ಆರೋಪಿಗಳಿಗೆ ರಾಜಾತಿಥ್ಯವೆಂಬುದು ಸುಳ್ಳು ಆರೋಪ: ವಕೀಲರ ಹೇಳಿಕೆ
ಮಂಗಳೂರು, ಆ. 23: ಉಡುಪಿಯ ಅನಿವಾಸಿ ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವ ವೇಳೆ ರಾಜಾತಿಥ್ಯ ನೀಡಲಾಗಿದೆ ಎಂಬುದು ಸುಳ್ಳು ಆರೋಪ ಎಂದು ಆರೋಪಿ ಪರ ವಕೀಲರು ಹೇಳಿದ್ದಾರೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಕೀಲ ಬೆಳುವಾಯಿ ಅರುಣ್ ಬಂಗೇರ, ಈ ಪ್ರಕರಣದಲ್ಲಿ ಅನಗತ್ಯ ವಿಷಯಗಳಿಗೆ ಸಂಬಂಧಿಸಿ ದಂತೆ ಆರೋಪಿಗಳ ಮಾನಸಿಕ ಸ್ಥೈರ್ಯವನ್ನು ಕೆಡಿಸುವಂತಹ ಕಾರ್ಯಗಳು ನಡೆಯುತ್ತಿವೆ ಎಂದು ಆಪಾದಿಸಿದರು. ಆರೋಪಿಗಳಿಗೆ ಜೈಲಿನಲ್ಲಿ ಹಾಗೂ ಹೊರಗಡೆ ಜೀವ ಬೆದರಿಕೆ ಇರುವುದರಿಂದ ಅವರನ್ನು ಸಾರ್ವಜನಿಕರು ಉಪಯೋಗಿಸುವ ಬಸ್ ನಲ್ಲಿ ಕರೆದೊಯ್ಯದೆ ಪೊಲೀಸ್ ವಾಹನದಲ್ಲಿ ಕರೆದೊಯ್ಯಬೇಕು ಎಂದು ನ್ಯಾಯಾಲಯಕ್ಕೆ ಎರಡು ಬಾರಿ ಮನವಿ ಮಾಡಲಾಗಿದೆ. ಅದಕ್ಕಾಗಿ ಅದಕ್ಕೆ ಪೂರಕವಾದ ವಾಹನ ಲಭ್ಯವಾಗದ ಹಿನ್ನೆಲೆಯಲ್ಲಿ ಖಾಸಗಿಯಾಗಿ ಆ ವಾಹನವನ್ನು ವ್ಯವಸ್ಥೆ ಮಾಡಿರಬಹುದು. ಆದರೆ ಈ ವಾಹನಕ್ಕಾಗಿ ರಾಜೇಶ್ವರಿ ದೇವಿ ಬೇಡಿಕೆ ಇಟ್ಟಿಲ್ಲ. ಈ ಹಿಂದೆಯೂ ನ್ಯಾಯಾಲಯಕ್ಕೆ ಹಾಜರಾಗುವ ಸಂದರ್ಭ ಆರೋಪಿಗಳನ್ನು ಪೊಲೀಸ್ ವಾಹನದಲ್ಲಿಯೇ ಕರೆದೊಯ್ಯಲಾಗಿತ್ತು. ಇದೀಗ ಈ ವಿಷಯಕ್ಕೆ ವಿನಾ ಕಾರಣ ಅಪಾರ್ಥ ಕಲ್ಪಿಸುವುದು ಸರಿಯಲ್ಲ ಎಂದು ಅವರು ಹೇಳಿದರು.
ಪ್ರಕರಣದಲ್ಲಿ ಆಸ್ತಿಗೆ ಸಂಬಂಧಿಸಿದಂತೆ ವಕಾಲತ್ತು ನಡೆಸುತ್ತಿರುವ ರಾಜೇಶ್ವರಿ ಪರ ವಕೀಲರಾದ ಚಿದಾನಂದ ಕೆದಿಲಾಯ ಮಾತನಾಡಿ, ಪ್ರಕರಣದಲ್ಲಿ ಕಾನೂನು ಮುರಿದು ಕೊಲೆಯ ಸುಮಾರು 10 ತಿಂಗಳ ಬಳಿಕ ಮರಣ ಪ್ರಮಾಣ ಪತ್ರವನ್ನು ಮಾಡಿಸಲಾಗಿದೆ. ಮಾತ್ರವಲ್ಲದೆ, ಆಗಸ್ಟ್ 9ರಂದು ಭಾಸ್ಕರ್ ಶೆಟ್ಟಿಯ ತಾಯಿ ಹೆಸರಿಗೆ ವಿಲ್ ಬರೆಯಲಾಗಿತ್ತು ಎಂದು ನ್ಯಾಯಾಲಯಕ್ಕೆ ಅರ್ಜಿಯನ್ನೂ ಸಲ್ಲಿಸಿದ್ದಾರೆ. ಇದನ್ನು ರಿಟ್ ಪಿಟಿಶನ್ ಮೂಲಕ ಪ್ರಶ್ನಿಸಲಾಗಿದೆ ಎಂದು ಹೇಳಿದರು. ಗೋಷ್ಠಿಯಲ್ಲಿ ನ್ಯಾಯವಾದಿ ಅರುಣ್ ಶೆಟ್ಟಿ, ನಿತಿನ್ ಕುತ್ತಾರ್ ಉಪಸ್ಥಿತರಿದ್ದರು.