ಜಿಲ್ಲೆಯಲ್ಲಿ ತಕ್ಷಣ ಮರಳುಗಾರಿಕೆ ಪ್ರಾರಂಭಿಸಲು ಬಿಜೆಪಿ ಮನವಿ

Update: 2017-08-23 16:37 GMT

ಉಡುಪಿ, ಆ.23: ಜಿಲ್ಲೆಯಲ್ಲಿ ಕಳೆದ 2 ವರ್ಷಗಳಿಂದ ಮರಳಿನ ಬಗ್ಗೆ ಜಿಲ್ಲಾಡಳಿತ ಹಾಗೂ ರಾಜ್ಯ ಸರಕಾರ ಯಾವುದೇ ಸ್ಪಷ್ಟ ನಿರ್ಧಾರ ತೆಗೆದು ಕೊಳ್ಳದೇ ಇರುವುದರಿಂದ ಜನರು, ಕಟ್ಟಡ ಕಾರ್ಮಿಕರು ಮತ್ತು ಬಡಜನತೆ ತೀವ್ರ ತೊಂದರೆಗೆ ಒಳಗಾಗಿದ್ದಾರೆ. ಸಿಆರ್‌ಝಡ್ ಪ್ರದೇಶದಲ್ಲಿ ಮರಳುಗಾರಿಕೆ ಇದ್ದ ಅಡೆತಡೆಗಳೆಲ್ಲ ನಿವಾರಣೆಯಾಗಿರುವುದರಿಂದ ಜಿಲ್ಲೆಯಲ್ಲಿ ತಕ್ಷಣದಿಂದ ಮರಳುಗಾರಿಕೆ ಪ್ರಾರಂಭಿಸುವಂತೆ ಜಿಲ್ಲಾ ಬಿಜೆಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರಿಗೆ ಮನವಿ ನೀಡಿ ಒತ್ತಾಯಿಸಿದೆ.

ಚೆನೈಯಲ್ಲಿರುವ ಹಸಿರು ಪೀಠದಲ್ಲಿ ಸಿಆರ್‌ಝಡ್ ವ್ಯಾಪ್ತಿಗೆ ಸಂಬಂಧಿಸಿದಂತೆ ಕೋರ್ಟಿನ ತಡೆಯಾಜ್ಞೆ 6 ತಿಂಗಳ ಹಿಂದೆ ತೆರವುಗೊಂಡಿದೆ. ಇದೇ ಆ.5ರಂದು ಜಿಲ್ಲೆಯಲ್ಲಿ ಸಿಆರ್‌ಝಡ್ ವ್ಯಾಪ್ತಿಯಲ್ಲಿ ಮರಳುಗಾರಿಕೆಗೆ ಪರಿಸರ ಇಲಾಖೆ ಯಿಂದ ನಿರಾಪೇಕ್ಷಣಾ ಪತ್ರ ದೊರಕಿದೆ. ಆ.7ರಿಂದ ಮರಳು ತೆಗೆಯುವ ಬಗ್ಗೆ ಪರವಾನಿಗೆ ನೀಡುವ ಅವಕಾಶ ಜಿಲ್ಲಾಡಳಿತಕ್ಕಿತ್ತು ಎಂದು ಮನವಿಯಲ್ಲಿ ಹೇಳಲಾಗಿದೆ.

ಆದರೆ ಜಿಲ್ಲಾಡಳಿತ ಪರವಾನಿಗೆದಾರರನ್ನು ಗುರುತಿಸುವ ಬಗ್ಗೆ ವಿಳಂಬ ನೀತಿ ಯನ್ನು ಅನುಸರಿಸುತ್ತಿದೆ ಎಂದು ದೂರಿರುವ ಬಿಜೆಪಿ, ಜಿಲ್ಲಾ ಉಸ್ತುವಾರಿ ಸಚಿವರು ಹಂತಹಂತವಾಗಿ ಮರಳುಗಾರಿಕೆಯನ್ನು ನಡೆಸುವುದಾಗಿ ಹೇಳಿ ಜನರ ಹಾದಿ ತಪ್ಪಿಸುತ್ತಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತವು ಮರಳುಗಾರಿಕೆಗೆ ಹೊಸ ಅರ್ಜಿಗಳನ್ನು ಸ್ವೀಕರಿಸುತ್ತಿದ್ದು, ಕಳೆದ ಸುಮಾರು 25 ವರ್ಷಗಳಿಂದ ಸಾಂಪ್ರದಾಯಿಕವಾಗಿ ಮರಳುಗಾರಿಕೆ ಮಾಡುತ್ತಿರುವ ಎಲ್ಲರನ್ನೂ ಗೊಂದಲ ದಲ್ಲಿರಿಸಿದೆ ಎಂದಿದೆ.

ಇಡೀ ಜಿಲ್ಲೆಯಲ್ಲಿ ಸುಮಾರು 170 ಮಂದಿ ಸಾಂಪ್ರದಾಯಿಕ ಮರಳುಗಾರಿಕೆ ಮಾಡುತ್ತಿದ್ದವರಲ್ಲಿ ಸುಮಾರು 45 ಜನರ ಮೇಲೆ ಜಿಲ್ಲಾಡಳಿತ ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ಕೇವಿಯಟ್ ಹಾಕಿರುವುದು ಸಂಶಯಕ್ಕೆ ಎಡೆಮಾಡಿ ಕೊಟ್ಟಿದೆ. ಈ 45 ಜನರನ್ನೇ ಗುರುತಿಸಿ ಜಿಲ್ಲಾಡಳಿತ ಕೇವಿಯಟ್ ಹಾಕಿರುವುದರ ಹಿಂದಿನ ಕಾರಣ ತಿಳಿದುಬಂದಿಲ್ಲ. ಈ ಕೇವಿಯೆಟ್ ಅರ್ಜಿಯ ಹಿಂದೆ ಕಾಂಗ್ರೆಸ್ಸಿಗರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಕೈವಾಡ ಸ್ಪಷ್ಟವಾಗಿ ಕಾಣುತ್ತಿದೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ.

ಆದುದರಿಂದ ಜಿಲ್ಲೆಯಲ್ಲಿ ಮರಳುಗಾರಿಕೆ ಆರಂಭಿಸುವ ಸಲುವಾಗಿ ಜಿಲ್ಲೆಯ ಜನರ ಹಿತದೃಷ್ಟಿಯಿಂದ ಈ ಹಿಂದಿನ ಜಿಲ್ಲಾಧಿಕಾರಿಗಳಿಂದ ಪರವಾನಿಗೆ ಪಡೆದು ಮರಳುಗಾರಿಕೆ ಮಾಡುತ್ತಿದ್ದ ಎಲ್ಲಾ 170 ಜನರಿಗೂ ಮರಳು ತೆಗೆಯಲು ಪರವಾನಿಗೆ ನೀಡಿ ಜಿಲ್ಲೆಯ ಜನರಿಗೆ ಮರಳು ಸಿಗುವಂತೆ ಮಾಡಿಕೊಡಬೇಕೆಂದು ಜಿಲ್ಲಾ ಬಿಜೆಪಿ ಮನವಿ ಮಾಡಿದೆ.

ಈ ಮನವಿಯ ಕುರಿತು ತಾವು ತಕ್ಷಣ ಕ್ರಮವನ್ನು ಕೈಗೊಳ್ಳಬೇಕು, ಅಧಿಕಾರಿ ವರ್ಗ ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯಬಾರದು ಹಾಗೂ ಜನರಿಗೆ ನ್ಯಾಯ ಒದಗಿಸಿಕೊಡಬೇಕು. ಈ ಕುರಿತು ಆ.28ರ ಸೋಮವಾರದೊಳಗೆ ತಾವು ಯಾವುದೇ ಕ್ರಮಕೈಗೊಳ್ಳದಿದ್ದರೆ ಬಿಜೆಪಿ ವತಿಯಿಂದ ಜಿಲ್ಲೆಯ ಸಂತ್ರಸ್ಥ ರನ್ನು ಒಗ್ಗೂಡಿಸಿಕೊಂಡು ಬೃಹತ್ ಜನಾಂದೋಲನವನ್ನು ಕೈಗೊಳ್ಳಲಾಗುವುದು. ಇದಕ್ಕೆ ಜಿಲ್ಲಾಡಳಿತ ಸಂಪೂರ್ಣ ಜವಾಬ್ದಾರವಾಗಿರುತ್ತದೆ ಎಂದು ಮನವಿಯಲ್ಲಿ ಎಚ್ಚರಿಸಲಾಗಿದೆ.

ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ ನೇತೃತ್ವದ ನಿಯೋಗದಲ್ಲಿ ವಿಧಾನಸಭೆ ವಿಪಕ್ಷ ಮುಖ್ಯ ಸಚೇತಕ, ಶಾಸಕ ವಿ. ಸುನಿಲ್ ಕುಮಾರ್, ಮಾಜಿ ಶಾಸಕ ಕೆ. ರಘುಪತಿ ಭಟ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಯಶ್ ಪಾಲ್ ಸುವರ್ಣ, ಕುತ್ಯಾರು ನವೀನ್ ಶೆಟ್ಟಿ, ಕುಯಿಲಾಡಿ ಸುರೇಶ್ ನಾಯಕ್, ಬಿ.ರವಿ ಅಮೀನ್, ಪ್ರವೀಣ್ ಕುಮಾರ್ ಶೆಟ್ಟಿ ಕಪ್ಪೆಟ್ಟು, ಪ್ರಭಾಕರ ಪೂಜಾರಿ, ಉಪೇಂದ್ರ ನಾಯಕ್ ಮೊದಲಾದವರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News