×
Ad

ಕಾಣೆಯಾಗಿದ್ದ ಭಟ್ಕಳದ ವೃದ್ಧೆ ಕೊನೆಗೂ ಮಂಗಳೂರಿನಲ್ಲಿ ಪತ್ತೆ

Update: 2017-08-23 20:56 IST

ಮಂಗಳೂರು, ಆ.23: ಭಟ್ಕಳದ ಮಗ್ದೂಮ್ ಎಂಬಲ್ಲಿಂದ ಜೂ. 23ರಿಂದ ಕಾಣೆಯಾಗಿದ್ದ ಝುಲೇಖಾ (60) ಎಂಬವರು ಬುಧವಾರ ನಗರದ ಕೇಂದ್ರ ರೈಲು ನಿಲ್ದಾಣದಲ್ಲಿ ಪತ್ತೆಯಾಗಿದ್ದಾರೆ. ಇದರೊಂದಿಗೆ ಕಳೆದ 3 ತಿಂಗಳಿನಿಂದ ಆತಂಕಗೊಂಡಿದ್ದ ಮನೆ ಮಂದಿ ಇದೀಗ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಮಧ್ಯಮ ವರ್ಗ ಕುಟುಂಬದ ಝುಲೇಖಾ ಮೂಗಿಯಾಗಿದ್ದು, ಮನೆಯಲ್ಲಿ ಒಂಟಿಯಾಗಿ ಜೀವಿಸುತ್ತಿದ್ದರು. ಕಳೆದ ರಮಝಾನ್‌ನಲ್ಲಿ ಈದುಲ್ ಫಿತ್ರ್‌ಗಾಗಿ ಹೆಮ್ಮಾಡಿಯಲ್ಲಿರುವ ತಮ್ಮ ಮೊಮ್ಮಕ್ಕಳಿಗೆ ನೀಡಲೆಂದು ಹೊಸ ಬಟ್ಟೆಬರೆಯೊಂದಿಗೆ ಮನೆಯಿಂದ ಜೂ. 23ರಂದು ಹೊರಟಿದ್ದರು. ಆ ಬಳಿಕ ಇವರು ಹೆಮ್ಮಾಡಿಗೂ ತಲುಪದೆ ಮನೆಗೂ ಮರಳದೆ ಕಾಣೆಯಾಗಿದ್ದರು.

ಝುಲೇಖಾರ ಕುಟುಂಬಸ್ಥರು ಮಂಗಳೂರಿನ ಜನಸಂದಣಿ ಪ್ರದೇಶ, ಮಸೀದಿ, ರೈಲು ನಿಲ್ದಾಣದಲ್ಲಿ ಫ್ಲೆಕ್ಸ್ ಹಿಡಿದು ನಿಂತು ಪತ್ತೆಗಾಗಿ ಸಾರ್ವಜನಿಕರ ಸಹಾಯ ಯಾಚಿಸತೊಡಗಿದ್ದರು. ಅಲ್ಲದೆ ಝುಲೇಖಾ ಹಾಗೂ ಅವರ ಸಹೋದರಿಯ ಮಕ್ಕಳು ಮಂಗಳೂರಿನಲ್ಲಿ ತಿಂಗಳ ಕಾಲ ಹುಡುಕಾಡಿದ್ದರು.

ಬುಧವಾರ ಮಧ್ಯಾಹ್ನ ಸುಮಾರು 1:15ರ ವೇಳೆಗೆ ಝುಲೇಖಾ ರೈಲು ನಿಲ್ದಾಣದಲ್ಲಿದ್ದುದನ್ನು ಕಂಡ ಹೋಮ್‌ಗಾರ್ಡ್ಸ್ ಕುದ್ರೋಳಿಯ ರಾಜಶ್ರೀ ತಕ್ಷಣ ಝುಲೇಖಾರ ಸಹೋದರಿಯ ಪುತ್ರ ಸೈಯದ್ ಅಬ್ರಾರ್‌ಗೆ ಮಾಹಿತಿ ನೀಡಿದರಲ್ಲದೆ ರೈಲ್ವೆ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಸಂಜೆಯ ವೇಳೆಗೆ ಪೊಲೀಸರು ಝುಲೇಖಾರನ್ನು ಮನೆ ಮಂದಿಗೆ ಒಪ್ಪಿಸಿದ್ದಾರೆ.

*ಝುಲೇಖಾರಿಗೆ ಬಾಯಿ ಬರುವುದಿಲ್ಲ, ಮಾತು ಕೇಳುವುದಿಲ್ಲ. ಮನೆ ಮಂದಿ ಮೂಕಭಾಷೆಯಲ್ಲೇ ಮಾತನಾಡಿದಾಗ, ನಾನು ಎಲ್ಲೂ ಹೋಗಿಲ್ಲ. ಇಲ್ಲೇ ತಿರುಗಾಡುತ್ತಿದ್ದೆ. ಮಲಗುತ್ತಿದ್ದೆ. ಊಟ ಮಾಡದೆ ಕೆಲವು ದಿನ ಆಯಿತು ಎನ್ನುತ್ತಾ ಕುಟುಂಬಸ್ಥರನ್ನು ಕಂಡ ಸಂತಸದಲ್ಲಿ ಅಪ್ಪಿ ಹಿಡಿದರು.

*ಝುಲೇಖಾ ನಾಪತ್ತೆಯಾದ ಒಂದೆರಡು ದಿನಗಳಲ್ಲಿ ನನಗೆ ಕಾಣಲು ಸಿಕ್ಕಿದ್ದರು. ಅವರನ್ನು ಹಿಡಿಯುವ ಪ್ರಯತ್ನ ನಡೆಸಿದರೂ ಸಾಧ್ಯವಾಗಿರಲಿಲ್ಲ. ಇಂದು ಮಧ್ಯಾಹ್ನ ನಾನು ಕರ್ತವ್ಯದಲ್ಲಿದ್ದಾಗ ಝುಲೇಖಾರನ್ನು ಕಂಡೆ. ಇವರ ನಾಪತ್ತೆಯ ಸುದ್ದಿಯೂ ನನಗೆ ತಿಳಿದಿತ್ತು. ಅದರಂತೆ ನಾನು ಅವರನ್ನು ವಿಚಾರಿಸಿದಾಗ ಸ್ಪಷ್ಟ ಉತ್ತರ ನೀಡಲಿಲ್ಲ. ಅಲ್ಲದೆ, ವಾಟ್ಸ್‌ಆ್ಯಪ್‌ನಲ್ಲಿ ಅವರ ಫೋಟೊ ತೆಗೆದು ಸಂಬಂಧಿ ಅಬ್ರಾರ್‌ಗೆ ಕಳುಹಿಸಿದೆ. ಅಲ್ಲದೆ ವೀಡಿಯೊ ಮೂಲಕ ಮಾತನಾಡಿಸಿದೆ. ಝುಲೇಖಾರನ್ನು ಗುರುತಿಸಿದ ಅಬ್ರಾರ್ ನಾವು ಬರುವವರೆಗೆ ವಶದಲ್ಲಿಟ್ಟುಕೊಳ್ಳಿ ಎಂದು ಸೂಚಿಸಿದರು. ಅದರಂತೆ ನಾನು ರೈಲ್ವೆ ಪೊಲೀಸರಿಗೆ ಹಸ್ತಾಂತರಿಸಿದೆ ಎಂದು ಹೋಮ್‌ಗಾರ್ಡ್ಸ್ ರಾಜಶ್ರೀ ಹೇಳಿದರು.

*ನಮ್ಮ ಕುಟುಂಬದ ಹಿರಿಯ ಮಹಿಳೆ ಸಿಕ್ಕಿದ್ದು ನಮಗೆ ತುಂಬಾ ಸಂತಸವಾಗಿದೆ. ಅವರು ಮರಳಿ ನಮ್ಮನ್ನು ಸೇರುವ ವಿಶ್ವಾಸವೇ ಇರಲಿಲ್ಲ. ಆದರೆ ಅದಿಂದು ಕೈಗೂಡಿದೆ ಎಂದು ಕುಟುಂಬಸ್ಥರಾದ ಅಬ್ರಾರ್ ಮತ್ತು ಅಬ್ದುಲ್ ರವೂಫ್ ಹೇಳಿದರು.

*ಬಹುಮಾನ ಹಸ್ತಾಂತರ: ಈ ಸಂದರ್ಭ ಕುಟುಂಬಸ್ಥರು ಹೋಮ್‌ಗಾರ್ಡ್ಸ್ ರಾಜಶ್ರೀಗೆ 10 ಸಾವಿರ ರೂ. ಬಹುಮಾನ ಹಸ್ತಾಂತರಿಸಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News