‘ನೀಟ್’ ಪಾಲಿಸಿ: ತಮಿಳುನಾಡಿಗೆ ಸುಪ್ರೀಂ ಸೂಚನೆ

Update: 2017-08-22 14:25 GMT

ಹೊಸದಿಲ್ಲಿ, ಆ.22: ವೈದ್ಯಕೀಯ ಪದವಿಗೆ ಪ್ರವೇಶ ಪಡೆಯಬಯಸುವ ತಮಿಳುನಾಡಿನ ವಿದ್ಯಾರ್ಥಿಗಳು ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ(ನೀಟ್) ಆಧಾರಿತ ಕೌನ್ಸೆಲಿಂಗ್ ಅನ್ನು ಅನುಸರಿಸಬೇಕು ಎಂದು ಸುಪ್ರೀಂಕೋರ್ಟ್ ಆದೇಶಿಸಿದೆ.

 ವೈದ್ಯಕೀಯ ಪದವಿಗೆ (ದಂತ ವೈದ್ಯಕೀಯ ಪದವಿ ಸೇರಿದಂತೆ) ನಡೆಯುವ ಎಲ್ಲಾ ಪ್ರವೇಶ ಪ್ರಕ್ರಿಯೆಗಳೂ ‘ನೀಟ್’ ಆಧಾರದಲ್ಲೇ ನಡೆಯಬೇಕು ಎಂದು ಸುಪ್ರೀಂಕೋರ್ಟ್ ನೀಡಿರುವ ಆದೇಶ ತಮಿಳುನಾಡಿಗೆ ಆಗಿರುವ ಹಿನ್ನಡೆ ಎಂದು ಭಾವಿಸಲಾಗಿದೆ. ರಾಜ್ಯದ ವೈದ್ಯಕೀಯ ವಿದ್ಯಾರ್ಥಿಗಳಿಗೆ ‘ನೀಟ್’ನಿಂದ ವಿನಾಯಿತಿ ನೀಡಬೇಕು ಎಂದು ಕೋರಿ ತಮಿಳುನಾಡು ಸರಕಾರ ಜಾರಿಗೊಳಿಸಿದ್ದ ಕಾಯಿದೆಯ ಬಗ್ಗೆ ಅಟಾರ್ನಿ ಜನರಲ್ ಜೊತೆ ಚರ್ಚಿಸಿದ ಬಳಿಕ ಕೇಂದ್ರ ಕಾನೂನು ಸಚಿವರು ಆಗಸ್ಟ್ 16ರಂದು ಒಪ್ಪಿಗೆ ನೀಡಿದ್ದರು.

   ವೈದ್ಯಕೀಯ ಪದವಿ ಪ್ರವೇಶಕ್ಕೆ ‘ನೀಟ್’ನಿಂದ ಒಂದು ವರ್ಷದ ಮಟ್ಟಿಗೆ ವಿನಾಯಿತಿ ನೀಡಬೇಕೆಂದು ತಮಿಳುನಾಡು ಸರಕಾರ ಕಾಯಿದೆ ಜಾರಿಗೊಳಿಸಿದರೆ ಇದನ್ನು ಕೇಂದ್ರ ಸರಕಾರ ಬೆಂಬಲಿಸಲಿದೆ ಎಂದು ಕೇಂದ್ರ ವಾಣಿಜ್ಯ ಸಚಿವೆ ನಿರ್ಮಲಾ ಸೀತಾರಾಮನ್ ಇತ್ತೀಚೆಗೆ ತಿಳಿಸಿದ್ದರು.

 ‘ನೀಟ್’ ಕುರಿತು ತಮಿಳುನಾಡು ಮುಖ್ಯಮಂತ್ರಿ ಪಳನಿಸಾಮಿ, ಲೋಕಸಭೆಯ ಉಪಸ್ಪೀಕರ್ ಎಂ.ಥಂಬಿದುರೈ ಪ್ರಧಾನಿ ಮೋದಿಯ ಜೊತೆ ಹಲವು ಬಾರಿ ಚರ್ಚೆ ನಡೆಸಿದ್ದರು.

   

  ಆದರೆ , ಈ ಆಧ್ಯಾದೇಶಕ್ಕೆ ಒಪ್ಪಿಗೆ ನೀಡಿದರೆ ಇತರ ರಾಜ್ಯಗಳಿಗೂ ಪ್ರೇರಣೆ ನೀಡಿದಂತಾದೀತು. ಅಲ್ಲದೆ ಸಾಮಾನ್ಯ ಪ್ರವೇಶ ಪರೀಕ್ಷೆ ಎಂಬ ಪ್ರಕ್ರಿಯೆ ಅರ್ಥ ಕಳೆದುಕೊಳ್ಳುತ್ತದೆ ಎಂದು ಕೇಂದ್ರ ಸರಕಾರ ಮಂಗಳವಾರ ತಿಳಿಸಿದೆ. ಮೇಧಾವಿತನದ ವಿಷಯದಲ್ಲಿ ಯಾವುದೇ ರಾಜಿಯಿಲ್ಲ ಎಂದು ತಿಳಿಸಿದ್ದ ಸುಪ್ರೀಂಕೋರ್ಟ್, ತಮಿಳುನಾಡಿನಲ್ಲಿ ವೈದ್ಯಕೀಯ ಪದವಿಗೆ ಪ್ರವೇಶ ಕುರಿತಂತೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಕಳೆದ ಗುರುವಾರ ಸೂಚಿಸಿತ್ತು. ಕಲಿಕೆಯಲ್ಲಿ ‘ಅಷ್ಟೊಂದು ಉತ್ತಮವಾಗಿಲ್ಲದ’ ಗ್ರಾಮೀಣ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವುದು ತನ್ನ ಉದ್ದೇಶ ಎಂಬ ರಾಜ್ಯ ಸರಕಾರದ ಕಾರಣವನ್ನು ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರ, ಅಮಿತವ ರಾಯ್ ಮತ್ತು ಎ.ಕೆ.ಖಾನ್‌ವಿಲ್ಕರ್ ಅವರನ್ನೊಳಗೊಂಡ ನ್ಯಾಯಾಲಯ ಪೀಠ ಒಪ್ಪಿರಲಿಲ್ಲ.

‘ನೀಟ್’ನಿಂದ ರಾಜ್ಯದ ವಿದ್ಯಾರ್ಥಿಗಳಿಗೆ ವಿನಾಯಿತಿ ನೀಡಬೇಕೆಂಬ ರಾಜ್ಯ ಸರಕಾರದ ಮನವಿ ಒಂದು ರಾಜಕೀಯ ಆಟವಾಗಿದೆ . ಇದರಿಂದ ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಂದರೆಯಾಗಲಿದೆ ಎಂದು ಹಲವು ವಿದ್ಯಾರ್ಥಿಗಳು ಹಿರಿಯ ವಕೀಲರಾದ ನಳಿನಿ ಚಿದಂಬರಂ ಅವರ ಮೂಲಕ ಸುಪ್ರೀಂಕೋರ್ಟ್‌ಗೆ ಮನವಿ ಸಲ್ಲಿಸಿದ್ದರು.

ಎಂಬಿಬಿಎಸ್ ಮತ್ತು ಬಿಡಿಎಸ್ ಪದವಿಯ ಶೇ.85ರಷ್ಟು ಸೀಟುಗಳನ್ನು ರಾಜ್ಯ ಪರೀಕ್ಷಾ ಮಂಡಳಿಯ ವಿದ್ಯಾರ್ಥಿಗಳಿಗೆ ಹಾಗೂ ಉಳಿದ ಶೇ.15ರಷ್ಟು ಸೀಟುಗಳನ್ನು ಸಿಬಿಎಸ್‌ಇ ಹಾಗೂ ಇತರ ವಿದ್ಯಾರ್ಥಿಗಳಿಗೆ ಮೀಸಲಿಡುವ ತಮಿಳುನಾಡು ಸರಕಾರದ ಆದೇಶವನ್ನು ಮದ್ರಾಸ್ ಹೈಕೋರ್ಟ್ ಜುಲೈ 14ರಂದು ರದ್ದುಗೊಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News