ಬೆಂಗಳೂರು ಜೈಲಿನಿಂದ ಶಶಿಕಲಾ ಹೊರಹೋಗಿದ್ದರೇ..?

Update: 2017-08-21 13:27 GMT

 ಬೆಂಗಳೂರು, ಆ.21:ಭ್ರಷ್ಟಾಚಾರದ ಆರೋಪದಲ್ಲಿ ನಾಲ್ಕು ವರ್ಷಗಳ ಜೈಲುಶಿಕ್ಷೆಗೆ ಗುರಿಯಾಗಿರುವ ಎಐಎಡಿಎಂಕೆ ಹಿರಿಯ ಮುಖಂಡೆ ವಿ.ಕೆ.ಶಶಿಕಲಾ ಜೈಲಿನಿಂದ ಹೊರಬಂದಿದ್ದರೇ ಎಂಬ ಅನುಮಾನಕ್ಕೆ ಕಾರಣವಾಗಿರುವ ಸಿಸಿಟಿವಿ ವಿಡಿಯೋ ದೃಶ್ಯಾವಳಿಯೊಂದು ಸೋಮವಾರ ಪ್ರಸಾರವಾಗಿದೆ.

ಸಾಮಾನ್ಯರಂತೆ (ಕೈದಿ ಸಮವಸ್ತ್ರ ಧರಿಸದೆ) ಬಟ್ಟೆತೊಟ್ಟುಕೊಂಡು ಶಶಿಕಲಾ ಮತ್ತಾಕೆಯ ಸೋದರಸೊಸೆ ಇಳವರಸಿ(ಇಬ್ಬರೂ ಅಕ್ರಮ ಆಸ್ತಿ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾದವರು) ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಒಳಗೆ ಪ್ರವೇಶಿಸುವ ದೃಶ್ಯ ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ಹಲವು ಪುರುಷ ಕಾವಲುಗಾರರನ್ನೂ ವಿಡಿಯೋದಲ್ಲಿ ನೋಡಬಹುದಾಗಿದೆ. ಪುರುಷ ಕಾವಲುಗಾರರು ಜೈಲಿನ ಮುಖ್ಯದ್ವಾರದಲ್ಲಿ ಕಾವಲಿರುತ್ತಾರೆ, ಇವರಿಗೆ ಮಹಿಳಾ ಕೈದಿಗಳ ವಿಭಾಗಕ್ಕೆ ಪ್ರವೇಶಾವಕಾಶ ಇರುವುದಿಲ್ಲ. ಕರ್ನಾಟಕದ ಬಂದೀಖಾನೆಯ ಮಾಜಿ ಸಹಾಯಕ ಡಿಐಜಿ ರೂಪಾ ಅವರು ಭ್ರಷ್ಟಾಚಾರ ನಿಗ್ರಹ ದಳಕ್ಕೆ ಜುಲೈಯಲ್ಲಿ ಸಲ್ಲಿಸಿರುವ ಸಾಕ್ಷಾಧಾರದಲ್ಲಿ ಈ ವಿಡಿಯೋ ದೃಶ್ಯಾವಳಿ ಕೂಡಾ ಸೇರಿದೆ ಎನ್ನಲಾಗಿದೆ.

 ಜೈಲಿನಲ್ಲಿ ಶಶಿಕಲಾಗೆ ರಾಜಮರ್ಯಾದೆ ನೀಡಲಾಗುತ್ತಿದ್ದು ಸಕಲ ಸೌಲಭ್ಯ ಒದಗಿಸಲಾಗುತ್ತಿದೆ ಎಂದು ರೂಪಾ ಆರೋಪಿಸಿದ್ದು ಇದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಶಶಿಕಲಾ ಮಾಜಿ ಡಿಐಜಿ(ಬಂಧೀಖಾನೆ) ಎಚ್.ಎನ್.ಸತ್ಯನಾರಾಯಣ ರಾವ್ ಸೇರಿದಂತೆ ಜೈಲಿನ ಅಧಿಕಾರಿಗಳಿಗೆ 2 ಕೋಟಿ ರೂ. ಲಂಚ ನೀಡಿದ್ದಾರೆ ಎಂದು ರೂಪಾ ಆರೋಪಿಸಿದ್ದರು. ಪ್ರಕರಣದ ಬಗ್ಗೆ ನ್ಯಾಯಾಂಗ ತನಿಖೆಗೆ ಕರ್ನಾಟಕ ಸರಕಾರ ಆದೇಶಿಸಿತ್ತು. ಅಲ್ಲದೆ ಆರೋಪ ಮಾಡಿರುವ ರೂಪಾರನ್ನು ವರ್ಗಾವಣೆ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News