ದ.ಕ.: 2000 ಜೈವಿಕ ಅನಿಲ ಘಟಕ ಸ್ಥಾಪನೆ ಗುರಿ: ಡಾ.ಎಂ.ಆರ್. ರವಿ

Update: 2017-08-21 14:23 GMT

ಮಂಗಳೂರು, ಆ.21: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದಡಿ 2000 ಜೈವಿಕ ಅನಿಲ ಘಟಕ ಸ್ಥಾಪನೆಯ ಗುರಿ ಹೊಂದಲಾಗಿದೆ ಎಂದು ದ.ಕ. ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಹಾಧಿಕಾರಿ ಡಾ. ಎಂ.ಆರ್. ರವಿ ತಿಳಿಸಿದ್ದಾರೆ.

ದ.ಕ. ಜಿಲ್ಲಾ ಪಂಚಾಯತ್‌ನ ನೇತ್ರಾವತಿ ಸಭಾಂಗಣದಲ್ಲಿ ಇಂದು ಸ್ವಚ್ಛ ಭಾರತ್ ಮಿಶನ್‌ನ ಸ್ವಚ್ಛತಾ ನೀತಿ- 2017ರಡಿ ನಮ್ಮ ತ್ಯಾಜ್ಯ ನಮ್ಮ ಹೊಣೆ ಎಂಬ ಮಾಹಿತಿ ಕಾರ್ಯಾಗಾರದಲ್ಲಿ ಈ ವಿಷಯ ತಿಳಿಸಿದರು.

ಕಳೆದ ವರ್ಷ ದ.ಕ. ಜಿಲ್ಲೆಯಲ್ಲಿ ಎಂಎನ್‌ಆರ್‌ಇ ಯೋಜನೆಯಡಿ 800 ಜೈವಿಕ ಅನಿಲ ಘಟಕ ಯೋಜನೆಗಳಿಗೆ ಅವಕಾಶ ನೀಡಲಾಗಿತ್ತು. ಆದರೆ ಕೇವಲ 420 ಘಟಕಗಳನ್ನು ಮಾತ್ರವೇ ಮಾಡಲಾಗಿತ್ತು. ಈ ವರ್ಷ 1000 ಘಟಕಗಳ ಸ್ಥಾಪನೆಯ ಗುರಿ ಒದಗಿಸಿದೆ. ಅದರ ಜತೆ, ಕೇವಲ ಅಡುಗೆ ತ್ಯಾಜ್ಯದಿಂದಲೇ 1000 ಘಟಕಗಳನ್ನು ಸ್ಥಾಪಿಸಲಾಗುವುದು. ಸರಕಾರವು ಈ ಘಟಕಗಳ ಸ್ಥಾಪನೆಗೆ ತಲಾ 12,000 ರೂ. ಸಬ್ಸಿಡಿಯನ್ನೂ ನೀಡುತ್ತದೆ ಎಂದವರು ಹೇಳಿದರು.

ದಕ್ಷಿಣ ಕನ್ನಡ ಜಿಲ್ಲೆಯ 133 ಸರಕಾರಿ ವಸತಿ ನಿಲಯಗಳಲ್ಲಿ ಜೈವಿಕ ಅನಿಲ ಘಟಕ ಸ್ಥಾಪನೆ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಸಂಬಂಧಪಟ್ಟ ಇಲಾಖೆಗಳಿಗೆ ಸೂಚನೆ ನೀಡಲಾಗಿದೆ. 24 ವಸತಿನಿಲಯಗಳಲ್ಲಿ ಎಂಆರ್‌ಪಿಎಲ್‌ನ ಕಾರ್ಪೊರೇಟ್ ಸಾಮಾಜಿಕ ಜವಾಬ್ಧಾರಿಯಡಿ (ಸಿಎಸ್‌ಆರ್) ಈ ಘಟಕಗಳನ್ನು ಸ್ಥಾಪಿಸಲು ಮಾತುಕತೆ ನಡೆದಿದೆ. ಜಿಲ್ಲೆಯ 100ಕ್ಕೂ ಅಧಿಕ ಶಿಕ್ಷಣ ಸಂಸ್ಥೆಗಳು, ವಸತಿ ನಿಲಯಗಳಲ್ಲಿ ಅನ್ನ ದಾಸೋಹ ಆಗುತ್ತಿದ್ದು, ಅಲ್ಲಿ ಇಂತಹ ಘಟಕಗಳನ್ನು ಸ್ಥಾಪಿಸುವ ಮೂಲಕ ಜಿಲ್ಲಾ ಪಂಚಾಯತ್‌ನ ಸ್ವಚ್ಛ ಭಾರತ್ ಮಿಶನ್ ಯೋಜನೆಯ ಜತೆ ಕೈಜೋಡಿಸಬಹುದಾಗಿದೆ. ಅಡುಗೆ ಮನೆ ತ್ಯಾಜ್ಯವನ್ನು ಮರು ಬಳಕೆ ಮಾಡುವ ಮೂಲಕ ಸ್ವಚ್ಛತೆಗೆ, ಸ್ವಚ್ಛ ಪರಿಸರಕ್ಕೆ ಕೊಡುಗೆ ನೀಡಬಹುದು ಎಂದು ಅವರು ಹೇಳಿದರು.

ತ್ಯಾಜ್ಯ ನಿರ್ವಹಣೆ ಸಮಸ್ಯೆ ಜಟಿಲವಾಗಿರುವುದರಿಂದ ಸ್ವಚ್ಛತೆ, ನೈರ್ಮಲ್ಯವೆಂಬುದು ಪ್ರತಿಯೊಬ್ಬರ ಸಾಮಾಜಿಕ ಜವಾಬ್ಧಾರಿ ಆಗಿ ಪರಿವರ್ತನೆಯಾಬೇಕು ಎಂದು ಅವರು ಹೇಳಿದರು.

ಕಾರ್ಯಾಗಾರವನ್ನು ಉದ್ಘಾಟಿಸಿದ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಮಾತನಾಡಿ, ಮನೆಗಳಿಂದಲೇ ತ್ಯಾಜ್ಯ ವಿಂಗಡಣೆಯೊಂದಿಗೆ ತ್ಯಾಜ್ಯ ವಿಲೇವಾರಿ ಆಗಬೇಕು ಎಂದರು.

ಕಾರ್ಯಾಗಾರದಲ್ಲಿ ವಿಜಯಾ ಇಂಡಸ್ಟ್ರೀಸ್‌ನ ಸತ್ಯೇಂದ್ರ ಪೈಯವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ವಿವಿಧ ರೀತಿಯ ಜೈವಿಕ ಅನಿಲ ಘಟಕಗಳ ಕುರಿತು ಮಾಹಿತಿ ನೀಡಿದರು.

ವೇದಿಕೆಯಲ್ಲಿ ಉಪಾಧ್ಯಕ್ಷೆ ಕಸ್ತೂರಿ ಪಂಜ, ಜಿ.ಪಂ. ಸದಸ್ಯ ಧರೇಂದ್ರ ಕುಮಾರ್ ಉಪಸ್ಥಿತರಿದ್ದರು. ಜಿ.ಪಂ. ಉಪ ಕಾರ್ಯದರ್ಶಿ ಎನ್.ಆರ್. ಉಮೇಶ್ ಸ್ವಾಗತಿಸಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News