27 ವರ್ಷಗಳ ಬಳಿಕ ದ.ಕ. ಜಿಲ್ಲೆಯಲ್ಲಿ ಸಮಾವೇಶಕ್ಕೆ ಅವಕಾಶ; ಅಂದಾಜು 10 ಸಾವಿರ ವಿದ್ಯಾರ್ಥಿಗಳ ಭಾಗವಹಿಸುವಿಕೆ

Update: 2017-08-22 17:50 GMT

ಮಂಗಳೂರು, ಆ.22: ಸ್ಕೌಟಿಂಗ್ ಮತ್ತು ಗೈಡಿಂಗ್‌ನಲ್ಲಿ ರಾಜ್ಯದಲ್ಲಿ ಕ್ರೀಯಾಶೀಲವಾಗಿರುವ, ಮುಂಚೂಣಿಯಲ್ಲಿರುವ ದ.ಕ. ಜಿಲ್ಲಾ ಸಂಸ್ಥೆ ವತಿಯಿಂದ ಡಿಸೆಂಬರ್‌ನಲ್ಲಿ ರಾಜ್ಯ ಮಟ್ಟದ ಜಾಂಬೋರೇಟ್ ಸಮಾವೇಶ ನಗರದ ಕೂಳೂರಿನಲ್ಲಿ ನಡೆಯಲಿದೆ.

ಸಮಾವೇಶದ ಕುರಿತಂತೆ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅಧ್ಯಕ್ಷತೆಯಲ್ಲಿ ಇಂದು ಕಾರ್ಯಕ್ರಮದ ರೂಪುರೇಷೆಗಳನ್ನು ಸಿದ್ಧಪಡಿಸುವ ಕುರಿತಂತೆ ಪೂರ್ವಭಾವಿ ಸಭೆ ನಡೆಯಿತು.

27 ವರ್ಷಗಳ ಬಳಿಕ ರಾಜ್ಯ ಮಟ್ಟದ ಜಾಂಬೋರೇಟ್ ಸಮಾವೇಶವನ್ನು ದ.ಕ. ಜಿಲ್ಲೆಯಲ್ಲಿ ಆಯೋಜಿಸಲಾಗುತ್ತಿದೆ. ನಗರದ ಕೂಳೂರಿನ 100 ಎಕರೆ ವಿಶಾಲವಾದ ಜಾಗದಲ್ಲಿ ಸಮಾವೇಶವನ್ನು ಆಯೋಜಿಸಲು ತೀರ್ಮಾನಿಸಲಾಗಿದೆ ಎಂದು ದ.ಕ. ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್‌ನ ಆಯುಕ್ತರಾದ ಎನ್. ಜಿ. ಮೋಹನ್‌ರವರು ಈ ಕುರಿತಂತೆ ಮಾಹಿತಿ ನೀಡಿದರು.

ಸಮಾವೇಶದಲ್ಲಿ ದೇಶದ ವಿವಿಧ ಕಡೆಗಳಿಂದ ಸ್ಕೌಟ್ಸ್ ಮತ್ತು ಗೈಡ್ಸ್‌ನ ಸುಮಾರು 10,000 ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಒಂದು ವಾರ ನಡೆಯುವ ಸಮಾವೇಶಕ್ಕಾಗಿ ಅಂದಾಜು ಮೂರು ಕೋಟಿ ರೂ. ವೆಚ್ಚವಾಗಲಿದೆ ಎಂದು ಅವರು ತಿಳಿಸಿದರು.

ದೇಶದ ವಿವಿಧ ರಾಜ್ಯಗಳಿಂದ ಮಾತ್ರವಲ್ಲದೆ, ಶ್ರೀಲಂಕಾ, ಬಾಂಗ್ಲಾದೇಶದಿಂದಲೂ ತಲಾ ಒಂದರಂತೆ ಕಂಟಿಜೆಂಟ್ (ಸ್ಕೌಟ್ಸ್ ಮತ್ತು ಗೈಡ್ಸ್ ತಂಡ)ಗಳು ಭಾಗವಹಿಸುವಂತೆ ವ್ಯವಸ್ಥೆ ಮಾಡಲು ಚಿಂತಿಸಲಾಗಿದೆ. ಇವೆಲ್ಲದಕ್ಕಾಗಿ ಅದಕ್ಕಾಗಿ ಒಂದು ವಾರ ಕಾಲ ಸಮಾವೇಶದಲ್ಲಿ ವಿದ್ಯಾರ್ಥಿಗಳಿಗೆ ಸುಮಾರು 1200ರಷ್ಟು ಟೆಂಟ್‌ಗಳ ವ್ಯವಸ್ಥೆ, 1000ದಷ್ಟು ಶೌಚಾಲಯಗಳ ವ್ಯವಸ್ಥೆ, ನೀರು, ಸಾರಿಗೆ ಹಾಗೂ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲು ವ್ಯವಸ್ಥೆ ಮಾಡಬೇಕು ಎಂದು ಅವರು ಸಚಿವರನ್ನು ಆಗ್ರಹಿಸಿದರು.

ಸ್ಕೌಟ್ಸ್ ಮತ್ತು ಗೈಡ್ಸ್‌ನ ರಾಜ್ಯ ಮುಖ್ಯಸ್ಥರಾದ ಪಿ.ಜಿ.ಆರ್. ಸಿಂಧ್ಯಾ ಮಾತನಾಡಿ, ಸಮಾವೇಶಕ್ಕೆ ಪೂರಕವಾಗಿ ವಿವಿಧ ಸಮಿತಿಗಳನ್ನು ರಚಿಸಿ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಸಲಹೆ ನೀಡಿದರು.

ಸಮಾವೇಶದಲ್ಲಿ ಭಾಗವಹಿಸುವ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ತಾವೇ ತಮ್ಮ ಆಹಾರವನ್ನು ತಯಾರಿಸಿಕೊಳ್ಳಲಿದ್ದು, ಅದಕ್ಕಾಗಿ ಸೂಕ್ತ ಅಡುಗೆ ಕೋಣೆಯ ವ್ಯವಸ್ಥೆಯನ್ನು ಸಮಾವೇಶ ಸ್ಥಳದಲ್ಲಿ ಕಲ್ಪಿಸಬೇಕಿದೆ. ಅಡುಗೆ ಅನಿಲ, ಆಹಾರ ಸಾಮಗ್ರಿಗಳೊಂದಿಗೆ 33 ಅಡುಗೆ ಕೋಣೆಗಳು ಹಾಗೂ ಒಂದು ಮಾಸ್ಟರ್ ಅಡುಗೆ ಕೋಣೆಯ ವ್ಯವಸ್ಥೆಯನ್ನು ಒದಗಿಸತಕ್ಕದ್ದು. ಇದರ ಜತೆ ಶೌಚಾಲಯ ವ್ಯವಸ್ಥೆ, ಕನಿಷ್ಠ 10 ಬೆಡ್‌ಗಳ ಆಸ್ಪತ್ರೆ, ಸುರಕ್ಷತೆಯ ದೃಷ್ಟಿಯಿಂದ ಸಿಸಿ ಕ್ಯಾಮರಾ ಆಳವಡಿಕೆ ಮೊದಲಾದ ಪೂರಕ ಸೌಕರ್ಯಗಳನ್ನು ಲ್ಪಿಸಬೇಕೆಂದು ಅವರು ತಿಳಿಸಿದರು.

ಶಾಸಕ ಜೆ.ಆರ್.ಲೋಬೊ, ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಕವಿತಾ ಸನಿಲ್, ಜಿಲ್ಲಾಧಿಕಾರಿ ಡಾ.ಕೆ.ಜಿ.ಜಗದೀಶ್, ಹೆಚ್ಚುವರಿ ಜ್ಲಿಾಧಿಕಾರಿ ಕುಮಾರ್, ಉಪಸ್ಥಿತರಿದ್ದರು.

ಜಾಂಬೋರೇಟ್ ಸಮಾವೇಶ ಯಶಸ್ವಿಗೆ ಕಾರ್ಯಾಚರಿಸಿ: ಸಚಿವ ರೈ
ದ.ಕ. ಜಿಲ್ಲೆಯಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಚಟುವಟಿಕೆಗಳು ಉತ್ತಮವಾಗಿದ್ದು, ಜಾಂಬೋರೇಟ್ ಸಮಾವೇಶ ನಡೆಸಲು ಜಿಲ್ಲೆಗೆ 27 ವರ್ಷಗಳ ಬಳಿಕ ಅವಕಾಶ ದೊರಕಿದೆ. ಅದನ್ನು ಯಶಸ್ವಿಯಾಗಿ ನಿರ್ವಹಿಸಲು ಜಿಲ್ಲಾಡಳಿತ ಸಿದ್ಧತೆಗಳನ್ನು ನಡೆಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಸೂಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News