ಅಫ್ಘಾನ್‌ನಲ್ಲಿ ಅಮೆರಿಕ ಸೈನಿಕರ ಹೆಚ್ಚಳಕ್ಕೆ ಟ್ರಂಪ್ ಅಸ್ತು

Update: 2017-08-22 14:38 GMT

ವಾಶಿಂಗ್ಟನ್, ಆ. 22: ಅಫ್ಘಾನಿಸ್ತಾನ ಕುರಿತ ತನ್ನ ತಂತ್ರಗಾರಿಕೆಯನ್ನು ಬದಲಾಯಿಸಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಆ ದೇಶದಲ್ಲಿರುವ ಅಮೆರಿಕ ಸೈನಿಕರ ಸಂಖ್ಯೆಯನ್ನು ಹೆಚ್ಚಿಸುವ ಪ್ರಸ್ತಾಪವನ್ನು ಮುಂದಿಟ್ಟಿದ್ದಾರೆ.

ಅಮೆರಿಕದ ಮೇಲೆ ದಾಳಿ ನಡೆಸಲು ಪಣತೊಟ್ಟಿರುವ ಭಯೋತ್ಪಾದಕರಿಗೆ ಅಫ್ಘಾನಿಸ್ತಾನವು ಸುರಕ್ಷಿತ ಆಶ್ರಯತಾಣ ಆಗುವುದನ್ನು ತಪ್ಪಿಸುವುದಕ್ಕಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ವಾಶಿಂಗ್ಟನ ಸಮೀಪದ ಸೇನಾ ನೆಲೆಯೊಂದರಿಂದ ಮಾಡಿದ ಭಾಷಣದಲ್ಲಿ ಟ್ರಂಪ್ ಹೇಳಿದ್ದಾರೆ.

ಅಫ್ಘಾನಿಸ್ತಾನದಲ್ಲಿರುವ ಅಮೆರಿಕನ್ ಸಶಸ್ತ್ರ ಪಡೆಗಳ ಅಧಿಕಾರ ವ್ಯಾಪ್ತಿಯನ್ನು ವಿಸ್ತರಿಸಿರುವ ಟ್ರಂಪ್, ತನ್ನ ಪಡೆಗಳು ಭಯೋತ್ಪಾದಕ ಮತ್ತು ಕ್ರಿಮಿನಲ್ ಜಾಲಗಳನ್ನು ಭೇದಿಸುವುದು ಎಂದು ಹೇಳಿದರು.

ತಮಗೆ ಅಡಗಲು ಯಾವುದೇ ಸ್ಥಳವಿಲ್ಲ ಹಾಗೂ ಅಮೆರಿಕದ ಕೈಗಳಿಗೆ ನಿಲುಕದ ಯಾವುದೇ ಸ್ಥಳವಿಲ್ಲ ಎನ್ನುವುದನ್ನು ಅಫ್ಘಾನಿಸ್ತಾನದಲ್ಲಿರುವ ಅಮೆರಿಕದ ಶತ್ರುಗಳು ಅರ್ಥ ಮಾಡಿಕೊಳ್ಳಬೇಕು ಎಂದು ಟ್ರಂಪ್ ನುಡಿದರು.

‘‘ನಮ್ಮ ಪಡೆಗಳು ಗೆಲ್ಲುವುದಕ್ಕಾಗಿ ಹೋರಾಟ ನಡೆಸಲಿವೆ’’ ಎಂದು ಅವರು ಹೇಳಿದರು. ಆದರೆ, ಅಮೆರಿಕದ ಪಡೆಗಳು ಎಷ್ಟು ಸಮಯ ಅಫ್ಘಾನಿಸ್ತಾನದಲ್ಲಿ ಇರುಬೇಕಾಗುತ್ತದೆ ಎಂಬುದನ್ನು ಹೇಳಲಿಲ್ಲ.

ವಿರೋಧದಿಂದ ಹಿಂದೆ ಸರಿದ ಟ್ರಂಪ್

2001 ಸೆಪ್ಟಂಬರ್ 11ರಂದು ಅಮೆರಿಕದ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ ಬಳಿಕ, ಅದೇ ವರ್ಷದ ಅಕ್ಟೋಬರ್‌ನಲ್ಲಿ ತಾಲಿಬಾನ್ ಆಡಳಿತದ ಅಫ್ಘಾನಿಸ್ತಾನದ ಮೇಲೆ ಅಮೆರಿಕ ದಾಳಿ ಆರಂಭಿಸಿತು. ಈ 16 ವರ್ಷಗಳ ಕಾಲ ಅಮೆರಿಕದ ಪಡೆಗಳು ನಿರಂತರವಾಗಿ ಆ ದೇಶದಲ್ಲಿ ಭಯೋತ್ಪಾದಕರೊಂದಿಗೆ ಸೆಣಸುತ್ತಿವೆ.

ಆದರೆ, ಈ ಯುದ್ಧದ ಬಗ್ಗೆ ರಿಪಬ್ಲಿಕನ್ ಅಧ್ಯಕ್ಷರು ಗೊಂದಲದಲ್ಲಿದ್ದರು. ಜೀವ ಮತ್ತು ಹಣದ ಲೆಕ್ಕದಲ್ಲಿ ಈ ಯುದ್ಧವು ತುಂಬಾ ದುಬಾರಿಯಾಗಿದೆ ಎಂಬುದಾಗಿ ಚುನಾವಣಾ ಪ್ರಚಾರದ ವೇಳೆ ಟ್ರಂಪ್ ಪದೇ ಪದೇ ಹೇಳಿದ್ದರು.

 ‘‘ನನ್ನ ಮೂಲ ನಿಲುವು ಅಫ್ಘಾನಿಸ್ತಾನದಿಂದ ಹಿಂದಕ್ಕೆ ಸರಿಯಬೇಕು ಎನ್ನುವುದಾಗಿತ್ತು. ಆದರೆ, ಕಾಬೂಲ್‌ನಲ್ಲಿರುವ ಅಮೆರಿಕ ಬೆಂಬಲಿತ ಸರಕಾರವನ್ನು ಪದಚ್ಯುತಗೊಳಿಸುವ ತಾಲಿಬಾನ್ ಪ್ರಯತ್ನವನ್ನು ಹಿಮ್ಮೆಟ್ಟಿಸಲು ಅಮೆರಿಕವು ಸಮರ್ಥವಾಗಬೇಕು ಎನ್ನುವುದನ್ನು ರಾಷ್ಟ್ರೀಯ ಭದ್ರತಾ ಸಲಹೆಗಾರರು ನನಗೆ ಮನವರಿಕೆ ಮಾಡಿದ್ದಾರೆ’’ ಎಂದು ಟೆಲಿವಿಶನ್‌ನಲ್ಲಿ ನೇರಪ್ರಸಾರಗೊಂಡ ಭಾಷಣದಲ್ಲಿ ಟ್ರಂಪ್ ಹೇಳಿದರು.

ಅಫ್ಘಾನ್ ಯುದ್ಧದಲ್ಲಿ ಭಾರತದ ನೆರವಿಗೆ ಟ್ರಂಪ್ ಕರೆ

ಅಫ್ಘಾನಿಸ್ತಾನದಲ್ಲಿ ಅಮೆರಿಕದ ಗುರಿಗಳನ್ನು ಸಾಧಿಸುವುದಕ್ಕಾಗಿ ಭಾರತದೊಂದಿಗಿನ ವ್ಯೆಹಾತ್ಮಕ ಭಾಗೀದಾರಿಕೆಯನ್ನು ಮತ್ತಷ್ಟು ವಿಸ್ತರಿಸಲು ತಾನು ಬಯಸಿರುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

‘‘ಅಫ್ಘಾನಿಸ್ತಾನದಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ಭಾರತ ಮಹತ್ವದ ದೇಣಿಗೆಗಳನ್ನು ನೀಡಿದೆ. ಆದರೆ, ಅಮೆರಿಕದೊಂದಿಗಿನ ವ್ಯಾಪಾರದಿಂದ ಭಾರತ ಬಿಲಿಯಗಟ್ಟಳೆ ಡಾಲರ್ ಪಡೆಯುತ್ತಿದೆ. ಹಾಗಾಗಿ, ಅಫ್ಘಾನ್ ಯುದ್ಧದಲ್ಲಿ, ಮುಖ್ಯವಾಗಿ ಆರ್ಥಿಕ ನೆರವು ಮತ್ತು ಅಭಿವೃದ್ಧಿ ಕ್ಷೇತ್ರದಲ್ಲಿ ಭಾರತ ನಮಗೆ ಸಹಾಯ ಮಾಡಬೇಕೆಂದು ನಾವು ಬಯಸುತ್ತೇವೆ’’ ಎಂದು ಟ್ರಂಪ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News