​ವಿಶ್ವ ಕೊಂಕಣಿ ಕೇಂದ್ರದಿಂದ 3.5 ಕೋಟಿ ರೂ ವಿದ್ಯಾರ್ಥಿ ವೇತನ ವಿತರಣೆ

Update: 2017-08-20 17:28 GMT

ಮಂಗಳೂರು, ಆ.20: ವಿಶ್ವ ಕೊಂಕಣಿ ಕೇಂದ್ರದಿಂದ 3.5 ಕೋಟಿ ರೂ. ವಿದ್ಯಾರ್ಥಿ ವೇತನವನ್ನು 3,800 ವಿದ್ಯಾರ್ಥಿಗಳಿಗೆ ವಿತರಿಸಲಾಯಿತು ಎಂದು ವಿಶ್ವ ಕೊಂಕಣಿ ವಿದ್ಯಾರ್ಥಿ ವೇತನ ನಿಧಿ ವಿಭಾಗದ ಅಧ್ಯಕ್ಷ ರಾಮದಾಸ ಯು.ಕಾಮತ್ ತಿಳಿಸಿದ್ದಾರೆ.

ಕೊಂಕಣಿ ಭಾಷೆಗೆ ಭಾರತದ ಸಂವಿಧಾನ 8ನೆ ಪರಿಚ್ಛೇದದಲ್ಲಿ ಮಾನ್ಯತೆ ದೊರೆತ ಹಿನ್ನೆಲೆಯಲ್ಲಿ ಕೊಂಕಣಿ ಮಾನ್ಯತಾ ದಿನದ ಅಂಗವಾಗಿ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮವನ್ನು ನಡೆಸಿದ ಬಳಿಕ ಸುದ್ದಿಗೋಷ್ಟಿಯಲ್ಲಿಂದು ಅವರು ತಿಳಿಸಿದ್ದಾರೆ.

ವಿಶ್ವ ಕೊಂಕಣಿ ವಿದ್ಯಾರ್ಥಿ ನಿಧಿಯಿಂದ ಕಳೆದ ಮೂರು ವರ್ಷಗಳಲ್ಲಿ 15 ಕೋಟಿ ರೂ ವೌಲ್ಯದ ವಿದ್ಯಾರ್ಥಿ ವೇತನವನ್ನು ಮೆಡಿಕಲ್, ಇಂಜಿನಿಯರಿಂಗ್, ವಿದೇಶಗಳಲ್ಲಿ ಶಿಕ್ಷಣ ಪಡೆಯುವವರು ಸೇರಿದಂತೆ 14 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ವಿತರಿಸಲಾಗಿದೆ. ಕೇಂದ್ರದಿಂದ ವಿದ್ಯಾರ್ಥಿಗಳಿಗೆ ತರಬೇತಿ, ನಾಯಕತ್ವ ಶಿಬಿರ ನಡೆಸಲಾಗುತ್ತದೆ ಎಂದು ರಾಮದಾಸ್ ಕಾಮತ್ ತಿಳಿಸಿದ್ದಾರೆ.

ಐಎಎಸ್-ಐಪಿಎಸ್ ತರಬೇತಿ ಕೇಂದ್ರ:- ಜಿಲ್ಲೆಯಲ್ಲಿ ಸಾಕಷ್ಟು ವಿದ್ಯಾವಂತ ಹಾಗೂ ಬುದ್ದಿವಂತ ವಿದ್ಯಾರ್ಥಿಗಳಿದ್ದರೂ ಅವರಿಗೆ ಉದ್ಯೋಗದ ಸಂದರ್ಭದಲ್ಲಿ ಸೂಕ್ತ ಮಾಹಿತಿ ಮಾರ್ಗದರ್ಶನ ಕೊರತೆಯಿಂದ ಐಎಎಸ್, ಐಪಿಎಸ್ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಲು ಸಾಧ್ಯವಾಗುತ್ತಿಲ್ಲ ಈ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಸುಸಜ್ಜಿತ ಕೇಂದ್ರವನ್ನು ವಿಶ್ವ ಕೊಂಕಣಿ ಕೇಂದ್ರದ ವತಿಯಿಂದ ಆರಂಭಿಸಲಾಗುವುದು ಎಂದು ರಾಮದಾಸ ಯು. ಕಾಮತ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ಬಸ್ತಿ ವಾಮನ ಶೆಣೈ,ಉಪಾಧ್ಯಕ್ಷ ವೆಂಕಟೇಶ್ ಎನ್ ಬಾಳಿಗ,ಕಾನೂನು ಸಲಹೆಗಾರ ನಂದ ಗೊಪಾಲ ಶೆಣೈ ಮೊದಲಾದವರು ಉಪಸ್ಥಿತರಿದ್ದರು.ಟಿ.ವಿ.ರಮಣ್ ಪೈ ಸಭಾಂಗಣದಲ್ಲಿ ವಿಶ್ವ ಕೊಂಕಣಿ ಕೇಂದ್ರದ ವತಿಯಿಂದ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News