ಭಾಸ್ಕರ್ ಶೆಟ್ಟಿ ಕೊಲೆ ಆರೋಪಿಗಳಿಗೆ ರಾಜಾತಿಥ್ಯ: ಡಿಎಆರ್ ಎಎಸ್ಸೈ ಸಹಿತ ಮೂವರು ಪೊಲೀಸರ ಅಮಾನತು
ಉಡುಪಿ, ಆ. 21: ಉದ್ಯಮಿ ಭಾಸ್ಕರ ಶೆಟ್ಟಿ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳಾದ ರಾಜೇಶ್ವರಿ ಶೆಟ್ಟಿ, ನವನೀತ್ ಶೆಟ್ಟಿ, ನಿರಂಜನ್ ಭಟ್ ಇಂದು ನ್ಯಾಯಾಲಯಕ್ಕೆ ಹಾಜರಾಗಲು ಹವಾನಿಯಂತ್ರಿತ ಇನ್ನೋವಾ ಕಾರಿನ ವ್ಯವಸ್ಥೆ ಕಲ್ಪಿಸಿ ರಾಜಾತಿಥ್ಯ ನೀಡಿರುವ ಎಎಸ್ಸೈ ಸಹಿತ ಮೂವರು ಪೊಲೀಸ್ ಸಿಬ್ಬಂದಿ ಗಳನ್ನು ಉಡುಪಿ ಎಸ್ಪಿ ಡಾ. ಸಂಜೀವ ಪಾಟೀಲ್ ಅಮಾನತುಗೊಳಿಸಿದ್ದಾರೆ.
ಆರೋಪಿಗಳಿಗೆ ಭದ್ರತಾ ಕರ್ತವ್ಯ ನಿರ್ವಹಿಸಿದ ಉಡುಪಿ ಸಶಸ್ತ್ರ ಮೀಸಲು ಪಡೆಯ ಸಹಾಯಕ ಉಪನಿರೀಕ್ಷಕ ಸುಧಾಕರ್, ಮಣಿಪಾಲ ಪೊಲೀಸ್ ಠಾಣೆಯ ಮಹಿಳಾ ಸಿಬ್ಬಂದಿ ರೇಣುಕಾ ಹಾಗೂ ಕಾನ್‌ಸ್ಟೇಬಲ್ ಸಲ್ಮಾನ್ ಖಾನ್ ಅವರನ್ನು ಅಮಾನುತುಗೊಳಿಸಲಾಗಿದೆ.
ಮಂಗಳೂರು ಜೈಲಿನಲ್ಲಿದ್ದ ಈ ಮೂವರು ಆರೋಪಿಗಳನ್ನು ಪೊಲೀಸರು ಇಂದು ವಿಚಾರಣೆಗಾಗಿ ಉಡುಪಿ ನ್ಯಾಯಾಲಯಕ್ಕೆ ಸರಕಾರಿ ವಾಹನ ಅಥವಾ ಬಸ್‌ಗಳಲ್ಲಿ ಕರೆದುಕೊಂಡು ಬರಬೇಕಿತ್ತು. ಆದರೆ ಅದರ ಬದಲು ಪೊಲೀಸರು ಆರೋಪಿಗಳೇ ಗೊತ್ತು ಮಾಡಿದ ಖಾಸಗಿ ಹವಾನಿಯಂತ್ರಿತ ಇನೋವಾ ಕಾರಿನಲ್ಲಿ ಕರೆದುಕೊಂಡು ಬಂದಿದ್ದರು. ಪೊಲೀಸರು ಕೂಡ ಆರೋಪಿಗಳ ಜೊತೆ ಇದೇ ವಾಹನದಲ್ಲಿ ಬಂದಿದ್ದರು.
ಪೊಲೀಸರು ಆರೋಪಿಗಳನ್ನು ನ್ಯಾಯಾಲಯದ ಎದುರಿನಿಂದ ಕರೆದು ಕೊಂಡು ಬರುವ ಬದಲು ಹಿಂದಿನಿಂದ ಕರೆದುಕೊಂಡು ಬಂದಿದ್ದರು. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ವಾಪಾಸ್ ಕರೆದುಕೊಂಡು ಹೋಗುವಾಗ ಶಂಕಿತ ನಕ್ಸಲ್ ವೀರಮಣಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸುವ ಬಗ್ಗೆ ವರದಿ ಮಾಡಲು ನ್ಯಾಯಾಲಯಕ್ಕೆ ಆಗಮಿಸಿದ್ದ ಮಾಧ್ಯಮದವರಿಗೆ ಈ ದೃಶ್ಯ ಕಂಡುಬಂದಿತು. ಕೊಲೆ ಆರೋಪಿಗಳಿಗೆ ಈ ರೀತಿ ರಾಜಾತಿಥ್ಯ ನೀಡಿರುವ ವಿಚಾರ ಮಾಧ್ಯಮಗಳಲ್ಲಿ ಬಿತ್ತರಗೊಂಡಿತು.
ಈ ಹಿನ್ನೆಲೆಯಲ್ಲಿ ಉಡುಪಿ ಎಸ್ಪಿ ಡಾ. ಸಂಜೀವ ಪಾಟೀಲ್ ಪ್ರಕರಣದ ವಿಚಾರಣೆಗೆ ಆದೇಶ ನೀಡಿದರು. ಅದರಂತೆ ಉಡುಪಿ ಡಿವೈಎಸ್ಪಿ ಕುಮಾರ ಸ್ವಾಮಿ ಪ್ರಕರಣದ ಪ್ರಾಥಮಿಕ ತನಿಖೆಯನ್ನು ನಡೆಸಿ ಎಸ್ಪಿಯವರಿಗೆ ವರದಿ ನೀಡಿದರು.
‘ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದ ಮೂವರು ಆರೋಪಿಗಳ ಭದ್ರತಾ ಕರ್ತವ್ಯದಲ್ಲಿ ಪೊಲೀಸರು ಘೋರ ನಿರ್ಲಕ್ಷ್ಯ ವಹಿಸಿರುವುದು ಕಂಡು ಬಂದಿದ್ದು, ಈ ಹಿನ್ನೆಲೆಯಲ್ಲಿ ಇವರನ್ನು ಮುಂದಿನ ಇಲಾಖಾ ತನಿಖೆ ಪೂರ್ಣಗೊಳ್ಳುವವರೆಗೆ ಅಮಾನತುಗೊಳಿಸಲಾಗಿದೆ’ ಎಂದು ಎಸ್ಪಿ ಡಾ.ಸಂಜೀವ ಪಾಟೀಲ್ ಅಮಾನತು ಆದೇಶದಲ್ಲಿ ತಿಳಿಸಿದ್ದಾರೆ.
ಈ ಹಿಂದೆ, ತನಿಖೆಯ ಸಂದರ್ಭ ನವನೀತ್ ಶೆಟ್ಟಿಯನ್ನು ಪೊಲೀಸ್ ಜೀಪಿನ ಮುಂದಿನ ಸೀಟಿನಲ್ಲಿ ಕುಳ್ಳಿರಿಸಿ ಕರೆದುಕೊಂಡು ಹೋಗಿರುವುದು ಮತ್ತು ಮೂವರು ಆರೋಪಿಗಳಿಗೆ ನಿಟ್ಟೆಯ ಪ್ರತಿಷ್ಠಿತ ಹೋಟೆಲೊಂದರಲ್ಲಿ ಊಟ ನೀಡಿರುವುದು ಮತ್ತು ರಾಜೇಶ್ವರಿ ಶೆಟ್ಟಿಯನ್ನು ಖಾಸಗಿ ಬಸ್‌ನಲ್ಲಿ ಉಡುಪಿ ನ್ಯಾಯಾಲಯಕ್ಕೆ ಕರೆದುಕೊಂಡು ಬಂದಿರುವ ವಿಚಾರ ಸಾಕಷ್ಟು ವಿವಾದ ಸೃಷ್ಟಿಸಿದ್ದವು.
ಚಾರ್ಚ್ ವಾಚಿಸುವ ಪ್ರಕ್ರಿಯೆ ಮುಂದೂಡಿಕೆ
ಉಡುಪಿಯ ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಇಂದು ಪ್ರಮುಖ ಆರೋಪಿಗಳಾದ ರಾಜೇಶ್ವರಿ ಶೆಟ್ಟಿ, ನವನೀತ್ ಶೆಟ್ಟಿ, ನಿರಂಜನ್ ಭಟ್, ಸಾಕ್ಷನಾಶ ಆರೋಪಿಗಳಾದ ಶ್ರೀನಿವಾಸ ಭಟ್, ರಾಘವೇಂದ್ರ ಅವರನ್ನು ಇಂದು ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು.
ಪ್ರಕರಣಕ್ಕೆ ಸಂಬಂಧಿಸಿ ಸಿಒಡಿ ಪೊಲೀಸರು ಹೆಚ್ಚುವರಿ ಆರೋಪಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸದ ಹಿನ್ನೆಲೆಯಲ್ಲಿ ಆರೋಪಿಗಳ ದೋಷಾರೋಪ ವಾಚಿಸುವ ಪ್ರಕ್ರಿಯೆಯನ್ನು ನ್ಯಾಯಾಧೀಶ ವೆಂಕಟೇಶ್ ನಾಯ್ಕಾ ಅ. 23ಕ್ಕೆ ಮುಂದೂಡಿ ಆದೇಶ ನೀಡಿದರು. ಈ ಸಂದರ್ಭ ಜಿಲ್ಲಾ ಸರಕಾರಿ ಅಭಿ ಯೋಜಕಿ ಶಾಂತಿ ಬಾಯಿ ಹಾಜರಿದ್ದರು.