ಒಬಿಸಿಗಳಿಗೆ ‘ಕೆನೆ ಪದರ’ ಆದಾಯ ಮಿತಿ 8 ಲ.ರೂ.ಗೆ ಏರಿಕೆ

Update: 2017-08-23 13:59 GMT

ಹೊಸದಿಲ್ಲಿ,ಆ.23: ಕೇಂದ್ರ ಸಂಪುಟವು ಕೇಂದ್ರ ಸರಕಾರಿ ಹುದ್ದೆಗಳಿಗಾಗಿ ಇತರ ಹಿಂದುಳಿದ ವರ್ಗ(ಒಬಿಸಿ)ಗಳಿಗೆ ‘ಕೆನೆ ಪದರ’ ಆದಾಯ ಮಿತಿಯನ್ನು ಈಗಿನ ಆರು ಲ.ರೂ.ಗಳಿಂದ ಎಂಟು ಲ.ರೂ.ಗಳಿಗೆ ಹೆಚ್ಚಿಸಿದೆ ಎಂದು ವಿತ್ತಸಚಿವ ಅರುಣ್ ಜೇಟ್ಲಿ ಅವರು ಬುಧವಾರ ಇಲ್ಲಿ ತಿಳಿಸಿದರು.

ಸುದ್ದಿಗಾರರಿಗೆ ಕೇಂದ್ರ ಸಂಪುಟದ ನಿರ್ಧಾರಗಳ ಬಗ್ಗೆ ಮಾಹಿತಿ ನೀಡಿದ ಅವರು, ಎಂಟು ಲ.ರೂ.ಗಳವರೆಗೆ ಆದಾಯವಿರುವ ಒಬಿಸಿ ಅಭ್ಯರ್ಥಿಗಳು ಈಗ ಮೀಸಲಾತಿ ಸೌಲಭ್ಯಗಳನ್ನು ಪಡೆಯಬಹುದು ಎಂದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಸಂಪುಟದ ನಿರ್ಧಾರದ ಲಾಭವನ್ನು ಸಾರ್ವಜನಿಕ ಕ್ಷೇತ್ರದ ಉದ್ಯಮಗಳಿಗೆ ವಿಸ್ತರಿಸುವ ಪ್ರಸ್ತಾವವು ಸರಕಾರದ ‘ಸಕ್ರಿಯ ಪರಿಶೀಲನೆ’ಯಲ್ಲಿದೆ ಎಂದು ತಿಳಿಸಿದರು.

ಉಪ ವರ್ಗೀಕರಣ ಕುರಿತು ನೂತನ ಆಯೋಗ ಸ್ಥಾಪನೆ

ಒಬಿಸಿಗಳ ಉಪ ವರ್ಗೀಕರಣ ಕುರಿತು ಪರಿಶೀಲಿಸಲು ಆಯೋಗವೊಂದನ್ನು ಸರಕಾರವು ಶೀಘ್ರವೇ ರಚಿಸಲಿದ್ದು, ಅಧ್ಯಕ್ಷರ ನೇಮಕವಾದ 12 ವಾರಗಳಲ್ಲಿ ಆಯೋಗವು ತನ್ನ ವರದಿಯನ್ನು ಸಲ್ಲಿಸುವ ನಿರೀಕ್ಷೆಯಿದೆ ಎಂದು ಜೇಟ್ಲಿ ತಿಳಿಸಿದರು.

ಒಬಿಸಿಗಳನ್ನು ಅತ್ಯಂತ ಹಿಂದುಳಿದ ವರ್ಗಗಳು(ಗ್ರೂಪ್ ಎ), ಹೆಚ್ಚು ಹಿಂದುಳಿದ ವರ್ಗಗಳು(ಗ್ರೂಪ್ ಬಿ) ಮತ್ತು ಹಿಂದುಳಿದ ವರ್ಗಗಳು(ಗ್ರೂಪ್ ಸಿ) ಎಂದು ಉಪ ವರ್ಗೀಕರಿಸುವಂತೆ ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗವು ಸರಕಾರಕ್ಕೆ ಸಲ್ಲಿಸಿರುವ ತನ್ನ ವರದಿಯಲ್ಲಿ ಶಿಫಾರಸು ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News