ತ್ರಿವಳಿ ತಲಾಖ್ ತೀರ್ಪಿಗೆ ಪ್ರಮುಖರ ಪ್ರತಿಕ್ರಿಯೆ

Update: 2017-08-22 15:17 GMT

ಹೊಸದಿಲ್ಲಿ,ಆ.22: ತ್ರಿವಳಿ ತಲಾಖ್ ಕುರಿತು ಸರ್ವೋಚ್ಚ ನ್ಯಾಯಾಲಯದ ತೀರ್ಪು ಐತಿಹಾಸಿಕವಾಗಿದೆ. ಅದು ಮುಸ್ಲಿಂ ಮಹಿಳೆಯರಿಗೆ ಸಮಾನತೆಯನ್ನು ನೀಡುತ್ತದೆ ಮತ್ತು ಮಹಿಳಾ ಸಬಲೀಕರಣದ ನಿಟ್ಟಿನಲ್ಲಿ ಪ್ರಬಲ ಕ್ರಮವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟಿಸಿದ್ದಾರೆ.

ತೀರ್ಪು ಮುಸ್ಲಿಂ ಮಹಿಳೆಯರ ಪಾಲಿಗೆ ಹೆಮ್ಮೆ ಮತ್ತು ಸಮಾನತೆಯ ಹೊಸ ಯುಗವೊಂದರ ಆರಂಭದ ಸಂಕೇತವಾಗಿದೆ. ಮುಸ್ಲಿಂ ಮಹಿಳೆಯರ ಹಕ್ಕುಗಳ ವಿಸ್ತರಣೆಯನ್ನು ಬಿಜೆಪಿಯು ಸ್ವಾಗತಿಸುತ್ತದೆ ಮತ್ತು ನ್ಯಾಯಾಲಯದ ಇಂದಿನ ತೀರ್ಪು ನಿರ್ಧಾರಿತ ‘ನವ ಭಾರತ’ದ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯೆಂದು ಪರಿಗಣಿಸುತ್ತದೆ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.

ತೀರ್ಪನ್ನು ಪ್ರಶಂಸಿಸಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು, ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ನಾವು ಸ್ವಾಗತಿಸುತ್ತೇವೆ. ಅದು ಮುಸ್ಲಿಂ ಮಹಿಳೆಯರಿಗೆ ಅವರಿಗೆ ಸಲ್ಲಬೇಕಾದ ನ್ಯಾಯವನ್ನು ಒದಗಿಸುತ್ತದೆ ಎಂದಿದ್ದಾರೆ.

ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ಕಾಂಗ್ರೆಸ್ ಸ್ವಾಗತಿಸುತ್ತದೆ ಎಂದು ಪಕ್ಷದ ವಕ್ತಾರ ರಂಜಿತ್ ಸುರ್ಜೆವಾಲಾ ಹೇಳಿದ್ದಾರೆ.

ದಿಢೀರ್ ತ್ರಿವಳಿ ತಲಾಖ್ ಪದ್ಧತಿಯನ್ನು ಸಂವಿಧಾನ ಬಾಹಿರ ಎಂದಿರುವ ತೀರ್ಪನ್ನು ಪಕ್ಷದ ಪಾಲಿಟ್‌ಬ್ಯೂರೋ ಸ್ವಾಗತಿಸುತ್ತದೆ ಎಂದು ಸಿಪಿಎಂ ಹೇಳಿದೆ.

ಮುಸ್ಲಿಂ ಮಹಿಳೆಯರು ಅನುಭವಿಸುತ್ತಿರುವ ಅನ್ಯಾಯವನ್ನು ನಿವಾರಿಸಲು ಎಂದೋ ಆಗಬೇಕಿದ್ದ ಶಾಸನವನ್ನು ರೂಪಿಸಲು ಸರ್ವೋಚ್ಚ ನ್ಯಾಯಾಲಯವು ನಿರ್ದೇಶ ನೀಡಿರುವುದು ಸ್ವಾಗತಾರ್ಹವಾಗಿದೆ ಎಂದು ಪುದುಚೇರಿಯ ಲೆಫ್ಟಿನಂಟ್ ಗವರ್ನರ್ ಕಿರಣ್ ಬೇಡಿ ಅವರು ಟ್ವೀಟಿಸಿದ್ದಾರೆ.

ಇಂದು ನಮ್ಮ ಪಾಲಿಗೆ ಅತ್ಯಂತ ಸಂತಸದ ದಿನವಾಗಿದೆ. ಇಂದು ಐತಿಹಾಸಿಕ ದಿನವಾಗಿದೆ ಎಂದು ಭಾರತೀಯ ಮುಸ್ಲಿಂ ಮಹಿಳಾ ಆಂದೋಲನದ ಸಹಸ್ಥಾಪಕಿ ಝಕಿಯಾ ಸೋಮನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News