ಶೀಘ್ರದಲ್ಲಿ 200 ರೂ. ನೋಟು ಚಲಾವಣೆಗೆ
ಹೊಸದಿಲ್ಲಿ, ಆ. 23: ಕಡಿಮೆ ಮುಖ ಬೆಲೆಯ ನೋಟುಗಳ ಕೊರತೆಯ ಒತ್ತಡ ನಿವಾರಿಸಲು 200 ರೂಪಾಯಿ ನೋಟು ಬಿಡುಗಡೆ ಮಾಡಲು ರಿಸರ್ವ್ ಬ್ಯಾಂಕ್‌ಗೆ ಕೇಂದ್ರ ಸರಕಾರ ಬುಧವಾರ ಅನುಮತಿ ನೀಡಿದೆ.
200 ರೂಪಾಯಿ ನೋಟುಗಳು ಶೀಘ್ರದಲ್ಲಿ ಬಿಡುಗಡೆಯಾಗಲಿದೆ. ದೇಶದಲ್ಲಿ ನೋಟುಗಳ ಕೊರತೆ ನಿವಾರಿಸಲು 200 ರೂಪಾಯಿ ನೋಟುಗಳ ಮುದ್ರಣ ಆರಂಭಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಕಳೆದ ವರ್ಷ ನವೆಂಬರ್ 9ರಂದು ನೋಟು ನಿಷೇಧಿಸಿದ ಬಳಿಕ ರಿಸರ್ವ್ ಬ್ಯಾಂಕ್ ಹೆಚ್ಚುವರಿ ಭದ್ರತಾ ಅಂಶಗಳೊಂದಿಗೆ 2000 ರೂಪಾಯಿಯ ನೋಟು ಹಾಗೂ 500 ರೂಪಾಯಿಯ ನೋಟನ್ನು ಬಿಡುಗಡೆಗೊಳಿಸಿತ್ತು.
ಹೆಚ್ಚು ಮುಖಬೆಲೆಯ 2000 ರೂಪಾಯಿ ನೋಟಿನಿಂದ ಜನರು ಚಿಲ್ಲರೆ ಸಮಸ್ಯೆ ಎದುರಿಸುತ್ತಿದ್ದರು. ಆದರೆ, ಈಗ 200 ರೂಪಾಯಿ ನೋಟು ಬಿಡುಗಡೆ ಮಾಡುವುದರಿಂದ ಜನರ ಸಮಸ್ಯೆಗೆ ಪರಿಹಾರ ದೊರೆಯಲಿದೆ.
ಇತ್ತೀಚೆಗೆ ರಿಸರ್ವ್ ಬ್ಯಾಂಕ್ ಭಾರತದ ಸಂಸ್ಕೃತಿಯನ್ನು ಪ್ರತಿನಿಧಿಸುವ ಹಂಪಿಯ ರಥದ ಚಿತ್ರವಿರುವ 50 ರೂಪಾಯಿಯ ಫ್ಲೋರೋಸೆಂಟ್ ನೋಟನ್ನು ಬಿಡುಗಡೆ ಮಾಡಿತ್ತು.