ಸರಕಾರಿ ಶಾಲೆಯ ಮಕ್ಕಳು ಅದೃಷ್ಟವಂತರು: ಶಾಸಕ ಮೊಯ್ದಿನ್ ಬಾವಾ
ಮಂಗಳೂರು, ಆ. 23: ನಾನು ಕಲಿಯುವಾಗ ಸರಕಾರಿ ಶಾಲೆಯಲ್ಲಿ ಯಾವುದೇ ಸೌಲಭ್ಯ ಇರಲಿಲ್ಲ. ಆದರೆ ಈಗಿನ ರಾಜ್ಯ ಸರಕಾರ ಮಕ್ಕಳಿಗೆ ಪುಸ್ತಕ, ಸಮವಸ್ತ್ರ, ಶೂ, ಸೈಕಲ್ ಹಾಗೂ ಹಾಲು, ಮಧ್ಯಾಹ್ನದ ಊಟವನ್ನೂ ನೀಡುತ್ತಿದೆ ಎಂದು ತನ್ನ ಬಾಳಿನ ಶಾಲಾ ಜೀವನವನ್ನು ನೆನಪಿಸಿ ಈಗಿನ ಮಕ್ಕಳು ಅದೃಷ್ಟವಂತರು ಎಂದು ಶಾಸಕ ಮೊಯ್ದಿನ್ ಬಾವಾ ಅಭಿಪ್ರಾಯಪಟ್ಟರು.
ಅವರು ಕಾಟಿಪಳ್ಳ 2ನೆ ಬ್ಲಾಕಿನ ಸರಕಾರಿ ಶಾಲೆಯಲ್ಲಿ 2017-18ರ ಪ್ರತಿಭಾ ಕಾರಂಜಿ ಕಾರ್ಯಕ್ರಮದ ಉದ್ಘಾಟನೆಗೈದು ಮಾತನಾಡಿದರು.
ಈ ಸಂದರ್ಭ ದಕ್ಷಿಣ ಕನ್ನಡ ಜಿಲ್ಲಾ ಆಮ್ ಆದ್ಮಿ ಪಕ್ಷದ ಮುಖಂಡ ಕಬೀರ್ ಕಾಟಿಪಳ್ಳ ಮಾತನಾಡಿ, ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಸರಕಾರಿ ವೆಚ್ಚದಲ್ಲಿ ಮಾಡದೆ ಶಾಲಾ ಶಿಕ್ಷಕ ವೃಂದದವರಿಗೆ ಖಾಸಗಿ ಹಣ ಸಂಗ್ರಹಿಸಿ ಕಾರ್ಯಕ್ರಮವನ್ನು ಮಾಡುವ ಸೂಚನೆಯನ್ನು ನಿಲ್ಲಿಸಿ ಸರಕಾರದ ವೆಚ್ಚದಿಂದಲೇ ನಡೆಯುವ ನಿಯಮ ಬರಲಿ ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಶಿಕ್ಷಕಿ ದೀಪ ಶಾಲೆಯ ಎರಡು ಕೊಠಡಿಯ ದುರಸ್ತಿಯ ಬಗ್ಗೆ ಶಾಸಕರಿಗೆ ವನವಿ ನೀಡಿದರು. ಸ್ಥಳೀಯ ಕಾರ್ಪೋರೇಟರ್ ಬಶೀರ್ ಅಹ್ಮದ್ ಅಧ್ಯಕ್ಷತೆ ವಹಿಸಿದ್ದರು. ದಕ್ಷಿಣ ಕನ್ನಡ ಶಿಕ್ಷಕ ಸಂಘದ ಪ್ರತಿನಿಧಿ ಅನಂತ ರಾಮ ರಾವ್, ಶಾಲಾ ಮುಖ್ಯೋಪಾಧ್ಯಾಯಿನಿ ಸತ್ಯಭಾಮ, ಅಬ್ದುಲ್ ಸತ್ತಾರ್, ಹಬೀಬ್, ಎಂ. ಯೂಸುಫ್ ಹಾಗು ಇತರರು ಉಪಸ್ಥಿತರಿದ್ದರು. ಶಿಕ್ಷಕಿ ದೀಪಾ ಕಾರ್ಯಕ್ರಮ ನಿರೂಪಿಸಿದರು. ಶಿಶಿಲಾ ಪೆರೀಸ್ ವಂದಿಸಿದರು.