ಆ.27ರಂದು ಸಿಬಿಒಒ ಹಾಲ್‌ನಲ್ಲಿ ಉಚಿತ ಬ್ಯಾಂಕಿಂಗ್ ಪರೀಕ್ಷಾ ಪೂರ್ವ ತರಬೇತಿ ಶಿಬಿರ
ಮಂಗಳೂರು, ಆ.23: ಕಾರ್ಪೋರೇಷನ್ ಬ್ಯಾಂಕ್ ಅಧಿಕಾರಿಗಳ ಸಂಘಟನೆ ವತಿಯಿಂದ ಬ್ಯಾಂಕಿಂಗ್ ಪರೀಕ್ಷಾ ಪೂರ್ವ ತರಬೇತಿ ಕಾರ್ಯಕ್ರಮ ಆ. 27ರಂದು ಪೂರ್ವಾಹ್ನ 10ಕ್ಕೆ ನಗರದ ಕೊಡಿಯಲ್‌ಬೈಲ್‌ನಲ್ಲಿರುವ ಸಿಬಿಒಒ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಸಿಬಿಒಒ ಪ್ರಧಾನ ಕಾರ್ಯದರ್ಸಿ ಸತೀಶ್ ಶೆಟ್ಟಿ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಉಚಿತ ತರಬೇತಿ ಶಿಬಿರ ಇದಾಗಿದೆ. ಬ್ಯಾಂಕಿಂಗ್ ಪರೀಕ್ಷೆ ನಡೆಸುವ ಬ್ಯಾಂಕ್ ಸಿಬಂದಿ ನೇಮಕಾತಿ ಸಂಸ್ಥೆ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಖಾಲಿ ಇರುವ 3,562 ಪ್ರೊಬೆಷನರಿ ಅಧಿಕಾರಿಗಳ ಹುದ್ದೆಗಳ ನೇಮಕಾತಿಗಾಗಿ ಆನ್‌ಲೈನ್ ಮುಖಾಂತರ ಅರ್ಜಿ ಆಹ್ವಾನಿಸಿದೆ.
ಈ ಹಿನ್ನೆಲೆಯಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಲ್ಲೆಯ ಉದ್ಯೋಗಾಕಾಂಕ್ಷಿಗಳ ಅನುಕೂಲಕ್ಕಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪದವಿ ಪೂರ್ಣಗೊಳಿಸಿದವರು ಇದರಲ್ಲಿ ಪಾಲ್ಗೊಳ್ಳಬಹುದು. ಬ್ಯಾಂಕಿಂಗ್ ಸ್ಪರ್ಧಾತ್ಮಕ ಪರೀಕ್ಷೆಗಳ ಅಂಕಣಕಾರ, ಸಂಪನ್ಮೂಲ ವ್ಯಕ್ತಿ ಆರ್.ಕೆ.ಬಾಲಚಂದ್ರ ಕಾರ್ಯಾಗಾರ ನಡೆಸಿಕೊಡಲಿದ್ದಾರೆ ಎಂದವರು ತಿಳಿಸಿದರು.
ಮೊದಲು ಹೆಸರು ನೋಂದಾಯಿಸಿದ ನೂರು ಮಂದಿಗೆ ಮಾತ್ರ ಅವಕಾಶವಿದ್ದು, ವಿದ್ಯಾರ್ಥಿಗಳು ಆದಷ್ಟು ಬೇಗ ತಮ್ಮ ಹೆಸರು ನೋಂದಾಯಿಸಬೇಕು. ನೋಂದಣಿಗಾಗಿ 0824-2422712/501, 9886649849, 9844218283 ಸಂಪರ್ಕಿಸಬಹುದು ಎಂದರು.
ಕರಾವಳಿ ಭಾಗದಿಂದ ಬ್ಯಾಂಕಿಂಗ್ ಕ್ಷೇತ್ರಕ್ಕೆ ಬರುವವರ ಸಂಖ್ಯೆ ಕಡಿಮೆ ಇದೆ. ಹೆಚ್ಚಿನ ಮಂದಿ ಅರ್ಜಿ ಹಾಕುವಲ್ಲಿಯೇ ತಪ್ಪುತ್ತಾರೆ. ಉಚಿತ ಶಿಬಿರದಲ್ಲಿ ಎಲ್ಲಾ ಪೂರಕ ಮಾಹಿತಿಯನ್ನು ನೀಡಲಾಗುವುದು ಎಂದು ಆರ್.ಕೆ.ಬಾಲಚಂದ್ರ ವಿವರಿಸಿದರು.