ಬೆಳೆ ವಿಮೆ ಯೋಜನೆಯಿಂದ 90 ಲಕ್ಷಕ್ಕೂ ಅಧಿಕ ರೈತರಿಗೆ ಲಾಭ: ಪ್ರಧಾನಿಗೆ ಮಾಹಿತಿ

Update: 2017-08-21 13:22 GMT

ಹೊಸದಿಲ್ಲಿ,ಆ.21: ಬೆಳೆ ವಿಮೆ ಯೋಜನೆಯಿಂದ ಕಳೆದ ಸಾಲಿನ ಮುಂಗಾರು ಮತ್ತು 2016-17ನೇ ಸಾಲಿನ ಹಿಂಗಾರು ಋತುಗಳಲ್ಲಿ 90 ಲಕ್ಷಕ್ಕೂ ಅಧಿಕ ರೈತರಿಗೆ ಲಾಭವಾಗಿದೆ ಎಂದು ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅಧಿಕಾರಿಗಳು ಮಾಹಿತಿ ನೀಡಿದರು.

ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ಈಗಾಗಲೇ 7,700 ಕೋ.ರೂ. ಗೂ ಅಧಿಕ ವಿಮಾಹಣವನ್ನು ರೈತರಿಗೆ ಪಾವತಿಸಲಾಗಿದೆ ಎಂದೂ ಪ್ರಧಾನಿಯವರಿಗೆ ತಿಳಿಸಲಾಯಿತು ಎಂದು ಪ್ರಧಾನಿ ಕಚೇರಿಯ ಅಧಿಕೃತ ಹೇಳಿಕೆಯು ವಿವರಿಸಿದೆ.

ಬೆಳೆ ವಿಮೆ ಹಕ್ಕು ಕೋರಿಕೆಗಳಿಗೆ ಸಂಬಂಧಿಸಿದ ದತ್ತಾಂಶಗಳ ತ್ವರಿತ ಸಂಗ್ರಹಕ್ಕಾಗಿ ಸ್ಮಾರ್ಟ್ ಫೋನ್, ರಿಮೋಟ್ ಸೆನ್ಸಿಂಗ್, ಉಪಗ್ರಹ ಮಾಹಿತಿ ಮತ್ತು ಡ್ರೋನ್‌ಗಳಂ ತಹ ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂದೂ ಅಧಿಕಾರಿಗಳು ಸಭೆಗೆ ತಿಳಿಸಿದರು.

16 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಮಣ್ಣು ಆರೋಗ್ಯ ಕಾರ್ಡ್‌ಗಳ ವಿತರಣೆಯ ಮೊದಲ ಸುತ್ತನ್ನು ಪೂರ್ಣಗೊಳಿಸಿದ್ದು, ಇತರ ರಾಜ್ಯಗಳು ಕೆಲವೇ ವಾರಗಳಲ್ಲಿ ಇದನ್ನು ಪೂರ್ಣಗೊಳಿಸುವ ಸಾಧ್ಯತೆಗಳಿವೆ ಎಂದು ಅಧಿಕಾರಿಗಳು ಪ್ರಧಾನಿಯವರಿಗೆ ತಿಳಿಸಿದರು.

ಮಣ್ಣಿನ ಮಾದರಿಗಳ ಸಂಗ್ರಹಣೆ ವೇಳೆ ಮತ್ತು ವಿವಿಧ ಮಣ್ಣು ಪರೀಕ್ಷಾ ಕೇಂದ್ರಗಳಲ್ಲಿ ಸೂಕ್ತ ತಪಾಸಣೆಗಳನ್ನು ನಡೆಸುವುದರಿಂದ ಗುಣಮಟ್ಟದ ವರದಿ ಸಾಧ್ಯವೆಂದು ಹೇಳಿದ ಮೋದಿ, ಮಣ್ಣು ಆರೋಗ್ಯ ಕಾರ್ಡ್‌ಗಳಲ್ಲಿಯ ವಿವರಗಳನ್ನು ರೈತರು ಓದಿ ತಿಳಿದುಕೊಳ್ಳು ವಂತಾಗಲು ಅವುಗಳನ್ನು ಸ್ಥಳೀಯ ಭಾಷೆಗಳಲ್ಲಿ ಮುದ್ರಿಸುವಂತೆ ಸೂಚಿಸಿದರು.

ಇತ್ತೀಚಿನ ತಂತ್ರಜ್ಞಾನ ಅಳವಡಿಕೆಗೆ ಹೆಚ್ಚಿನ ಒತ್ತು ನೀಡಿದ ಅವರು, ಅಂತಿಮವಾಗಿ ಮಣ್ಣು ಪರೀಕ್ಷೆಯನ್ನು ಸ್ಥಳದಲ್ಲಿಯೇ ಕೈಗಳಲ್ಲಿ ಹಿಡಿಯುವ ಉಪಕರಣಗಳಿಂದ ಸಾಧ್ಯವಾಗುವಂತೆ ಮಾಡಬೇಕು ಮತ್ತು ಇದಕ್ಕಾಗಿ ಸ್ಟಾರ್ಟ್-ಅಪ್‌ಗಳು ಹಾಗೂ ಉದ್ಯಮಿಗಳನ್ನು ತೊಡಗಿಸಿಕೊಳ್ಳುವ ಸಾಧ್ಯತೆಗಳನ್ನು ಅನ್ವೇಷಿಸುವಂತೆ ಅಧಿಕಾರಿಗಳನ್ನು ಆಗ್ರಹಿಸಿದರು ಎಂದು ಹೇಳಿಕೆಯು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News