ಕಲ್ಲಡ್ಕ ಶ್ರೀ ರಾಮ ವಿದ್ಯಾ ಕೇಂದ್ರಕ್ಕೆ ಮಾಜಿ ಸಚಿವ ಜನಾರ್ದನ ರೆಡ್ಡಿ ಭೇಟಿ

Update: 2017-08-22 17:21 GMT

ಬಂಟ್ವಾಳ, ಆ. 22: ಪಕ್ಷಾತೀತವಾಗಿ ಆಡಳಿತ ನಡೆಸಬೇಕಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಮಕ್ಕಳ ಅನ್ನವನ್ನು ಕಸಿದುಕೊಳ್ಳುವ ಕೊಳಕು ರಾಜಕಾರಣ ಮಾಡಿರುವ ಪ್ರವ್ರತ್ತಿಗೆ ಮುಂದಿನ ದಿನಗಳಲ್ಲಿ ರಾಜ್ಯದ ಜನತೆಯೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಮಾಜಿ ಸಚಿವ ಜನಾರ್ದನ ರೆಡ್ಡಿ ಹೇಳಿದ್ದಾರೆ.

ಮಂಗಳವಾರ ಕಲ್ಲಡ್ಕ ಶ್ರೀರಾಮ ವಿದ್ಯಾ ಕೇಂದ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ತಮ್ಮನ್ನು ಭೇಟಿಯಾದ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಶಾಲೆಯ ಮಕ್ಕಳಿಗೆ ರಾಷ್ಟ್ರ ಪ್ರೇಮ, ಸಂಸ್ಕಾರ, ಸಂಸ್ಕ್ರತಿಯ ಜೊತೆಗೆ ಕನ್ನಡ ಮಾಧ್ಯಮದಲ್ಲೆ ಶಿಕ್ಷಣವನ್ನು ಬೋಧಿಸಲಾಗುತ್ತಿದೆ. ತನ್ಮೂಲಕ ಕನ್ನಡವನ್ನು ಉಳಿಸುವ ಮಹತ್ಕಾರ್ಯ ನಡೆಯುತ್ತಿದ್ದು, ಸರಕಾರ ಇದಕ್ಕಾಗಿ ಹೆಮ್ಮೆ ಪಡಬೇಕಿದೆ. ಬದಲಿಗೆ ಕೊಲ್ಲೂರು ದೇವಾಲಯದಿಂದ ನೀಡಲಾಗುತ್ತಿದ್ದ ಅನ್ನಪ್ರಸಾದದ ಅನುದಾನವನ್ನೇ ಕಡಿತಗೊಳಿಸಿರುವುದು ಖಂಡನೀಯವಾಗಿದೆ ಎಂದರು. ತಮ್ಮ ಮಾತಿನದ್ದಕ್ಕೂ ಸರಕಾರದ ವಾಗ್ದಾಳಿ ನಡೆಸಿದ ಜನಾರ್ದನರೆಡ್ಡಿ, ನನ್ನಂತಹ ರಾಜಕಾರಣಿಗಳ ಮೇಲೆ ಸರಕಾರ ವಯಕ್ತಿಕವಾಗಿ ದ್ವೇಷ ಸಾಧಿಸಿದರೆ ಅದನ್ನು ಸಹಿಸುವ ಶಕ್ತಿ ನಮಗಿದೆ. ಆದರೆ ಒಂದು ವಿದ್ಯಾ ಸಂಸ್ಥೆಯನ್ನು ದೇಶಕ್ಕೆ ಮಾದರಿಯಾಗಿ ರೂಪಿಸಿರುವ ಹಿಂದುತ್ವದ ರಕ್ಷಣೆಯಲ್ಲಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿರುವ ಪ್ರಭಾಕರ ಭಟ್‌ರನ್ನು ತೊಂದರೆ ಸಿಲುಕಿಸುವುದನ್ನು ಎಂದಿಗೂ ಸಹಿಸಲು ಸಾಧ್ಯವಿಲ್ಲ. ಈ ದೆಸೆಯಲ್ಲಿ ಅವರಿಗೆ ಎಲ್ಲಾ ರೀತಿಯಲ್ಲೂ ಸಹಕಾರ ನೀಡಲು ಬದ್ಧನಾಗಿದ್ದೇನೆ ಎಂದರು.                                      
26 ಲಕ್ಷ ರೂ. ನೆರವು

ಇದೇ ವೇಳೆ ಜನಾರ್ದನ ರೆಡ್ಡಿ ಹಾಗೂ ಅವರ ಸ್ನೇಹಿತ ಉದ್ಯಮಿ ಸೇರಿ ಈಗಾಗಲೇ ಆರಂಭವಾಗಿರುವ ಭಿಕ್ಷಾಂದೇಹಿ ಅಭಿಯಾನಕ್ಕೆ 26 ಲಕ್ಷ ರೂ. ಚೆಕ್ಕು ಹಸ್ತಾಂತರಿಸಿದರು. ಬಳಿಕ ಶಾಲಾ ಮಕ್ಕಳನ್ನುದ್ದೇಶಿಸಿ ಮಾತನಾಡಿದರು. ರೆಡ್ಡಿ ಸ್ನೇಹಿತ ಉದ್ಯಮಿಗಳಾದ ಸದಾನಂದ, ಪ್ರಮೋದ್ ಶೆಟ್ಟಿ, ಲಲ್ಲೇಶ ರೆಡಿ, ಸಂದೇಶ್ ಮೊದಲಾದವರಿದ್ದರು. ಪ್ರಭಾಕರ ಭಟ್ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News