ಪರಿಸರ ಸ್ನೇಹಿ, ಮಿತವ್ಯಯಿ ರಟ್ಟಿನ ಗಣಪತಿ
Update: 2017-08-23 22:04 IST
ಉಡುಪಿ, ಆ.23: ಪ್ರತಿ ವರ್ಷದಂತೆ ಈ ವರ್ಷವೂ ಮುಲ್ಕಿ ಪಂಜಿನಡ್ಕದ ಕೆ.ಪಿ.ಎಸ್.ಕೆ. ಅನುದಾನಿತ ಪ್ರೌಢ ಶಾಲೆಯಲ್ಲಿ ಚಿತ್ರಕಲಾ ಅಧ್ಯಾಪಕ ವೆಂಕಿ ಪಲಿಮಾರು ಮಾರ್ಗದರ್ಶನದಲ್ಲಿ ಶಾಲೆಯ ವಿದ್ಯಾರ್ಥಿಗಳು ರಟ್ಟಿನ ಪೆಟ್ಟಿಗೆಯಲ್ಲಿ ಸುಮಾರು 4 ಅಡಿ ಎತ್ತರದ ಗಣೇಶನ ಮೂರ್ತಿಯನ್ನು ರಚಿಸಿದ್ದಾರೆ.
ಮಕ್ಕಳು ತಮ್ಮ ತಮ್ಮ ಮನೆಗಳಿಂದ ತಂದ ಬೇರೆ ಬೇರೆ ಆಕಾರ,ವಿವಿಧ ಗಾತ್ರದ ರಟ್ಟಿನ ಪೆಟ್ಟಿಗೆಗಳಿಂದ ಗಣೇಶನನ್ನು ರಚಿಸಲಾಗಿದೆ. ಈ ಗಣೇಶನ ವಿಗ್ರಹಕ್ಕೆ ಕೆಲವು ರಟ್ಟಿನ ಪೆಟ್ಟಿಗೆಗಳು, 2 ಕೆಜಿ ಫೆವಿಕೋಲ್ ಮತ್ತು ಸ್ವಲ್ಪಬಣ್ಣವನ್ನು ಮಾತ್ರ ಬಳಸಿದ್ದು ಪರಿಸರ ಸ್ನೇಹಿ ಜೊತೆಗೆ ಮಿತವ್ಯಯ ಗಣಪ ಇದಾಗಿದೆ.
ಆ.24ರ ಗುರುವಾರ ಶಾಲೆಯ ಮುಖ್ಯೋಪಾಧ್ಯಾಯರಾದ ನಾಗಭೂಷಣ ರಾವ್ ಈ ಗಣೇಶನನ್ನು ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸಿಬ್ಬಂದಿಗಳ ಸಮ್ಮುಖದಲ್ಲಿ ಅನಾವರಣಗೊಳಿಸಲಿದ್ದು, ನಂತರ 10 ದಿನಗಳ ಕಾಲ ಸಾರ್ವಜನಿಕರ ವೀಕ್ಷಣೆಗೆ ಮುಕ್ತ ಅವಕಾಶವಿರುತ್ತದೆ ಎಂದು ಪ್ರಕಟಣೆ ತಿಳಿಸಿದೆ.