ಗ್ರಾಮೀಣ ಅಂಚೆ ನೌಕರರ ಮುಷ್ಕರ: ಸಂಸದರಿಂದ ಬೇಡಿಕೆ ಈಡೇರಿಸುವ ಭರವಸೆ

Update: 2017-08-22 16:56 GMT

ಪುತ್ತೂರು, ಆ. 22: ಗ್ರಾಮೀಣ ಅಂಚೆ ನೌಕರರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪುತ್ತೂರು ವಿಭಾಗೀಯ ವ್ಯಾಪ್ತಿಯ ಗ್ರಾಮೀಣ ಅಂಚೆ ನೌಕರರು ಪುತ್ತೂರಿನ ಪ್ರಧಾನ ಅಂಚೆ ಕಚೇರಿಯ ಎದುರು ನಡೆಸುತ್ತಿರುವ ಅನಿರ್ಧಿಷ್ಠಾವಧಿ ಮುಷ್ಕರ 7ನೇ ದಿನವೂ ಮುಂದುವರಿದಿದೆ.

ಸಂಸದ ನಳಿನ್ ಕುಮಾರ್ ಕಟೀಲು ಅವರು ಮಂಗಳವಾರ ಮುಷ್ಕರ ನಿರತರ ಬಳಿಗೆ ತೆರಳಿ ಪ್ರತಿಭಟನಾಕಾರರ ಜೊತೆ ಮಾತುಕತೆ ನಡೆಸಿ ಬೇಡಿಕೆ ಈಡೇರಿಸುವ ಭರವಸೆ ನೀಡಿದರು.

ವೇತನ ಆಯೋಗದ ವರದಿಯನ್ನು ಕೂಡಲೇ ಜಾರಿಗೊಳಿಸುವಂತೆ ಆಗ್ರಹಿಸಿ ಆ.16ರಿಂದ ಪ್ರಾರಂಭಗೊಂಡಿರುವ ಗ್ರಾಮೀಣ ಅಂಚೆ ನೌಕರರ ದೇಶ ವ್ಯಾಪಿ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಬೆಂಬಲ ಸೂಚಿಸಿ ಪುತ್ತೂರು ಪ್ರಧಾನ ಕೇಂದ್ರ ಅಂಚೆ ಕಚೇರಿ ವ್ಯಾಪ್ತಿಗೆ ಸಂಬಂಧಿಸಿ ಪುತ್ತೂರು, ಸುಳ್ಯ, ಬೆಳ್ತಂಗಡಿ, ಬಂಟ್ವಾಳ, ಕಾರ್ಕಳ ವಲಯದ ಗ್ರಾಮೀಣ ಅಂಚೆ ನೌಕರರು ಪುತ್ತೂರಿನ ಪ್ರಧಾನ ಅಂಚೆ ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ.

ನಿಮ್ಮ ಸಮಸ್ಯೆ ತಮಗೆ ಅರ್ಥವಾಗುತ್ತಿದೆ. ಈ ಕುರಿತು ಸರ್ಕಾರದ ಮಟ್ಟದಲ್ಲಿ ಮಾತುಕತೆ ನಡೆಸಿ ಬೇಡಿಕೆಗಳನ್ನು ಈಡೇರಿಸುವ ಕುರಿತು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಸಂಸದ ನಳಿನ್‌ಕುಮಾರ್ ಕಟೀಲು ಅವರು ಈ ಸಂದರ್ಭದಲ್ಲಿ ಭರವಸೆ ನೀಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News