×
Ad

ಒಂದು ತಿಂಗಳಲ್ಲಿ ಪಡಿತರ ಚೀಟಿ ವಿತರಣೆ: ಪ್ರದೀಪ್ ಕುರ್ಡೇಕರ್

Update: 2017-08-21 20:10 IST

ಉಡುಪಿ, ಆ.21: ಉಡುಪಿ ತಾಲೂಕಿನಿಂದ ಸಲ್ಲಿಕೆಯಾಗಿರುವ ಪಡಿತರ ಚೀಟಿಗೆ ಸಂಬಂಧಿಸಿದ ಅರ್ಜಿಗಳನ್ನು ಪರಿಶೀಲಿಸಿ ಒಂದು ತಿಂಗಳಲ್ಲಿ ಪಡಿತರ ಚೀಟಿ ನೀಡಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಉಡುಪಿ ಪ್ರಭಾರ ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್ ತಿಳಿಸಿದ್ದಾರೆ.

ಉಡುಪಿ ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್ ಅಧ್ಯಕ್ಷತೆಯಲ್ಲಿ ಇಂದು ನಡೆದ ತಾಪಂ ಸಾಮಾನ್ಯ ಸಭೆಯಲ್ಲಿ ಪಡಿತರ ಚೀಟಿ ಗೊಂದಲದ ಕುರಿತ ಸದಸ್ಯರ ಆರೋಪಗಳಿಗೆ ಉತ್ತರ ನೀಡಿದರು. ಮೊದಲ ಹಂತದಲ್ಲಿ ಪಡಿತರ ಚೀಟಿಗೆ ಬಂದ 1,862 ಅರ್ಜಿಗಳಲ್ಲಿ 1,518ರ ಪ್ರಕ್ರಿಯೆ ಪೂರ್ಣ ಗೊಳಿಸಲಾಗಿದೆ. ಇದರಲ್ಲಿ 344 ಅರ್ಜಿ ಪರಿಶೀಲನೆಗೆ ಬಾಕಿ ಇದೆ. 1,211 ಚೀಟಿಗಳ ಡಾಟಾ ಎಂಟ್ರಿ ಆಗಿದೆ. ಎರಡನೇ ಹಂತದಲ್ಲಿ ಮತ್ತೆ 1,821 ಅರ್ಜಿ ಸಲ್ಲಿಕೆಯಾಗಿದೆ ಎಂದರು.

ಆರಂಭದಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯ ಸುಧೀರ್ ಶೆಟ್ಟಿ, ಬ್ರಹ್ಮಾವರ ಬೆಣ್ಣೆಕುದ್ರುವಿನ ಬಿಲ್ಲವ ಹಾಗೂ ಬಂಟ ಕುಟುಂಬಗಳ ಪಡಿತರ ಚೀಟಿಯಲ್ಲಿ ಆಚಾತುರ್ಯ ನಡೆದಿದ್ದು, ಎರಡು ಕುಟುಂಬಗಳ ಹೆಸರುಗಳು ಅದಲು ಬದಲು ಆಗಿ ಸಮಸ್ಯೆಯಾಗಿದೆ. ಈ ಗೊಂದಲವು ಅಧಿಕಾರಿಗಳ ತಪ್ಪಿನಿಂದಾ ಗಿದೆ. ಈಗ ಈ ಎರಡು ಕುಟುಂಬಗಳಿಗೆ ಆಗಿರುವ ಅನ್ಯಾಯಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿದರು.

ಸದಸ್ಯ ಮೈಕಲ್ ಡಿಸೋಜ ಮಾತನಾಡಿ, ಮುದರಂಗಡಿ ಗ್ರಾಪಂ ವ್ಯಾಪ್ತಿಯ ವಿಕಲಚೇತನ ಮಹಿಳೆಯನ್ನು ಸರ್ವರ್ ಸಮಸ್ಯೆ ಎಂಬ ಕಾರಣ ಹೇಳಿ ಪಡಿತರ ಚೀಟಿಗಾಗಿ ಬೆಳಗ್ಗಿನಿಂದ ಸಂಜೆವರೆಗೆ ಕಾಯಿಸಲಾಗಿದೆ. ಕೆಲವು ಕಡೆಗಳಲ್ಲಿ ಬಿಪಿಎಲ್ ಅರ್ಹರಿಗೆ ಎಪಿಎಲ್ ಕಾರ್ಡ ಸಿಗುತ್ತಿದೆ. ಇದರಿಂದ ಅರ್ಹರಿಗೆ ತೊಂದರೆ ಆಗಿದೆ ಎಂದು ಆರೋಪಿಸಿದರು.

ಮೈನ್ ಶಾಲೆ ಸ್ಥಳಾಂತರ: ಯಾವುದೇ ಮುನ್ಸೂಚನೆ ನೀಡದೆ ಉಡುಪಿ ನಗರದಲ್ಲಿರುವ ಮೈನ್ ಶಾಲೆಯನ್ನು ಸ್ಥಳಾಂತರಿಸಲಾಗಿದೆ ಎಂದು ಉಪಾಧ್ಯಕ್ಷ ರಾಜೇಂದ್ರ ಪಂದುಬೆಟ್ಟು ದೂರಿದರು. ಇದಕ್ಕೆ ಉತ್ತರಿಸಿದ ಶಿಕ್ಷಣಾಧಿಕಾರಿಗಳು, ಜಿಲ್ಲಾಧಿಕಾರಿ ಸೂಚನೆಯಂತೆ ಮೈನ್ ಶಾಲೆಯ ವಿದ್ಯಾರ್ಥಿಗಳನ್ನು ತಾತ್ಕಾಲಿಕ ವಾಗಿ ಸೌತ್ ಶಾಲೆಗೆ ಸ್ಥಳಾಂತರಿಸಲಾಗಿದೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಸರಿಯಾದ ನಿರ್ಣಯ ತೆಗೆದುಕೊಳ್ಳಲಾಗುವುದು ಎಂದರು.
ಕಾಡೂರು ಗ್ರಾಪಂನ ತಂತ್ರಾಡಿ ಶಾಲೆಯ ಕಟ್ಟಡ ಕುಸಿಯುವ ಭೀತಿಯಲ್ಲಿದ್ದು, ಮಕ್ಕಳು ಅಪಾಯಕಾರಿ ಸ್ಥಿತಿಯಲ್ಲಿದ್ದಾರೆ. ಕಂಪೌಂಡ್ ಇಲ್ಲದೆ ಈ ಶಾಲೆಯ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತಿದೆ ಎಂದು ಸದಸ್ಯ ಭುಜಂಗ ಶೆಟ್ಟಿ ದೂರಿದರು.

ಬೆಳ್ಳೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಜೆ ಮೇಲೆ ತೆರಳಿ ತಿಂಗಳು ಕಳೆದಿದ್ದು, ಇದರಿಂದ ಗ್ರಾಮಸ್ಥರಿಗೆ ತುಂಬಾ ಸಮಸ್ಯೆಗಳಾಗುತ್ತಿವೆ. ಇದರ ವಿರುದ್ಧ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಸದಸ್ಯೆ ಸುಜಾತ ಸುವರ್ಣ ಒತ್ತಾಯಿಸಿದರು. ಕೂಡಲೇ ಹೆಜಮಾಡಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಯನ್ನು ಅಲ್ಲಿಗೆ ನಿಯೋಜಿಸಲಾಗುವುದು ಎಂದು ಕಾರ್ಯನಿರ್ವಹಣಾಧಿಕಾರಿ ತಿಳಿಸಿದರು.

ಮುದರಂಗಡಿ ಗ್ರಾಪಂ ವ್ಯಾಪ್ತಿಯ ಕಾಮಗಾರಿಯೊಂದನ್ನು ಪುನರ್ ಆರಂಭಿ ಸುವ ವಿಚಾರದ ಕುರಿತು ತಾಪಂ ಸದಸ್ಯ ಮೈಕಲ್ ಡಿಸೋಜ ವಿರುದ್ಧ ಪಂಚಾ ಯತ್ ಅಭಿವೃದ್ಧಿ ಅಧಿಕಾರಿ ಪೊಲೀಸರಿಗೆ ದೂರು ನೀಡಿದ್ದು, ಈ ಬಗ್ಗೆ ಸಭೆ ಯಲ್ಲಿ ಚರ್ಚೆಗಳು ನಡೆದವು. ಈ ರೀತಿ ತಾಪಂ ಸದಸ್ಯರ ವಿರುದ್ಧ ದೂರು ನೀಡಲು ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ಅಧಿಕಾರ ಇದೆಯೇ. ಅಧ್ಯಕ್ಷೆ ಹಾಗೂ ಕಾರ್ಯನಿರ್ವಹಣಾಧಿಕಾರಿಯವರ ಗಮನಕ್ಕೆ ತಾರದೆ ಈ ರೀತಿ ದೂರು ನೀಡಿರುವುದು ಸರಿಯಲ್ಲ ಎಂದು ಮೈಕಲ್ ಡಿಸೋಜ ಹೇಳಿದರು.

ಸಭೆಯಲ್ಲಿ ಹಾಜರಿದ್ದ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಅಧಿಕಾರಿಗಳು ಜನಪ್ರತಿನಿಧಿಗಳ ವಿರುದ್ಧ ಈ ರೀತಿ ದೂರು ನೀಡುವುದು ಸರಿಯಲ್ಲ. ಈ ಬಗ್ಗೆ ಎರಡು ಮೂರು ದಿನಗಳಲ್ಲಿ ಪರಿಶೀಲಿಸಿ ಸದಸ್ಯರಿಗೆ ಅನ್ಯಾಯವಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.

ತಾಪಂ ಸದಸ್ಯರಿಗೆ ಹಲ್ಲೆ: ಖಂಡನಾ ನಿರ್ಣಯ
ಉಡುಪಿ ತಾಪಂ ಸದಸ್ಯ ಸುಭಾಶ್ ನಾಯಕ್‌ಗೆ ಹಲ್ಲೆ ನಡೆಸಿದ ಪೆರ್ಡೂರು ಗ್ರಾಪಂ ಸದಸ್ಯ ಗಿರೀಶ್ ಭಟ್ ವಿರುದ್ಧ ಸಭೆಯಲ್ಲಿ ಖಂಡನಾ ನಿರ್ಣಯ ಕೈಗೊಳ್ಳಲಾಯಿತು.

ಪೆರ್ಡೂರು ಗ್ರಾಮಸಭೆಗೆ ಹೋದ ನನ್ನ ಮೇಲೆ ಗಿರೀಶ್ ಭಟ್ ಎಂಬವರು ಹಲ್ಲೆಗೈದು, ಅವಾಚ್ಯ ಶಬ್ದಗಳಿಂದ ಬೈದು ನಿಂದಿಸಿದ್ದಾರೆ. ತಾಪಂ ಸದಸ್ಯರಿಗೆ ಯಾವುದೇ ಅಧಿಕಾರವೇ ಇಲ್ಲವೇ ಎಂದು ಸುಭಾಶ್ ನಾಯಕ್ ಅಳಲು ತೋಡಿಕೊಂಡರು. ಈ ಕುರಿತು ತೆಗೆದುಕೊಂಡ ಖಂಡನಾ ನಿರ್ಣಯಕ್ಕೆ ಎಲ್ಲ ಸದಸ್ಯರು ಅನುಮೋದನೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News