ಶರತ್ ಮಡಿವಾಳ ಹತ್ಯೆ: ಮತ್ತೋರ್ವ ಆರೋಪಿ ಸೆರೆ?
Update: 2017-08-21 21:05 IST
ಮಂಗಳೂರು, ಆ.21: ಆರೆಸ್ಸೆಸ್ ಕಾರ್ಯಕರ್ತ ಶರತ್ ಮಡಿವಾಳ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯೊಬ್ಬನನ್ನು ಮಂಗಳೂರು ಪೊಲೀಸರು ಮೈಸೂರಿನಲ್ಲಿ ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಬಂಧಿತ ಆರೋಪಿಯನ್ನು ಸಜಿಪಮುನ್ನೂರಿನ ಆಲಾಡಿಯ ಶರೀಫ್ (22) ಎಂದು ತಿಳಿದುಬಂದಿದೆ. ಈತನನ್ನು ಮೈಸೂರಿನಲ್ಲಿ ಬಂಧಿಸಿರುವ ಪೊಲೀಸರು ಮಂಗಳೂರಿಗೆ ಕರೆ ತಂದಿದ್ದಾರೆ ಎಂದು ಹೇಳಲಾಗುತ್ತಿದೆ. ಈತ ಹತ್ಯೆಯಲ್ಲಿ ನೇರವಾಗಿ ಪಾಲ್ಗೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪೊಲೀಸರು ನೀಡುತ್ತಿಲ್ಲ.
ಈತ ಪ್ರಕರಣವೊಂದಕ್ಕೆ ಸಂಬಂಧಪಟ್ಟಂತೆ ಕಾಲೇಜ್ ನಿಂದ ಅಮಾನತುಗೊಂಡಿದ್ದ ಎಂದು ತಿಳಿದುಬಂದಿದೆ. ಶರತ್ ಮಡಿವಾಳ ಹತ್ಯೆ ಪ್ರಕರಣದಲ್ಲಿ ಈಗಾಗಲೇ ಪೊಲೀಸರು ಎಂಟು ಮಂದಿಯನ್ನು ಬಂಧಿಸಿದ್ದಾರೆ. ಇದರೊಂದಿಗೆ ಬಂಧಿತರ ಸಂಖ್ಯೆ 9ಕ್ಕೆ ಏರಿದೆ.
ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬಾತ ವಿದೇಶಕ್ಕೆ ತೆರಳಿದ್ದಾನೆ ಎಂಬ ಶಂಕೆಯನ್ನೂ ಪೊಲೀಸರು ವ್ಯಕ್ತಪಡಿಸಿದ್ದಾರೆ.