡುವ ಅಗತ್ಯ ಇಲ್ಲ. ಶುಭ ಹಾರೈಕೆ ಮಾಡಿ. ಶೀಘ್ರ ಗುಣಮುಖನಾಗಿ ಮಠಕ್ಕೆ ವಾಪಾಸ್ಸು ಬರುತ್ತೇನೆ ಎಂದು ಪೇಜಾವರ ಸ್ವಾಮೀಜಿ ಹೇಳಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಖಾಲಿ ಹೊಟ್ಟೆಯಲ್ಲಿ ಆಸ್ಪತ್ರೆಗೆ ಬರುವಂತೆ ವೈದ್ಯರು ತಿಳಿಸಿರುವುದರಿಂದ ನಾನು ಖಾಲಿ ಹೊಟ್ಟೆಯಲ್ಲಿಯೇ ಹೋಗುತ್ತಿದ್ದೇನೆ. ನನ್ನ ಪರ್ಯಾಯ ಅವಧಿ ಮುಗಿಯುತ್ತ ಬಂತು. ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ ಹೆಚ್ಚು ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಇದಕ್ಕೆ ಮುಂಚಿತವಾಗಿ ಚಿಕಿತ್ಸೆ ಪಡೆದುಕೊಳ್ಳಬೇಕಾಗಿದೆ. ಕೃಷ್ಣನ ಆರಾಧನೆಯನ್ನು ಕಿರಿಯ ಸ್ವಾಮೀಜಿ ಮಾಡುತ್ತಾರೆ. ವಿಶ್ರಾಂತಿಯ ಸಮಯದಲ್ಲಿ ಶ್ರೀಕೃಷ್ಣನ ಅನುಷ್ಟಾನಗಳನ್ನೆಲ್ಲಾ ಮಾಡುತ್ತೇನೆ. ವಿಶ್ರಾಂತಿಯಲ್ಲಿರುವಾಗ ಶ್ರೀಕೃಷ್ಣನನ್ನು ಮುಟ್ಟಿ ಪೂಜೆ ಮಾಡಲು ಸಾಧ್ಯವಾಗುವುದಿಲ್ಲ ಎಂದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News