ಮುಂಡಗೋಡ: ಪಟ್ಟಣ ಪಂಚಾಯತ್ ಗೆ ಜಿಲ್ಲಾಧಿಕಾರಿ ಎಸ್.ಎಸ್.ನಕುಲ ಭೇಟಿ

Update: 2017-08-20 17:27 GMT

ಮುಂಡಗೋಡ, ಆ.20:  ಜಿಲ್ಲಾಧಿಕಾರಿ ಎಸ್.ಎಸ್.ನಕುಲ ಅವರು ಪಟ್ಟಣ ಪಂಚಾಯತ್ ಗೆ ಭೇಟಿ ನೀಡಿ ಸಿಬ್ಬಂದಿಗಳ ಸಭೆ ನಡೆಸಿ ಪಟ್ಟಣ ಪಂಚಾಯತ್ ನ ವಿವಿಧ ವಿಭಾಗಗಳ ದಾಖಲಾತಿ ಪರಿಶೀಲಿಸಿ ಸಮರ್ಪಕವಾಗಿ ಕಾರ್ಯನಿರ್ವಹಿಸದ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ಶನಿವಾರ ನಡೆಯಿತು.

ಘನತ್ಯಾಜ್ಯ ಘಟಕದ ಮೇಲ್ವಿಚಾರಕ ಸೋಮಶೇಖರ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡ ಜಿಲ್ಲಾಧಿಕಾರಿ, ನಿಮಗೆ ಸಂಬಳ ನೀಡುವುದು ವ್ಯರ್ಥ. ಸರ್ಕಾರದ ಕೆಲಸವನ್ನು ಸರಿಯಾಗಿ ಮಾಡುತ್ತಿಲ್ಲ. ನೀವು ನೀಡುತ್ತಿರುವ ಮಾಹಿತಿ ಮೇಲೆಯೆ ಎಲ್ಲವೂ ಗೊತ್ತಾಗುತ್ತದೆ ಬೇರೆಯವರು ಮಾಡಿದ ಕೆಲಸದ ಮೇಲೆ ತಾವು ಕ್ರೇಡಿಟ್ ಪಡೆಯುವುದು ಸರಿಯಲ್ಲ. ಈ ಬಗ್ಗೆ ಸರಿಯಾಗಿ  ಉತ್ತರಿಸದ ಅಕ್ಕಿಯವರನ್ನು ಅಮಾನತು ಮಾಡಲು  ಜಿಲ್ಲಾಧಿಕಾರಿಗಳು ನಿರ್ಣಯಿಸಿದರೆಂದು ತಿಳಿದು ಬಂದಿದೆ. 

 ಈ ವೇಳೆ ಜಿಲ್ಲಾ ನಗರಾಭಿವೃದ್ಧಿ ಕೋಶಾಧಿಕಾರಿ ಆರ್.ಪಿ. ನಾಯ್ಕ ಮಾತನಾಡಿ, ಅಂತರ್ಜಲ ಮಟ್ಟ ಕುಸಿತ ಕಂಡಿದ್ದು ಸನವಳ್ಳಿ ಜಲಾಶಯದಲ್ಲಿ ಈಗಾಗಲೇ ಕೊಳವೆ ಬಾವಿಗಳನ್ನು ಕೊರೆದಿದ್ದು ಮತ್ತೆ ಕೊಳವೆ ಬಾವಿಯನ್ನು ಕೊರೆಯುವುದು ಬೇಡಾ ಎಂದು ಮುಖ್ಯಾಧೀಕಾರಿಗಳಿಗೆ ಸೂಚಿಸಿದರು.

ಪಟ್ಟಣ ಪಂಚಾಯತಕ್ಕೆ ಸೇರಿದ ವಾಣಿಜ್ಯ ಮಳಿಗೆಗಳ ನಾಲ್ಕು ತಿಂಗಳ ಬಾಡಿಗೆ ಜಮಾವಣೆಗೊಂಡಿಲ್ಲ 2.19ಲಕ್ಷ ರೂ. ಬಾಕಿಯಿದೆ ಎಂದು ನಗರಾಭಿವೃದ್ಧಿ ಕೋಶಾಧಿಕಾರಿ ಆರ್.ಪಿ.ನಾಯ್ಕ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. ಈ ಬಗ್ಗೆ ತಕ್ಷಣ ಜಿಲ್ಲಾಧಿಕಾರಿ ಮಾತನಾಡಿ, ಬಾಡಿಗೆ ಕೊಡದಿದ್ದರೆ ಮಳಿಗೆಗೆ ಬೀಗ ಹಾಕಿ ಬೇರೆ ಮಾಲಕರಿಗೆ ಬಾಡಿಗೆ ನೀಡುವಂತೆ ಸೂಚನೆ ನೀಡಿದರು. ಕಳೆದ ಒಂದು ವರ್ಷದಿಂದ ಅನಧಿಕೃತವಾಗಿ ಗೈರು ಹಾಜರಿರುವ ಪಟ್ಟಣ ಪಂಚಾಯತ್ ನ ದ್ವಿತೀಯ ದರ್ಜೆ ಸಹಾಯಕ ಪ್ರಭಾಕರ ರಾವಜಿ ಅವರನ್ನು  ಅಮಾನತು ಮಾಡಲಾಗುವುದು ಎಂದರು.

 ಪಟ್ಟಣ ಪಂಚಾಯತ್ ನ  ಸಿಬ್ಬಂದಿಗಳ ಜೊತೆ ಸಭೆ ನಡಸಿ  ಬಳಿಕ ಪಟ್ಟಣದ ಹೊರವಲಯದ  ಘನತ್ಯಾಜ್ಯ ಘಟಕ್ಕೆ ಭೇಟಿ ನೀಡಿ ಪರಿಶೀಲಿಸಿದ  ಜಿಲ್ಲಾಧಿಕಾರಿ ಎಸ್.ಎಸ್.ನಕುಲ ಅವರು,  ಘನತ್ಯಾಜ್ಯ ಘಟಕದಲ್ಲಿ ಹಸಿಕಸ ಹಾಗೂ ಒಣಕಸವನ್ನು ಒಂದಡೆ ಹಾಕಿರುವುದನ್ನು ಕಂಡು ಜಿಲ್ಲಾಧಿಕಾರಿ ಪಟ್ಟಣ ಪಂಚಾ ಯತ ಸಿಬ್ಬಂದಿ ಸೋಮಶೇಖರ ಅಕ್ಕಿ ಅವರನ್ನು ಮತ್ತೊಮ್ಮೆ ತರಾಟೆಗೆ ತೆಗೆದುಕೊಂಡರು. ಕಸವನ್ನು ಹೀಗೆ ಹಾಕಿದರೆ ಹೇಗೆ  ನಾಳೆಯಿಂದ  ಪಟ್ಟಣದಿಂದ ಇಲ್ಲಿಗೆ ತರುವ ಕಸವನ್ನು ಹಸಿಕಸ ಒಣಕಸವನ್ನು ಪ್ರತ್ಯೇಕವಾಗಿ ವಿಂಗಡಿಸಿಕೊಂಡು ತರಬೇಕು.

ಮನೆ ಮನೆ ಕಸವನ್ನು ಸಂಗ್ರಹಿಸುವಾಗ ಒಣಕಸ ಹಾಗೂ ಹಸಿಕಸ ಎಂದು ವಿಂಗಡನೆ ಮಾಡಿ ಪಡೆದುಕೋಳ್ಳಬೇಕು.  ಸೆ. 10 ರವೇಳೆಗೆ ಸರಿಯಾಗಿ ಘನತ್ಯಾಜ್ಯ ಘಟಕದಲ್ಲಿ ಸರಿಯಾಗಿ ಹಸಿ ಹಾಗೂ ಒಣ ಕಸವನ್ನು ಬೇರ್ಪಡಿಸಿ ಹಾಕದಿದ್ದರೆ ಘನತ್ಯಾಜ್ಯ ಘಟಕದ ಗೇಟ್ ಎದುರು ಕಂದಾಯ ಇಲಾಖೆಯ ಸಿಬ್ಬಂದಿಯನ್ನು ನೇಮಿಸಿ ಒಣ ಹಾಗೂ  ಹಸಿಕಸವನ್ನು ಬೇರ್ಪಡಿಸಿ ಘಟಕದೋಳಗೆ  ವಾಹನವನ್ನು ಬಿಡಲಾಗುವುದು ಒಂದು ವೇಳೆ ಕಸವನ್ನು ಬೇರೆ ಮಾಡಿ ತರದಿದ್ದರೆ ವಾಹನವನ್ನು ಘಟಕದ ಹೊರಗಡೆ ನಿಲ್ಲಿಸಿ ಆ ವಾಹನದ ಸಿಬ್ಬಂದಿಗಳೆ ಕಸವನ್ನು ವಿಂಗಡಿಸಿ ಒಳಗಡೆ ಬರುವಂತೆ ಕ್ರಮ ವಹಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ್ಅಧ್ಯಕ್ಷ ರಫೀಕ್ ಇನಾಮದಾರ್, ಉಪಾಧ್ಯಕ್ಷ ಫಕೀರಪ್ಪ ಅಂಟಾಳ, ಮುಖ್ಯಾಧಿಕಾರಿ ಸಂಗನಬಸಯ್ಯ, ಸ್ಥಾಯಿ ಸಮಿತಿ ಅಧ್ಯಕ್ಷ ರಾಬರ್ಟ ಲೋಬೋ, ಹಾಗೂ ಪಟ್ಟಣ ಪಂಚಾಯತ್  ಸದಸ್ಯರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News