ಆ. 22ರಂದು ಪೇಜಾವರ ಶ್ರೀ ಮಠಕ್ಕೆ?
ಉಡುಪಿ, ಆ.21: ಪರ್ಯಾಯ ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಅವರು ರವಿವಾರ ನಡೆದ ಶಸ್ತ್ರಚಿಕಿತ್ಸೆಯ ಬಳಿಕ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಪೇಜಾವರ ಮಠದ ಕಿರಿಯ ಯತಿಗಳಾದ ಶ್ರೀವಿಶ್ವಪ್ರಸನ್ನ ತೀರ್ಥ ಶ್ರೀ ಇದೇ ಮೊದಲ ಬಾರಿ ಶ್ರೀಕೃಷ್ಣ ಮಠದಲ್ಲಿ ಸೋಮವಾರ ಅಪರಾಹ್ನ ಮಹಾಪೂಜೆ ನಡೆಸಿದರು.
ಮಣಿಪಾಲ ಆಸ್ಪತ್ರೆಯಲ್ಲಿ ಶ್ರೀವಿಶ್ವೇಶತೀರ್ಥ ಶ್ರೀ ಯನ್ನು ಸೋಮವಾರ ಪರೀಕ್ಷಿಸಿದ ವೈದ್ಯರು ಇಂದೇ ಆಸ್ಪತ್ರೆಯಿಂದ ಬಿಡುಗಡೆಗೊಳಿಸಲು ಒಪ್ಪಲ್ಲಿಲ್ಲ. ಸ್ವಾಮೀಜಿ ಮಠಕ್ಕೆ ತೆರಳಲು ಉತ್ಸುಕರಾಗಿದ್ದರೂ ವೈದ್ಯರ ಒಪ್ಪಿಗೆ ಇಲ್ಲದ ಕಾರಣ ಕಿರಿಯ ಶ್ರೀಗಳಿಗೆ ದೂರವಾಣಿ ಕರೆ ಮಾಡಿ, ಪರ್ಯಾಯಕ್ಕೆ ಪೂರ್ವದಲ್ಲೇ ತಾವಿಬ್ಬರು ನಿರ್ಧರಿಸಿದಂತೆ ನಮ್ಮ ಅನುಪಸ್ಥಿತಿಯಲ್ಲಿ ಇಂದಿನ ಮಹಾ ಪೂಜೆಯನ್ನು ನೀವು ಸಲ್ಲಿಸಿ ಎಂದು ತಿಳಿಸಿದರು. ಹಿರಿಯ ಸ್ವಾಮೀಜಿಗಳ ಆಗಮನಕ್ಕಾಗಿ11:30ರವರೆಗೂ ಕಾದಿದ್ದ ಕಿರಿಯಶ್ರೀಗಳು ಬಳಿಕ ಮಹಾಪೂಜೆ ನಡೆಸಿದರು.
ಮಣಿಪಾಲ ಆಸ್ಪತ್ರೆಯ ಪ್ರತ್ಯೇಕ ಕೊಠಡಿಯಲ್ಲಿ ವೈದ್ಯರ ನಿಗಾದಲ್ಲಿರುವ ಪೇಜಾವರ ಶ್ರೀಗಳು ತಮ್ಮ ದೈನಂದಿನ ಧಾರ್ಮಿಕ ಕೈಂಕರ್ಯಗಳನ್ನು ನಡೆಸಿದರು. ಮಂಗಳವಾರ ಅವರು ಆಸ್ಪತ್ರೆಯಿಂದ ಮಠಕ್ಕೆ ಮರಳುವ ನಿರೀಕ್ಷೆ ಇದೆ.
ಸಚಿವರಿಂದ ಭೇಟಿ: ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಹರ್ನಿಯಾ ಶಸ್ತ್ರಚಿಕಿತ್ಸೆಯ ಬಳಿಕ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿರುವ ಪರ್ಯಾಯ ಪೇಜಾವರ ಮಠದ ಶ್ರೀವಿಶ್ವೇಶ್ವತೀರ್ಥ ಸ್ವಾಮೀಜಿ ಅವರನ್ನು ಇಂದು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ಸ್ವಾಮೀಜಿ ಅವರೊಂದಿಗೆ ಮಾತನಾಡಿದ ಪ್ರಮೋದ್, ಶೀಘ್ರ ಗುಣಮುಖ ರಾಗುವಂತೆ ಹಾರೈಸಿದರು.
ಅದೇ ರೀತಿ ಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ ಅವರೂ ಆಸ್ಪತ್ರೆಗೆ ಭೇಟಿ ನೀಡಿ ಪೇಜಾವರಶ್ರೀಗಳ ಆರೋಗ್ಯ ವಿಚಾರಿಸಿದರು.