ಮುಸ್ಲಿಂ ಯುವಕರಿಂದ ಹಿಂದೂ ವ್ಯಕ್ತಿಯ ಅಂತ್ಯಕ್ರಿಯೆ

Update: 2017-08-22 15:11 GMT

ಮಂಗಳೂರು, ಆ. 22: ಮಾನವೀಯತೆ ಎಂಬುದು ಯಾವುದೇ ಧರ್ಮ, ಜಾತಿ, ಕಟ್ಟುಪಾಡುಗಳಿಗಿಂತಲೂ ಮಿಗಿಲಾದುದು ಎಂಬುದು ಜಿಲ್ಲೆಯ ಯುವಕರು ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ. ಕೋಮು ಸಂಘರ್ಷದ ಮೂಲಕ ಸುದ್ದಿಯಾಗುವ ದ.ಕ. ಜಿಲ್ಲೆಯಲ್ಲಿ ಕೆಲ ಮುಸ್ಲಿಂ ಯುವಕರು ಹಿಂದೂ ವ್ಯಕ್ತಿಯೊಬ್ಬರ ಅಂತ್ಯಕ್ರಿಯೆಯನ್ನು ಮಾಡುವ ಮೂಲಕ ಸೌಹಾರ್ದತೆಯನ್ನು ಮೆರೆದಿದ್ದಾರೆ.

ಪರಮೇಶ್ವರ್ ಪೂಜಾರಿ ಎಂಬವರು ಮಂಗಳೂರು ಹೊರವಲಯದ ನೀರು ಮಾರ್ಗ ಎಂಬಲ್ಲಿನ ಪಡು ಬಿತ್ತ್‌ಪಾದೆ ಪರಿಸರ ದಲ್ಲಿ ಕಳೆದ 40 ವರ್ಷಗಳಿಂದ ಮೂರ್ತೆದಾರಿಕೆ, ಕೂಲಿ ಕೆಲಸ ಮಾಡಿಕೊಂಡಿದ್ದವರು. ಆದರೆ ಕಾರಣಾಂತರಿಂದ ಮನೆಯವರಿಂದ ದೂರವಾಗಿ ಒಂಟಿಯಾಗಿ ಜೀವನ ನಡೆಸುತ್ತಿದ್ದ ಪರಮೇಶ್ವರ್ ಕಳೆದ ಎರಡು ತಿಂಗಳಿಂದೀಚೆಗೆ ಅಸೌಖ್ಯಕ್ಕೆ ಬಿದ್ದು ಬಿತ್ತ್‌ಪಾದೆ ಬಸ್ ತಂಗುದಾಣವನ್ನೇ ಆಶ್ರಯ ತಾಣವಾಗಿಸಿದ್ದರು.

ಒಂದು ತಿಂಗಳ ಹಿಂದೆ ತೀವ್ರ ಅಸೌಖ್ಯಕ್ಕೀಡಾಗಿದ್ದ ಪರಮೇಶ್ವರ್‌ ರನ್ನು ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಆದರೆ, ರವಿವಾರ ಅವರು ನಿಧನರಾಗಿದ್ದು, ಅವರ ಅಂತ್ಯಕ್ರಿಯೆಯ ಜವಾಬ್ದಾರಿಯನ್ನೂ ಮುಸ್ಲಿಂ ಯುವಕರು ನಿರ್ವಹಿಸುವ ಮೂಲಕ ಸಹೋದರತೆಗೆ ಹೊಸ ಭಾಷ್ಯವನ್ನು ಬರೆದಿದ್ದಾರೆ.

ಪರಮೇಶ್ವರ್ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಅವರಿಗೆ ಬೇಕಾದ ಸೊತ್ತುಗಳನ್ನು ಪೂರೈಸಿದ್ದ ಯುವಕರು, ಬಸ್ ತಂಗುದಾಣದಲ್ಲಿ ವಾಸ್ತವ್ಯವಿದ್ದ ಸಂದರ್ಭ ಪರಮೇಶ್ವರ್ ಅವರನ್ನು ಸ್ನಾನ ಮಾಡಿಸಿ, ಮದ್ದು ನೀಡಿ ಆರೈಕೆ ಮಾಡಿದ್ದಾರೆ. ಅನಾರೋಗ್ಯ ಕಾರಣದಿಂದ ಬಸ್ ತಂಗುದಾಣದಲ್ಲಿ ಆದ ಗಲೀಜನ್ನು ತಾವೇ  ಸ್ವಚ್ಛಗೊಳಿಸಿ ಆದರ್ಶತೆ ಮೆರೆದ್ದಿದ್ದಾರೆ.

ರವಿವಾರ ಮೃತಪಟ್ಟ ಪರಮೇಶ್ವರ್‌ರ  ಅಂತ್ಯಕ್ರಿಯೆಯನ್ನು ಸೋಮವಾರ ಬೆಳಗ್ಗಿನಿಂದಲೇ ಬಿತ್ತ್‌ಪಾದೆ ಪರಿಸರದಲ್ಲಿ ಮುಸ್ಲಿಂ ಯುವಕರು ಒಟ್ಟಾಗಿ ಹಿಂದೂಗಳ ಜತೆಗೂಡಿ ಅಂತ್ಯಕ್ರಿಯೆ ನಡೆಸಿದರು. ಆಸ್ಪತ್ರೆಯ ಶವಾಗಾರಕ್ಕೆ ಪರಮೇಶ್ವರ್ ಅವರ ಕುಟುಂಬದವರು ಬಂದ ಕಾರಣ ಮುಂದಿನ ಧಾರ್ಮಿಕ ವಿಧಿವಿಧಾನಗಳನ್ನು ಅವರ ನೇತೃತ್ವದಲ್ಲೇ ನಡೆಸಲಾಯಿತು.

ಮುಸ್ಲಿಂ ಯುವಕರು ತಾವೇ ಹೆಣವನ್ನು ಹೆಗಲ ಮೇಲೆ ಹೊತ್ತು ಬೋಳೂರು ರುದ್ರಭೂಮಿಗೆ ಒಯ್ದರಲ್ಲದೆ, ಮೃತ ದೇಹಕ್ಕೆ ಹಿಂದೂ ಸಂಪ್ರದಾಯದ ಪ್ರಕಾರ ತುಳುಸಿ ನೀರು ಬಿಟ್ಟರು. ಈ ಯುವಕರೊಂದಿಗೆ ಗುರುಪ್ರಸಾದ್, ಲಕ್ಷ್ಮಣ್ ನಾಯ್ಕೆ ಸೇರಿದಂತೆ ಕೆಲವು ಹಿಂದೂಗಳು ಸಾಥ್ ನೀಡಿದರು.

ಪರಮೇಶ್ವರ್ ಅವರನ್ನು ಆಸ್ಪತ್ರೆಗೆ ಸಾಗಿಸಿದ್ದಲ್ಲದೆ, ಕಳೆದ ಹಲವು ಸಮಯಗಳಿಂದ ಅವರ ಸೇವೆಯನ್ನು ಮುಸ್ಲಿಂ ಯುವಕರು ಮಾಡಿ ಮಾನವೀಯತೆಯನ್ನು ತೋರಿದ್ದಾರೆ. ನಾವು ಕೂಡಾ ಅವರ ಜತೆಗಿದ್ದು ಸಹಕಾರ ನೀಡಿದ್ದೇವೆ ಎಂದು ಬಿತ್ತ್‌ಪಾದೆಯ ಅಂಗಡಿ ಮಾಲಕ ಗುರುಪ್ರಸಾದ್ ಎಂಬವರು ಅಭಿಪ್ರಾಯಿಸಿದ್ದಾರೆ.

40 ವರ್ಷಗಳ ಹಿಂದೆ ಮನೆಬಿಟ್ಟು ಬಂದು ಬಿತ್ತ್‌ಪಾದೆಯಲ್ಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಹಲವು ಬಾರಿ ಮನೆಗೆ ಬರಲು ನಾವು ಒತ್ತಾಯಿಸಿದರೂ ಅವರು ಬರಲಿಲ್ಲ. ಜಾತಿ, ಧರ್ಮ ಬಿಟ್ಟು ಅವರ ಸೇವೆ ಮಾಡಿದ ಯುವಕರ ಕೆಲಸ ಶ್ಲಾಘನೀಯ. ಅವರಿಗೆ ನಾವೆಷ್ಟು ಧನ್ಯವಾದ ಹೇಳಿದರೂ ಕಡಿಮೆಯೇ ಎಂದು ಮೃತರ ಪುತ್ರ ವಿಠಲ್ ಕೃತಜ್ಞತೆ ಸಲ್ಲಿಸಿದ್ದಾರೆ.

ಪರಮೇಶ್ವರ್ ಹಲವು ವರ್ಷಗಳಿಂದ ಬಿತ್ತ್‌ಪಾದೆಯಲ್ಲಿ ವಾಸಿಸುತ್ತಿದ್ದರು. ಎಲ್ಲರೊಂದಿಗೆ ಉತ್ತಮವಾಗಿ ಬೆರೆಯುತ್ತಿದ್ದರು. 2 ತಿಂಗಳಿನಿಂದ ತೀರಾ ಅಸೌಖ್ಯಕ್ಕೆ ಬಿದ್ದಿದ್ದು, ನಾವು ನಮ್ಮಿಂದಾದಷ್ಟು ಸಹಕಾರ ಮಾಡಿದ್ದೇವೆ. ಈ ರೀತಿ ಸಹಾಯ ಮಾಡುವುದು ನಿಜವಾದ ಧರ್ಮ ಎಂಬುದು ನಮ್ಮ ಭಾವನೆ ಎಂದು ಪರಮೇಶ್ವರವರ ಸೇವೆಯಲ್ಲಿ ಭಾಗಿಯಾಗಿದ್ದ ಇಲ್ಯಾಸ್ ಅಭಿಪ್ರಾಯ ಹಂಚಿಕೊಂಡಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News