ಬಾರ್ಸಿಲೋನ ವ್ಯಾನ್ ದಾಳಿಯ ಚಾಲಕನ ಹತ್ಯೆ

Update: 2017-08-22 16:07 GMT

ಬಾರ್ಸಿಲೋನ, ಆ. 22: ಸ್ಪೇನ್ ದೇಶದ ಬಾರ್ಸಿಲೋನ ನಗರದಲ್ಲಿ ಜನರ ಮೇಲೆ ಹರಿದ ವ್ಯಾನೊಂದರ ಚಾಲಕನೆಂದು ಭಾವಿಸಲಾದ ವ್ಯಕ್ತಿಯೋರ್ವನನ್ನು ಪೊಲೀಸರು ಸೋಮವಾರ ಗುಂಡು ಹಾರಿಸಿ ಹತ್ಯೆಮಾಡಿದ್ದಾರೆ. ದಾಳಿ ನಡೆಸಿ ತಪ್ಪಿಸಿಕೊಳ್ಳುವ ವೇಳೆ ಆತ ಕಾರೊಂದನ್ನು ಅಪಹರಿಸಿದ್ದು, ಅದರ ಮಾಲೀಕನನ್ನೂ ಕೊಲೆಗೈದಿದ್ದಾನೆ ಎಂಬುದಾಗಿಯೂ ಶಂಕಿಸಲಾಗಿದೆ.

ಮುಖಾಮುಖಿ ನಡೆದ ವೇಳೆ ಭಯೋತ್ಪಾದಕನು ಬಾಂಬ್ ಬೆಲ್ಟೊಂದನ್ನು ಧರಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಬಾರ್ಸಿಲೋನದ ಪಶ್ಚಿಮಕ್ಕೆ ಸುಮಾರು 45 ಕಿ.ಮೀ. ದೂರದಲ್ಲಿರುವ ಗ್ರಾಮೀಣ ಪ್ರದೇಶ ಸುಬಿರಟ್ಸ್‌ನಲ್ಲಿ ಮುಖಾಮುಖಿಯಾದ ವೇಳೆ ಪೊಲೀಸರು ಯೂನಸ್ ಅಬೂಯಾಕೂಬ್‌ನನ್ನು ಗುಂಡಿಕ್ಕಿ ಸಾಯಿಸಿದರು ಎಂದು ಸ್ಪೇನ್‌ನ ಕ್ಯಾಟಲೋನಿಯ ವಲಯದ ಪೊಲೀಸರು ತಿಳಿಸಿದರು. ಆತನ ಸಮೀಪಕ್ಕೆ ಬಾಂಬ್ ನಿಷ್ಕ್ರಿಯ ರೋಬೊಟೊಂದನ್ನು ಕಳುಹಿಸಲಾಗಿತ್ತು.

ಬಾರ್ಸಿಲೋನದಲ್ಲಿ ಗುರುವಾರ ಪಾದಚಾರಿಗಳ ಮೇಲೆ ಕಾರು ದಾಳಿ ನಡೆದ ಬಳಿಕ, 22 ವರ್ಷದ ಅಬೂಯಾಕೂಬ್‌ನಿಗಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ನರಬೇಟೆ ಆರಂಭಿಸಲಾಗಿತ್ತು.

ಬಾರ್ಸಿಲೋನದ ಪ್ರಸಿದ್ಧ ಲಾಸ್ ರಂಬ್ಲಸ್ ಪ್ರಾಮನೇಡ್‌ನಲ್ಲಿ ನಡೆದ ಆ ಕಾರು ದಾಳಿಯಲ್ಲಿ 13 ಪಾದಚಾರಿಗಳು ಮೃತಪಟ್ಟಿದ್ದಾರೆ ಹಾಗೂ 120ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

ಮೊರೊಕ್ಕೊದಲ್ಲಿ ಜನಿಸಿರುವ ಅಬೂಯಾಕೂಬ್ ಸ್ಪೇನ್ ಪ್ರಜೆಯಾಗಿದ್ದನು.

ಆತನ ತಂಡದ ಇತರ ಸದಸ್ಯರು ಶುಕ್ರವಾರ ಮುಂಜಾನೆ ಕರಾವಳಿ ಪಟ್ಟಣ ಕ್ಯಾಂಬ್ರಿಲ್ಸ್‌ನಲ್ಲಿ ಇನ್ನೊಂದು ವಾಹನ ದಾಳಿ ನಡೆಸಿದ್ದರು. ಆ ದಾಳಿಯಲ್ಲಿ ಓರ್ವ ವ್ಯಕ್ತಿ ಮೃತಪಟ್ಟು, ಹಲವಾರು ಮಂದಿ ಗಾಯಗೊಂಡಿದ್ದರು.

ಘಟನೆಯ ಬೆನ್ನಿಗೇ ಪೊಲೀಸರು ದಾಳಿ ನಡೆಸಿ ಐವರು ಉಗ್ರರನ್ನು ಕೊಂದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News