‘ಕಾಡಂಕಲ್ಲ್ ಮನೆ’ ಕಾದಂಬರಿಗೆ ಕಸಾಪ ದತ್ತಿನಿಧಿ ಪ್ರಶಸ್ತಿ

Update: 2017-08-22 13:55 GMT

ಮಂಗಳೂರು, ಆ. 22: ಹಿರಿಯ ಲೇಖಕ ಮುಹಮ್ಮದ್ ಕುಳಾಯಿಯವರ ‘ಕಾಡಂಕಲ್ಲ್ ಮನೆ’ ಕಾದಂಬರಿಯು ಕನ್ನಡ ಸಾಹಿತ್ಯ ಪರಿಷತ್‌ನ 2016ನೆ ಸಾಲಿನ ಗುಬ್ಬಿ ಸೋಲೂರು ಮರುಘಾರಾಧ್ಯ ದತ್ತಿ ಪ್ರಶಸ್ತಿಗೆ ಆಯ್ಕೆಯಾಗಿದೆ.

‘ವಾರ್ತಾಭಾರತಿ’ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿದ್ದ ‘ಕಾಡಂಕಲ್ಲ್ ಮನೆ’ ಕಾದಂಬರಿ ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘ ನೀಡುವ ಪ್ರತಿಷ್ಠಿತ ‘ಹೇಮಂತ ಸಾಹಿತ್ಯ- ವರ್ಷದ ಲೇಖಕ 2016’ ಪ್ರಶಸ್ತಿಯನ್ನು ಗಳಿಸಿದೆ. ಈ ಕಾದಂಬರಿಯನ್ನು ಮಂಗಳೂರಿನ ಇರುವೆ ಪ್ರಕಾಶನ ಪ್ರಕಟಿಸಿದೆ.

ಮುಹಮ್ಮದ್ ಕುಳಾಯಿಯವರು ಕುಚ್ಚಿಕಾಡಿನ ಕಪ್ಪು ಹುಡುಗ (ಕಥಾ ಸಂಕಲನ), ಕದನ ಕುತೂಹಲ (ಕಥಾ ಸಂಕಲನ), ನನ್ನ ಇನ್ನಷ್ಟು ಕತೆಗಳು (ಕಥಾ ಸಂಕಲನ), ಚೌಟರ ಮಿತ್ತಬೈಲ್ ಯಮುನಕ್ಕ (ಕನ್ನಡಾನುವಾದ-ಕಾದಂಬರಿ- ತುಳುಮೂಲ), ರಂಗನೋ ಮಲೆ ಮಂಗನೋ (ಕನ್ನಡ ಅನುವಾದ-ಕಾದಂಬರಿ- ತುಳು ಮೂಲ), ಪೆರ್ನಾಲ್ (ಬ್ಯಾರಿ ಭಾಷೆಯ ಕಥಾ ಸಂಕಲನ), ಅರೆಬಿಯನ್ ನೈಟ್ಸ್ ಕತೆಗಳು (ಬ್ಯಾರಿ ಭಾಷೆಯಲ್ಲಿ) ವೊದಲಾದ ಕೃತಿಗಳನ್ನು ರಚಿಸಿದ್ದಾರೆ.

ಇವರ ‘ನನ್ನ ಇನ್ನಷ್ಟು ಕತೆಗಳು’ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್‌ನ ‘ವಸುದೇವ ಭೂಪಾಲಂ’ ದತ್ತಿ ಪ್ರಶಸ್ತಿ, ಮಂಗಳೂರಿನ ಮುಸ್ಲಿಮ್ ಲೇಖಕರ ಸಂಘದ ಮುಸ್ಲಿಮ್ ಸಾಹಿತ್ಯ ಪ್ರಶಸ್ತಿ, ‘ಮಿತ್ತಬೈಲ್ ಯಮುನಕ್ಕ’ ಕಾದಂಬರಿಗೆ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅನುವಾದ ಪ್ರಶಸ್ತಿ ಹಾಗೂ ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಅನುವಾದ ಪ್ರಶಸ್ತಿ, ಬೆಂಗಳೂರಿನ ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ, ‘ಕದನ ಕುತೂಹಲ’ ಕೃತಿಗೆ ಶಿವಮೊಗ್ಗ ಕರ್ನಾಟಕ ಸಂಘದ ಪಿ.ಲಂಕೇಶ್ ಪ್ರಶಸ್ತಿ ಹಾಗೂ ಮಂಗಳೂರಿನ ನಿರತ ಸಾಹಿತ್ಯ ಸಂಘದ ನಿರತ ಸಾಹಿತ್ಯ ಪ್ರಶಸ್ತಿ, ಸಾಹಿತ್ಯ ಕ್ಷೇತ್ರದ ಸೇವೆಗಾಗಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಮಿಯ ಗೌರವ ಪ್ರಶಸ್ತಿಗಳು ಲಭಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News