ಬೆಳ್ಳಂದೂರು ಕೆರೆ ಸ್ವಚ್ಛಕ್ಕೆ ಕ್ರಿಯಾ ಯೋಜನೆ ಸಲ್ಲಿಸಿ
ಹೊಸದಿಲ್ಲಿ, ಆ. 23: ಮತ್ತೆ ಕೆಲವು ದಿನಗಳಿಂದ ನೊರೆ ಉಕ್ಕುತ್ತಿರುವ ಬೆಂಗಳೂರಿನ ಬೆಳ್ಳಂದೂರು ಕೆರೆಯಿಂದ ಘನ ತ್ಯಾಜ್ಯ ತೆಗೆಯುವುದು ಹಾಗೂ ಸ್ವಚ್ಛಗೊಳಿಸುವುದಕ್ಕೆ ಸಂಬಂಧಿಸಿ ಸಂಪೂರ್ಣ ಕ್ರಿಯಾ ಯೋಜನೆ ಸಲ್ಲಿಸಬೇಕು ಎಂದು ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ ಕರ್ನಾಟಕ ಸರಕಾರಕ್ಕೆ ನಿರ್ದೇಶಿಸಿದೆ.
ಬೆಳ್ಳಂದೂರು ಕೆರೆ ಸ್ವಚ್ಛಗೊಳಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳದಿರುವುದಕ್ಕೆ ಕರ್ನಾಟಕ ಸರಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಹಸಿರು ನ್ಯಾಯ ಮಂಡಳಿ, ತನ್ನ ನಿರ್ದೇಶನ ಅನುಸರಿಸುವುದಕ್ಕೆ ಸಂಬಂಧಿಸಿ ವಿವಿಧ ಪ್ರಾಧಿಕಾರಗಳು ನೀಡಿದ ಉತ್ತರಗಳು ತೃಪ್ತಿಕರವಾಗಿಲ್ಲ ಎಂದು ಹೇಳಿದೆ.
ಕೆರೆಯ ಘನ ತ್ಯಾಜ್ಯ, ಹೂಳು ತೆಗೆಯಲು ಹಾಗೂ ನೀರಿನಾಶ್ರಯಕ್ಕೆ ಸಂಸ್ಕರಿಸಿ ಒಳಚರಂಡಿ ನೀರು ಹರಿಸಲು ಕ್ರಮ ಕೈಗೊಳ್ಳುವಂತೆ ಹಸಿರು ನ್ಯಾಯ ಮಂಡಳಿ ನಿರ್ದೇಶಿಸಿದೆ.
ಹೆಚ್ಚುವರಿ ಮುಖ್ಯಕಾರ್ಯದರ್ಶಿ, ರಾಜ್ಯ ಸರಕಾರದ ಹಿರಿಯ ಅಧಿಕಾರಿಗಳು ಹಾಗೂ ಪಾಲುದಾರರು ಪಾಲ್ಗೊಂಡಿದ್ದರು. ಆದರೆ, ಕಾಲಕಾಲಕ್ಕೆ ನೀಡಿದ ನಿರ್ದೇಶನ ಅನುಸರಿಸುವುದಕ್ಕೆ ಸಂಬಂಧಿಸಿ ಪ್ರತಿವಾದಿಗಳು ನೀಡಿದ ಉತ್ತರ ತೃಪ್ತಿಕರವಾಗಿಲ್ಲ ಎಂದು ಹಸಿರು ನ್ಯಾಯ ಮಂಡಳಿ ಹೇಳಿದೆ.
ರಾಜ್ಯದ ಪರವಾಗಿ ಹಾಜರಾಗಿದ್ದ ನ್ಯಾಯವಾದಿ, ಈ ವಿಷಯದ ಬಗ್ಗೆ ತಾನು ವೈಯುಕ್ತಿಕವಾಗಿ ಗಮನ ಹರಿಸುತ್ತೇನೆ ಹಾಗೂ ಸಂಪೂರ್ಣ ಕ್ರಿಯಾ ಯೋಜನೆಯನ್ನು ಮಂಡಳಿಯ ಮುಂದೆ ಸಲ್ಲಿಸುತ್ತೇನೆ ಎಂದು ಹೇಳಿರುವುದಾಗಿ ಎನ್‌ಜಿಟಿ, ಅಧ್ಯಕ್ಷ ನ್ಯಾಯವಾದಿ ಸ್ವತಂತರ್ ಕುಮಾರ್ ನೇತೃತ್ವದ ಪೀಠ ಹೇಳಿದೆ.
ಕೆರೆಗೆ ಡಿಟರ್ಜೆಂಟ್, ಸಂಯೋಜಿತ ಮಾಲಿನ್ಯ ಕಾರಕಗಳು ಹಾಗೂ ಕೊಳಚೆ ನೀರನ್ನು ಉತ್ಪಾದಿಸುವ ಹಾಗೂ ಮಾಲಿನ್ಯಕ್ಕೆ ಕಾರಣವಾಗುವ ವಸತಿ ಸಂಕೀರ್ಣಗಳ ವಿರುದ್ಧ ಕಠಿಮ ಕ್ರಮ ಕೈಗೊಳ್ಳುವಂತೆ ಕೂಡ ಹಸಿರು ನ್ಯಾಯ ಮಂಡಳಿ ನಿರ್ದೇಶಿಸಿದೆ.