ಪ್ರಸವ ಪೂರ್ವ ಭ್ರೂಣಲಿಂಗ ಪತ್ತೆ ನಿಷೇಧ: ಕಾರ್ಯಗಾರ

Update: 2017-08-22 16:33 GMT

ಮಂಗಳೂರು, ಆ.22: ಪ್ರಸವ ಪೂರ್ವ ಭ್ರೂಣ ಲಿಂಗ ಪತ್ತೆ ನಿಷೇಧ ಕಾಯ್ದೆ-1996 ಕುರಿತು ಕಾರ್ಯಾಗಾರ ಜಿಲ್ಲಾ ವೆನ್‌ಲಾಕ್ ಆಸ್ಪತ್ರೆಯ ಆರ್.ಎ.ಪಿ.ಸಿ.ಸಿ. ಸಭಾಂಗಣದಲ್ಲಿ ನಡೆಯಿತು.

ದಕ್ಷಿಣ ಕನ್ನಡ ಜಿಲ್ಲಾ ಸಕ್ಷಮ ಪ್ರಾಧಿಕಾರ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ದಕ್ಷಿಣ ಕನ್ನಡ ಇವರ ಸಂಯುಕ್ತ ಆಶ್ರಯದಲ್ಲಿ ತಾಲೂಕು ಮಟ್ಟದ ಕಾರ್ಯಾಗಾರವನ್ನು ಜಿಲ್ಲಾ ಸಕ್ಷಮ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಡಾ.ಕೆ.ಜಿ ಜಗದೀಶ್ ಉದ್ಘಾಟಿಸಿದರು.

ದಕ್ಷಿಣ ಕನ್ನಡ ಜಿಲ್ಲೆಯು ವಿದ್ಯಾವಂತರ ಜಿಲ್ಲೆಯಾದರೂ ಲಿಂಗಾನುಪಾತದ ಅಂಕಿಅಂಶಗಳ ಪ್ರಕಾರ ಹೆಣ್ಣುಮಕ್ಕಳ ಸಂಖ್ಯೆ ತುಂಬಾ ಕಡಿಮೆ ಇರುವುದು ಶೋಚನೀಯ. ಅನುವಂಶಿಕವಾಗಿ ಯಾವುದೇ ಸಮುದಾಯ ಅಥವಾ ಜನಾಂಗದಲ್ಲಿ ಗಂಡು-ಹೆಣ್ಣು ಜನನ ಪ್ರಮಾಣ ಸಮ ಪ್ರಮಾಣದಲ್ಲಿರಬೇಕು. ಲಿಂಗಾನುಪಾತವನ್ನು ಸರಿದೂಗಿಸುವಲ್ಲಿ ಎಲ್ಲಾ ಸ್ಕ್ಯಾನಿಂಗ್ ಸೆಂಟರ್‌ಗಳ ಜವಾಬ್ದಾರಿಯುತ ಸ್ಥಾನದಲ್ಲಿರುವ ವೈದ್ಯಾಧಿಕಾರಿಗಳು ಇದರ ಬಗ್ಗೆ ಚಿಂತಿಸಬೇಕು ಎಂದವರು ಹೇಳಿದರು.

ಸ್ಕ್ಯಾನಿಂಗ್ ಸೆಂಟರ್‌ಗಳು ಇರುವುದು ಲಿಂಗ ಪತ್ತೆ ಮಾಡುವುದಕ್ಕೆ ಅಲ್ಲ. ಭ್ರೂಣದ ಹಂತದಲ್ಲಿರುವ ಶಿಶು ನ್ಯೂನತೆಯನ್ನು ಕಂಡುಹಿಡಿಯಲಿಕ್ಕೆ ಇರುವ ಸಾಧನ. ಇದನ್ನು ಪ್ರತಿಯೊಬ್ಬರು ಅರಿತುಕೊಂಡಿರಬೇಕು. ಈ ನಿಟ್ಟಿನಲ್ಲಿ ಇಲಾಖೆ ಹಾಗೂ ಇಲಾಖೇತರ ಸಂಘ-ಸಂಸ್ಥೆಗಳ ಮೂಲಕ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಮೇಲ್ವಿಚಾರಕರು ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಯವರು ಕ್ಷೇತ್ರಮಟ್ಟದಿಂದಲೇ ಗರ್ಭಿಣಿ ದಾಖಲಾತಿಯಿಂದ ಹೆರಿಗೆಯಾಗುವ ತನಕ ಅನುಸರಣೆ ಮಾಡಬೇಕಾಗಿದೆ. ಎಲ್ಲಿಯಾದರೂ ತೊಡಕು, ಗರ್ಭಪಾತ ಕಂಡುಬಂದಲ್ಲಿ ಅದರ ಕಾರಣವನ್ನು ಪರಮರ್ಶಿಸಬೇಕು. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಹೊಣೆಗಾರಿಕೆುಂದ ಕರ್ತವ್ಯ ನಿರ್ವಹಿಸಬೇಕೆಂದು ಜಿಲ್ಲಾಧಿಕಾರಿಯವರು ಹೇಳಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ರಾಮಕೃಷ್ಣ ರಾವ್ ಮಾತನಾಡಿ, ಕ್ಷೇತ್ರ ಮಟ್ಟದಿಂದಲೇ ಹೆಣ್ಣು ಮಗುವಿನ ಸಂರಕ್ಷಣೆ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯೊಂದಿಗೆ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಇಲಾಖೆ ಹಾಗೂ ಸಂಘ-ಸಂಸ್ಥೆಯ ಅಧಿಕಾರಿ, ಸಿಬ್ಬಂದಿಗಳಿಗೆ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಡಾ.ರಶ್ಮಿ, ಹಿರಿಯ ವಕೀಲರು ಆಶಾ ನಾಯಕ್ ಹಾಗೂ ಡಾ.ನವೀನ್‌ಚಂದ್ರ ಕುಲಾಲ್ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಪ್ರಸವ ಪೂರ್ವ ಭ್ರೂಣ ಲಿಂಗ ಪತ್ತೆ ನಿಷೇಧ ಕಾಯ್ದೆ-1996 ಮಾಹಿತಿ ನೀಡಿದರು.ಮುಖ್ಯ ಅಥಿತಿಗಳಾಗಿ ಜಿಲ್ಲಾ ಶಸ್ತ್ರ ಚಿಕಿತ್ಸಕಿ ಹಾಗೂ ಡಾ. ರಾಜೇಶ್ವರಿ ದೇವಿ, ಪ್ರಭಾರ ಲೇಡಿಘೋಷನ್ ವೈದ್ಯಕೀಯ ಅಧೀಕ್ಷಕಿ ಡಾ. ಶಕುಂತಳ, ಡಾ.ಸಂತೋಷ್ ರೈ ಉಪಸ್ಥಿತರಿದ್ದರು. ಡಾ.ದುರ್ಗಾ ಪ್ರಸಾದ್ ಸ್ವಾಗತಿಸಿದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜ್ಯೋತಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News