‘ಅಮರ್ ಜವಾನ್’ ವೀಕ್ಷಿಸಿ ಭಾವುಕರಾದ ಗಣ್ಯರು

Update: 2017-08-20 18:13 GMT

ಮಂಗಳೂರು, ಆ.20: ಟೀಮ್ ಬ್ಲ್ಯಾಕ್ ಆ್ಯಂಡ್ ವೈಟ್ ಮಂಗಳೂರು ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಲಯನ್ಸ್ ಕ್ಲಬ್ ಬಲ್ಮಠ ಹಾಗೂ ಮಂಗಳೂರು ವಿ.ವಿ.ಯ ರಾಷ್ಟ್ರೀಯ ಸೇವಾ ಯೋಜನೆ ಆಶ್ರಯದಲ್ಲಿ ‘ಅಮರ್ ಜವಾನ್’-ದ.ಕ.ಜಿಲ್ಲೆಯ ಹುತಾತ್ಮ ಯೋಧರಿಗೆ ನಮನ ಕಾರ್ಯಕ್ರಮ ರವಿವಾರ ನಗರದ ಪುರಭವನದಲ್ಲಿ ಜರಗಿತು.

ದ.ಕ.ಜಿಲ್ಲೆಯ ಹುತಾತ್ಮ ಯೋಧರಿಗೆ ಗೌರವಪೂರ್ವಕ ನಮನ ಸಲ್ಲಿಸುವ ಮೂಲಕ ಅವರ ಕುಟುಂಬಗಳಿಗೆ ಸ್ಪೂರ್ತಿ ಹಾಗೂ ಸಾಂತ್ವನದ ಸಹಭಾಗಿತ್ವ ನೀಡುವ ದೆಸೆಯಲ್ಲಿ ವಿನೂತನ ಹಾಗೂ ಅರ್ಥಪೂರ್ಣ ಕಾರ್ಯಕ್ರಮ ಜನಮನ ಸೆಳೆಯಿತು. ಹುತಾತ್ಮ ಹನುಮಂತಪ್ಪ ಕೊಪ್ಪದ್ ಕುಟಂಬಸ್ಥರು ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಭಾಗವಹಿಸಿ, ಗೌರವ ಸ್ವೀಕರಿಸಿದರು.ದ.ಕ.ದ ಹುತಾತ್ಮ ಯೋಧರಾದ ವಿಶ್ವಾಂಬರ ಎಚ್.ಪಿ, ಚಂದ್ರಶೇಖರ್, ಪರಮೇಶ್ವರ್ ಕೆ, ಗಿರೀಶ್ ಕುಮಾರ್, ಸುಬೇದಾರ್ ಕೆ. ಏಕನಾಥ ಶೆಟ್ಟಿ, ರಾಜಶೇಖರ್, ಓಸ್ವಾಲ್ಡ್ ನೊರೊನ್ಹಾ ಅವರ ನೆನಪಿನೊಂದಿಗೆ, ಅವರ ಬಲಿದಾನದ ಕುರಿತ ಸಮಗ್ರ ವಿವರಗಳನ್ನು ಪ್ರದರ್ಶಿಸಲಾಯಿತು.ಆ ಬಳಿಕ ಹುತಾತ್ಮ ಯೋಧರ ಕುಟುಂಬಗಳಿಗೆ ಸನ್ಮಾನ ಸಮರ್ಪಿಸಲಾಯಿತು.

ಈ ಸಂದರ್ಭ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಕ್ಯಾ ಗಣೇಶ್ ಕಾರ್ಣಿಕ್ ವಿದೇಶದಲ್ಲಿ ದೇಶದ ಸೈನಿಕರಿಗಿರುವಷ್ಟು ಸ್ಥಾನಮಾನ, ಗೌರವ, ಸವಲತ್ತುಗಳು ನಮ್ಮ ದೇಶದಲ್ಲಿಲ್ಲ. ಯುಎಸ್‌ಎ ವಿಮಾನ ಹತ್ತುವ ಸಂದರ್ಭ ಮೊದಲ ಅವಕಾಶ ಮಾಜಿ ಸೈನಿಕರಿಗೆ, ನಾಸಾದಲ್ಲಿ ಯಾವುದೇ ದೇಶದ ಸೈನಿಕರಲ್ಲಿ ಆತನಿಗೆ ವಿಶೇಷ ಗೌರವ, ವಾಷಿಂಗ್ಟನ್‌ನಲ್ಲಿ ಟೂರಿಸ್ಟ್ ಹೋದರೆ ಸೈನಿಕರನ್ನು ಗುರುತಿಸಿ ಅಭಿನಂದಿಸುತ್ತಾರೆ. ಈ ರೀತಿಯ ಮನೋಭಾವ ನಮ್ಮ ದೇಶದಲ್ಲೂ ಜಾಗೃತಿಯಾದಾಗ ಸೇನೆ ಮತ್ತು ಸೈನ್ಯದ ಮಹತ್ವ ತಿಳಿಯಲು ಸಾಧ್ಯವಿದೆ ಎಂದರು.

ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಸ್ಥಾಪಕಾಧ್ಯಕ್ಷ ಅಬ್ದುಲ್ ರವೂಫ್ ಪುತ್ತಿಗೆ ಮಾತನಾಡಿ ಭಾರತೀಯರ ನಾನಾ ರೀತಿಯ ಸೇವೆ ಮೂಲಕ ಈ ದೇಶದ ಋಣ ತೀರಿಸಲು ಸಾಧ್ಯವಿದೆ. ಅದನ್ನು ಜೀವನದಲ್ಲಿ ಪಾಲಿಸೋಣ. ದೇಶ ಸೇವೆ ಮಾಡುವ ಸೈನಿಕರಿಗೆ ಮತ್ತು ಕುಟುಂಬಕ್ಕೆ ಭದ್ರತೆ ಕೊಡುವ ಕೆಲಸವಾಗಬೇಕು ಎಂದು ಅಭಿಪ್ರಾಯಪಟಗಟರು.

ಕಸಾಪ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಮಾತನಾಡಿ ಸೇನೆಯಲ್ಲಿ ಸೇವೆ ಸಲ್ಲಿಸಿ ಮೃತರಾದ ಯೋಧರಿಗೆ ನಮನ ಸಲ್ಲಿಸುವ ಅಮರ್ ಜವಾನ್ ನಿಜಕ್ಕೂ ಮಾದರಿ ಕಾರ್ಯಕ್ರಮ. ನಮ್ಮ ದೇಶದ ಯೋಧರಿಗೆ ಈ ರೀತಿಯಾಗಿ ಗೌರವ ನೀಡುವ ಮೂಲಕ ಅವರ ಸಾಧನೆಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದಂತಾಗುತ್ತದೆ ಎಂದರು.

ನಿಟ್ಟೆಗುತ್ತು ಕರ್ನಲ್ ಶರತ್ ಭಂಡಾರಿ ಮಾತನಾಡಿ ಅಮರ್ ಜವಾನ್ ಕಾರ್ಯಕ್ರಮದ ಮೂಲಕ ವೀರರಿಗೆ ನಮನ ಸಲ್ಲಿಸುವ ಕಾರ್ಯಕ್ರಮ ನಿಜಕ್ಕೂ ಶ್ಲಾಘನೀಯ ಎಂದರು.

ಈ ಸಂದರ್ಭ ಲಯನ್ಸ್ ಕ್ಲಬ್ ಜಿಲ್ಲಾ ಗವರ್ನರ್ ರೊನಾಲ್ಡ್‌ಗೋಮ್, ಎನ್ನೆಸ್ಸೆಸ್ಸ್ ಸಂಯೋಜನಾಧಿಕಾರಿ ವಿನಿತಾ ರೈ, ಮಂಗಳಾ ಕ್ಯಾಶ್ಯೂ ಇಂಡಸ್ಟ್ರೀಸ್ ಮಾಲೀಕ ವೇದವ್ಯಾಸ ಕಾಮತ್, ಲಯನ್ಸ್‌ಕ್ಲಬ್ ಅಧ್ಯಕ್ಷ ಸೈಮನ್ ಲೋಬೊ, ಬಂದರು ಎಸ್ಸೈ ಮದನ್, ಚಿತ್ರ ನಿರ್ಮಾಪಕ ಚಂದ್ರಹಾಸ್ ಶೆಟ್ಟಿ, ಯುವಸಂಘಟಕ ಬ್ರಿಜೇಶ್ ಚೌಟ, ಯಜಮಾನ ಇಂಡಸ್ಟ್ರೀಸ್ ಮಾಲಕ ಟಿ. ವರದರಾಜ ಪೈ ಮತ್ತಿತರರು ಉಪಸ್ಥಿತರಿದ್ದರು.

ದೇಶಕ್ಕಾಗಿ ತಮ್ಮ ಜೀವಮುಡಿಪಾಗಿಟ್ಟು ಪ್ರಾಣ ತ್ಯಾಗಮಾಡಿದ ಹುತಾತ್ಮ ಯೋಧರು ಯಾವತ್ತೂ ಚಿರಂಜೀವಿಗಳು. ಅಂತಹ ಯೋಧರ ಪತ್ನಿ ತಾಳಿ, ಕುಂಕುಮ, ಬಳೆ, ಕಾಲುಂಗುರ ಯಾವತ್ತೂ ತೆಗೆಯದೆ ಸುಮಂಗಲಿಯಾಗಿಯೇ ಇರಬೇಕು ಎಂದು ಹುತಾತ್ಮ ಯೋಧ ಹನುಮಂತಪ್ಪಕೊಪ್ಪದ್ ಅವರ ಪತ್ನಿ ಮಹಾದೇವಿ ನುಡಿದರು.

ಹುತಾತ್ಮರಾದವರನ್ನು ನೆನೆದು ಎಂದಿಗೂ ನೊಂದುಕೊಳ್ಳಬೇಡಿ. ಅವರು ಯಾವತ್ತೂ ಅಮರರು, ನಮ್ಮನ್ನು ಬಿಟ್ಟು ಹೋಗಿಲ್ಲ. ಈ ದೇಶದ ಜವಾನರು ಹಾಗೂ ಕಿಸಾನ್‌ಗಳು ಎರಡು ಕಣ್ಣುಗಳು. ದೇಶದಲ್ಲಿ ರೈತರು, ಯೋಧರಿಂದ ಮಾತ್ರ ದೇಶ ಅಭ್ಯುದಯ ಸಾಧ್ಯ ಎಂದು ಮಹಾದೇವಿ ಹೇಳಿದರು.
ನಾನು ಗಂಡನನ್ನು ಕಳೆದುಕೊಂಡಿರಬಹುದು, ಅದಕ್ಕಾಗಿ ಧೃತಿಗೆಡಲಾರೆ. ಮಗಳು ನೇತ್ರಾಳನ್ನು ನೇವಿಗೆ ಕಳುಹಿಸುತ್ತೇನೆ ಎಂಬ ಮಾತಿಗೆ ಇಂದಿಗೂ ಬದ್ಧಳಾಗಿದ್ದೇನೆ ಎಂದು ಮಹಾದೇವಿ ಹೇಳಿದರು.

ಸುಬೇದಾರ್ ಕೆ.ಏಕನಾಥ ಶೆಟ್ಟಿಯವರ ಪತ್ನಿ ಜಯಂತಿ ಮಾತನಾಡಿ, ವಿಮಾನದಲ್ಲಿ ಅಂಡಮಾನ್‌ಗೆ ಪ್ರಯಾಣಿಸುವಾಗ ನಿಗೂಢ ಕಣ್ಮರೆಯಾದ ಪತಿ ಇಂದಲ್ಲ ನಾಳೆ ಬರುತ್ತಾರೆ ಎಂಬ ಆಶಾಭಾವನೆ ನಮ್ಮಲ್ಲಿದೆ. ಆದರೆ ಸೇನೆಗೆ ಸೇರಿ ದೇಶಸೇವೆ ಮಾಡಿದಾಗ ಸಿಗುವ ಗೌರವ ಬೇರೆಲ್ಲೂ ಸಿಗಲು ಸಾಧ್ಯವಿಲ್ಲ ಎಂದರು.

ಭಾವುಕರಾದ ಗಣ್ಯರು
ಸನ್ಮಾನ ಸ್ವೀಕರಿಸಿದ ಯೋಧರ ಮಡದಿಯರು, ಮಕ್ಕಳ ಮಾತುಗಳನ್ನು ಕೇಳಿದ ಮೇಯರ್ ಕವಿತಾ ಸನಿಲ್ ಬಾವುಕರಾಗಿ ಮಾತನಾಡಿ, ನನ್ನ ಮೇಯರ್ ಅಧಿಕಾರಿಯಲ್ಲಿಯೇ ನಾನು ಕಂಡ ಅತ್ಯುತ್ತಮ ಕಾರ್ಯಕ್ರಮವಿದು. ರಾಷ್ಟ್ರಪ್ರೇಮ, ರಾಷ್ಟ್ರಜಾಗೃತಿಯನ್ನು ಮೂಡಿಸುವ ಇಂತಹ ಕಾರ್ಯಕ್ರಮ ಹೆಚ್ಚು ನಡೆಯಬೇಕು. ಈ ರೀತಿಯ ವಿಭಿನ್ನ ಕಾರ್ಯಕ್ರಮ ನಡೆಸಿದ ಬ್ಲ್ಯಾಕ್ ಆ್ಯಂಡ್ ವೈಟ್ ತಂಡಕ್ಕೆ ಸದಾ ಪ್ರೋತ್ಸಾಹ ನೀಡಲು ತಾನು ಸಿದ್ಧ ಎಂದರು.

ಆಸರೆ ಟ್ರಸ್ಟ್‌ನ ಅಧ್ಯಕ್ಷೆ ಡಾ. ಆಶಾಜ್ಯೋತಿ ರೈ ಮಾತನಾಡಿ, ನಾನು ಸಿಕ್ಕಿಂ ಪ್ರವಾಸಕ್ಕೆ ಹೋದಾಗ ಸೇನೆಯ ಡೇರೆಯಲ್ಲಿ ಕುಳಿತು ಚಹಾ ಕುಡಿಯುತ್ತಿದ್ದೆವು. ಆಗ ಯೋಧನೊಬ್ಬ ನಾವು ಮಾತನಾಡುತ್ತಿರುವುದು ಕಂಡು ಹತ್ತಿರ ಬಂದು ‘ನೀವು ಕರ್ನಾಟಕದವರೇ’ ಎಂದು ಕೇಳಿದಾಗ ನಿಜಕ್ಕೂ ನನಗೆ ಆಶ್ಚರ್ಯವಾಯಿತು. ಒಂದು ಕ್ಷಣ ಆತನನ್ನು ನೋಡಿ ಮಾತು ಬಾರದಂತಾಯಿತು. - 16 ಡಿಗ್ರಿ ಹವಾಮಾನವಿರುವ ಆ ಪ್ರದೇಶದಲ್ಲಿ ಜೀವಪಣಕ್ಕಿಟ್ಟು ದೇಶಕಾಯುವ ಆ ಯೋಧರ ಬಗ್ಗೆ ಯೋಚನೆ ಮಾಡುವ ನಿಜಕ್ಕೂ ರೋಮಾಂಚನವಾಗುತ್ತದೆ ಎಂದು ಭಾವುಕರಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News