ಆ.25 ರಿಂದ ಬಂಟರ ಮಾತೃ ಸಂಘದ ಗಣೇಶೋತ್ಸವ, ತೆನೆ ಹಬ್ಬ,ಸಾಧಕರಿಗೆ ಸನ್ಮಾನ

Update: 2017-08-22 16:30 GMT

ಮಂಗಳೂರು, ಆ.22: ಶ್ರೀ ಸಿದ್ಧಿವಿನಾಯಕ ಪ್ರತಿಷ್ಠಾನ ಮತ್ತು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ವತಿಯಿಂದ 14ನೆ ವರ್ಷದ ಸಾರ್ವಜನಿಕ ಗಣೇಶೋತ್ಸವ , ತೆನೆಹಬ್ಬ, ಅಷ್ಟೋತ್ತರ ನಾರಿಕೇಲ ಮಹಾಗಣಯಾಗ ಆ. 25ರಿಂದ 27ರವರೆಗೆ ಓಂಕಾರ ನಗರದ ಬಂಟ್ಸ್ ಹಾಸ್ಟೆಲ್‌ನಲ್ಲಿ ನಡೆಯಲಿದೆ ಎಂದು ಪ್ರತಿಷ್ಠಾನದ ಟ್ರಸ್ಟಿ ಡಾ. ಆಶಾ ಜ್ಯೋತಿ ರೈ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಶರವು ದೇವಸ್ಥಾನದ ಬಳಿ ಇರುವ ಶ್ರೀರಾಧಾಕೃಷ್ಣ ದೇವಸ್ಥಾನದ ಬಳಿಯಿಂದ ಗಣೇಶ ವಿಗ್ರಹವನ್ನು ಬಂಟ್ಸ್ ಹಾಸ್ಟೆಲ್‌ನ ಓಂಕಾರನಗರಕ್ಕೆ ಆಗಸ್ಟ್ 24ರಂದು ತಂದು 25ರಂದು ಪ್ರತಿಷ್ಠಾಪನೆ ಮಾಡಲಾಗುವುದು. ಇದೇ ಸಂದರ್ಭದಲ್ಲಿ ತೆನೆ ಹಬ್ಬ ನಡೆಯಲಿದೆ. ಸಂಜೆ ಹರಿದಾಸ ಶರತ್ ಶೆಟ್ಟಿ ಪಡುಪಳ್ಳಿಯಿಂದ ಶಿವ ಭಕ್ತ ಮಾರ್ಕಾಂಡೇಯ ಕಥಾಪ್ರಸಂಗ ನಡೆಸಿಕೊಡಲಿದ್ದಾರೆ. ಸಂಜೆ ಮಾಲಾಡಿ ಅಜಿತ್ ರೈ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭೆ ನಡೆಯಲಿದೆ. ಇದೇ ಸಂದರ್ಭದಲ್ಲಿ ಸಮಾಜದ ವಿವಿಧ ವರ್ಗಗಳ ಸಾಧಕರಿಗೆ ಸನ್ಮಾನ , ಆಳ್ವಾಸ್ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈಭವದ ಕಾರ್ಯಕ್ರಮ ನಡೆಯಲಿದೆ.

ಆ. 26ರಂದು ದುರ್ಗಾದಾಸ್ ಶೆಟ್ಟಿಯಿಂದ ಭಕ್ತಿಗಾನ ಸುಧೆ, ಮಹಾಪೂಜೆ, ಸಂಜೆ ರಾಮಕೃಷ್ಣ ವಿದ್ಯಾಸಂಸ್ಥೆ ಹಾಗೂ ಹಾಸ್ಟೆಲ್ ವಿದ್ಯಾರ್ಥಿಗಳಿಂದ ಕಾರ್ಯಕ್ರಮ ನಡೆಯಲಿದೆ. ಸಂಜೆ ಧಾರ್ಮಿಕ ಸಭೆ,ಮತ್ತು ಸನ್ಮಾನ ಸಮಾರಂಭ ನಡೆಯಲಿದೆ.ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಖ್ಯಾತ ಚಲನಚಿತ್ರ ಹಿನ್ನೆಲೆಗಾಯಕ ಅಜಯ್ ವಾರಿಯರ್ ಮತ್ತು ತಂಡದವರಿಂದ ಕಾರ್ಯಕ್ರಮ,ಝಿ ಕನ್ನಡ ಸರಿಗಮಪ ಕಾರ್ಯಕ್ರಮದ ಸಾನ್ವಿ ವಿ.ಶೆಟ್ಟಿ ಭಾಗವಹಿಸಲಿದ್ದಾರೆ.

ಆ.27ರಿಂದ ಅಷ್ಟೋತ್ತರ ಸಹಸ್ರ ನಾರಿಕೇಳ ಮಹಾಯಾಗ ನಡೆಯಲಿದೆ. ಮಹಾ ಅನ್ನ ಸಂತರ್ಪಣೆ,ಭಜನಾ ಕಾರ್ಯಕ್ರಮ ಅನ್ನ ಸಂತರ್ಪಣೆ ಬಳಿಕ ಶೋಭಾಯಾತ್ರೆ ನಡೆಯಲಿದೆ.

ಆಗಸ್ಟ್ 20ರಂದು ಬಂಟ ಕ್ರೀಡೋತ್ಸವ ಹಮ್ಮಿಕೊಳ್ಳಲಾಗಿತ್ತು. 24ರಂದು ಸಾರ್ವಜನಿಕ ವಿಭಾಗದಲ್ಲಿ ಮಕ್ಕಳ ಚಿತ್ರಕಲಾ ಸ್ಪರ್ಧೆ ಸಂಜೆ 4 ಗಂಟೆಯಿಂದ ರಾಮಕೃಷ್ಣ ವಿದ್ಯಾ ಸಂಸ್ಥೆಯ ಆವರಣದಲ್ಲಿ ನಡೆಯಲಿದೆ ಎಂದು ಆಶಾ ಜ್ಯೊತಿ ರೈ ತಿಳಿಸಿದ್ದಾರೆ.

ಆ.27ರಂದು ಸಂಜೆ ಗಣೇಶ ಉತ್ಸವದ ಶೋಭಾಯಾತ್ರೆ ಬಂಟ್ಸ್ ಹಾಸ್ಟೆಲ್ ವೃತ್ತ, ಪಿವಿಎಸ್, ಡೊಂಗರಕೇರಿ, ನ್ಯೂಚಿತ್ರ ಟಾಕೀಸ್ , ರಥ ಬೀದಿ, ಶ್ರೀ ವೆಂಕಟರಮಣ ದೇವಸ್ಥಾನದ ಮಾರ್ಗವಾಗಿ ಶ್ರೀ ಮಹಮ್ಮಾಯಿ ಕೆರೆಯಲ್ಲಿ ಶ್ರೀ ದೇವರ ವಿಗ್ರಹವನ್ನು ವಿಸರ್ಜಿಸಲಾಗುವುದು ಎಂದು ಆಶಾ ಜ್ಯೋತಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಉತ್ಸವದ ಸಂಘಟಕರಾದ ಸುಂದರ ಶೆಟ್ಟಿ, ದಿವಾಕರ ಸಾಮಾನಿ, ಕೃಷ್ಣ ಪ್ರಸಾದ್ ರೈ ಬೆಳ್ಳಿಪ್ಪಾಡಿ, ಬಾಲಕೃಷ್ಣ ಶೆಟ್ಟಿ ಬೆಳ್ಳಿ ಬೆಟ್ಟು ಗುತ್ತು, ವಸಂತ ಶೆಟ್ಟಿ, ರವೀಂದ್ರ ಎಸ್.ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News