ತ್ರಿವಳಿ ತಲಾಖ್ ತೀರ್ಪು: ಸೆ.10ರಂದು ಎಐಎಂಪಿಎಲ್‌ಬಿ ಸಭೆ

Update: 2017-08-23 05:30 GMT

ಹೊಸದಿಲ್ಲಿ,ಆ.22: ತ್ರಿವಳಿ ತಲಾಖ್ ಪದ್ಧತಿಯನ್ನು ರದ್ದುಗೊಳಿಸಿರುವ ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಬಗ್ಗೆ ಚರ್ಚಿಸಲು ಮತ್ತು ತನ್ನ ಮುಂದಿನ ಕಾರ್ಯತಂತ್ರವನ್ನು ರೂಪಿಸಲು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ(ಎಐಎಂಪಿಎಲ್‌ಬಿ) ಯು ಸೆ.10ರಂದು ಮಧ್ಯಪ್ರದೇಶದ ಭೋಪಾಲದಲ್ಲಿ ಸಭೆ ಸೇರಲಿದೆ. ಇದೇ ವೇಳೆ ಅಖಿಲ ಭಾರತ ಮುಸ್ಲಿಂ ಮಹಿಳಾ ಕಾನೂನು ಮಂಡಳಿ(ಎಂಡಬ್ಲುಪಿಎಲ್‌ಬಿ)ಯು ತೀರ್ಪನ್ನು ಪ್ರಶಂಸಿಸಿದೆ.

ತೀರ್ಪಿನ ಪೂರ್ಣ ಪಾಠವನ್ನಿನ್ನೂ ನಾವು ಓದಿಲ್ಲ. ಹೀಗಾಗಿ ಈಗ ತೀರ್ಪಿನ ಬಗ್ಗೆ ಪ್ರತಿಕ್ರಿಯಿಸುವುದು ಸೂಕ್ತವಾಗುವುದಿಲ್ಲ. ಸೆ.10ರಂದು ಭೋಪಾಲದಲ್ಲಿ ಮಂಡಳಿಯ ಸಭೆಯನ್ನು ಕರೆಯಲಾಗಿದ್ದು, ಅಲ್ಲಿ ಈ ವಿಷಯವನ್ನು ಪರಿಶೀಲಿಸಲಾಗುತ್ತದೆ ಮತ್ತು ಭವಿಷ್ಯದಲ್ಲಿ ಕೈಗೊಳ್ಳಬೇಕಾದ ಕ್ರಮವೇನಾದರೂ ಇದ್ದರೆ ಅದನ್ನು ನಿರ್ಧರಿಸಲಾಗುತ್ತದೆ ಎಂದು ಎಐಎಂಪಿಎಲ್‌ಬಿಯ ಪ್ರಧಾನ ಕಾರ್ಯದರ್ಶಿ ಮೌಲಾನಾ ವಲಿ ರಹಮಾನ್ ಅವರು ಸುದ್ದಿಸಂಸ್ಥೆಗೆ ತಿಳಿಸಿದರು. ತ್ರಿವಳಿ ತಲಾಖ್ ಪದ್ಧತಿಯನ್ನು ವಿರೋಧಿಸುವ ಹೆಜ್ಜೆಯನ್ನು ಮಂಡಳಿಯು ನ್ಯಾಯಾಲಯದಲ್ಲಿ ವಿರೋಧಿಸಿತ್ತು.

ತ್ರಿವಳಿ ತಲಾಖ್ ಪದ್ಧತಿಯ ವಿರುದ್ಧ ಹೋರಾಟ ನಡೆಸಿದ್ದ ಎಂಡಬ್ಲುಪಿಎಲ್‌ಬಿಯ ಅಧ್ಯಕ್ಷೆ ಶಾಯಿಸ್ತಾ ಅಂಬರ್ ಅವರು, ಸರ್ವೋಚ್ಚ ನ್ಯಾಯಾಲಯದ ತೀರ್ಪು ಮುಸ್ಲಿಂ ಮಹಿಳೆಯರಿಗೆ ಭಾರೀ ನೆಮ್ಮದಿಯನ್ನು ನೀಡಿದೆ. ತೀರ್ಪು ತ್ರಿವಳಿ ತಲಾಖ್ ಕುರಿತು ನಮ್ಮ ನಿಲುವನ್ನು ಎತ್ತಿ ಹಿಡಿದಿದೆ. ಇದು ಸದ್ಯೋಭವಿಷ್ಯದಲ್ಲಿ ಮದುವೆಯಾಗಲಿರುವ ಮುಸ್ಲಿಂ ಹೆಣ್ಣುಮಕ್ಕಳಿಗೆ ಭದ್ರತೆಯನ್ನು ಒದಗಿಸಿದೆ ಎಂದು ಹೇಳಿದರು.

ತೀರ್ಪಿಗೆ ಎಚ್ಚರಿಕೆಯಿಂದ ಪ್ರತಿಕ್ರಿಯಿಸಿರುವ ಮುಸ್ಲಿಂ ಧರ್ಮಗುರುಗಳು, ಈ ವಿಷಯದ ಬಗ್ಗೆ ತಾವು ಕಾನೂನು ತಜ್ಞರು ಮತ್ತು ಇಸ್ಲಾಮಿಕ್ ವಿದ್ವಾಂಸರೊಂದಿಗೆ ಸಮಾಲೋಚನೆಗಳನ್ನು ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ.

‘‘ನನ್ನ ಅಭಿಪ್ರಾಯದಲ್ಲಿ ಶರೀಯತ್‌ನ್ನು ಬದಲಿಸುವ ಹಕ್ಕು ಯಾರಿಗೂ ಇಲ್ಲ. ಆದರೂ ಸಂಸ್ಥೆಯ ಮುಖ್ಯಸ್ಥರು ವಿಧ್ಯುಕ್ತ ಹೇಳಿಕೆಯನ್ನು ಹೊರಡಿಸಲಿದ್ದಾರೆ ಎಂದು ದಾರುಲ್ ಉಲೂಮ್ ದೇವಬಂದ್‌ನ ಉಪ ಕುಲಪತಿ ನಾಯಿಬ್ ಮೊಹ್ತಾಮೀಮ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News